ಶ್ರೀಕೃಷ್ಣ ‘ಸಮಸ್ಯೆ ಬಂದರೆ ಬರುವೆ’ ಎಂದಿದ್ದ ಈಗ ಕೃಷ್ಣನ ರೂಪದಲ್ಲಿ ಮೋದಿ ಬಂದಿದ್ದಾರೆ, ಬಿಜೆಪಿಗನ ಹೇಳಿಕೆಗೆ ಕಾಂಗ್ರೆಸ್ ಕಿಡಿ
ವಿಧಾನ ಪರಿಷತ್ತು(ಸೆ.22): ಕುರುಕ್ಷೇತ್ರ ಯುದ್ಧದ ನಂತರ ಶ್ರೀ ಕೃಷ್ಣ ಅಸ್ತಂಗತನಾಗುವಾಗ, ‘ಭರತ ಭೂಮಿಯ ಸಮಸ್ಯೆ ಎಲ್ಲ ಈಗ ಮುಗಿದಿದೆ. ಸಮಸ್ಯೆ ಬಂದರೆ ಮತ್ತೆ ಬರುತ್ತೇನೆ ಜನ್ಮ ತಾಳುತ್ತೇನೆ’ ಎಂದಿದ್ದ. ಹಾಗಾಗಿ ಈಗ ಕೃಷ್ಣನ ರೂಪದಲ್ಲಿ ನರೇಂದ್ರ ಮೋದಿ ಅವರು ಬಂದಿದ್ದಾರೆ ಎಂದು ಬಿಜೆಪಿ ಸದಸ್ಯ ಪ್ರಾಣೇಶ್ ಹೇಳಿದ ಮಾತು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಬುಧವಾರ ನಿಯಮ 68ರ ಅಡಿ ಮಳೆಹಾನಿ ವಿಷಯದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಪ್ರಾಣೇಶ್ ಅವರು, ‘ನಮ್ಮ ಪೂರ್ವಿಕರು ಭವಿಷ್ಯದ ದೃಷ್ಟಿಯಿಂದ ಯೋಜನೆಗಳನ್ನು ತರುತ್ತಿದ್ದರು. ಆದರೆ ನಮ್ಮ ಕಾಲದಲ್ಲಿ ಕೇವಲ ತಾತ್ಕಾಲಿಕ ಯೋಜನೆಗಳನ್ನು ಮಾತ್ರ ತರುತ್ತಿದ್ದೇವೆ’ ಎಂದರು.
ಇದೇ ಸಂದರ್ಭದಲ್ಲಿ ಮಹಾಭಾರತ ಕುರಿತು ಪ್ರಸ್ತಾಪಿಸಿದ ಅವರು, ‘ಕೃಷ್ಣನು ಭರತ ಖಂಡ ಸಂಕಷ್ಟದಲ್ಲಿದ್ದಾಗ ಪುನರ್ಜನ್ಮ ಎಂದಿದ್ದ. ಈಗ ಭಾರತಕ್ಕೆ ಸಂಕಷ್ಟಬಂದಿದ್ದು ಕೃಷ್ಣನ ರೂಪದಲ್ಲಿ ನರೇಂದ್ರ ಮೋದಿ ಬಂದಿದ್ದಾರೆ’ ಎಂದರು. ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ‘ಮೋದಿ ವಿಷ್ಯ ಇರಲಿ, ಮೊದಲು ಮೋರಿ ಕ್ಲೀನ್ ಮಾಡಲಿ’ ಎಂದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಇಂದು ಭ್ರಷ್ಟಾಚಾರಿಗಳ ಹೆಸರು ಬಯಲು: ಕಾಂಗ್ರೆಸ್‌ಗೆ ತಿರುಗೇಟು ಕೊಟ್ಟ ಸಿಎಂ
‘ವಿಶ್ವ ಗುರು ಬಂದಿದ್ದಕ್ಕೆ ಇಡೀ ವಿಶ್ವಕ್ಕೆ ಕೋವಿಡ್ ಬಂದಿದ್ದು. ವ್ಯಾಕ್ಸಿನ್ ಮೊದಲೇ ಬಂದಿದ್ದರೆ ಲಕ್ಷಾಂತರ ಜನ ಬದುಕುತ್ತಿದ್ದರು. ವ್ಯಾಕ್ಸಿನ್ ಕೊಡಲು ಆರು ತಿಂಗಳು ಮಾಡಿದರು.ಅದಕ್ಕೆ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡರು. ಆರ್ಟಿಕಲ್ 370 ತೆಗೆದಿದ್ದರಿಂದ ಕಾಶ್ಮೀರಿ ಪಂಡಿತರ ಹತ್ಯೆಯಾಗುತ್ತಿದೆ. ಅಲ್ಲಿ ಒಂದಿಂಚೂ ಭೂಮಿ ಖರೀದಿಗೂ ಯಾರು ಮುಂದೆ ಬರುತ್ತಿಲ್ಲ’ ಎಂದು ವ್ಯಂಗ್ಯವಾಡಿದರು. ಲಸಿಕೆ ಟೀಕೆಗೆ ತಿರುಗೇಟು ನೀಡಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ‘ಕಾಂಗ್ರೆಸ್ ಪಕ್ಷವೇ ಲಸಿಕೆ ವಿಚಾರದಲ್ಲಿ ದಾರಿ ತಪ್ಪಿಸಿತು’ ಎಂದರು.