
ಬೆಂಗಳೂರು(ಸೆ.02): ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಇದೇನಾ ಅಚ್ಛೇ ದಿನ್ ಎಂದು ಪ್ರಶ್ನಿಸಿದೆ. ಅಲ್ಲದೆ ದರ ಏರಿಕೆ ವಿರುದ್ಧ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಲು ನಿರ್ಧರಿಸಿದೆ.
ಕೇಂದ್ರ ಸರ್ಕಾರ ಅಡುಗೆ ಅನಿಲ ದರ ಏರಿಕೆ ಘೋಷಣೆ ಬೆನ್ನಲ್ಲೇ ಪ್ರತ್ಯೇಕವಾಗಿ ಮಾಧ್ಯಮಗಳೊಂದಿಗೆ ಮಾತ ನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು, ಬೆಲೆ ಏರಿಕೆಯಿಂದ ಜನರ ಜೀವನ ದುಸ್ತರಗೊಂಡಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಆಟೋ ಗ್ಯಾಸ್ ಜೊತೆಗೆ ಅಡುಗೆ ಎಣ್ಣೆ, ಬೇಳೆ ಕಾಳುಗಳ ಬೆಲೆಯೂ ಗಗನಕ್ಕೆ ಏರಿದೆ. ಹೀಗಾಗಿ ಅನಿವಾರ್ಯವಾಗಿ ಜನರ ಪರ ಬೀದಿಗೆ ಇಳಿಯಬೇಕಾಗಿದೆ ಎಂದರು.
ಬೆಂಗಳೂರಿನಲ್ಲಿ ಸಚಿನ್ ಪೈಲಟ್, ಕೇಂದ್ರ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ
ಚೆಲ್ಲಾಟ- ಡಿಕೆಶಿ ಕಿಡಿ:
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೇಂದ್ರ ಸರ್ಕಾರವು ಜನರ ಜೀವನ ಜೊತೆ ಚೆಲ್ಲಾಟ ಆಡುತ್ತಿದ್ದು ಅಗತ್ಯ ವಸ್ತುಗಳ ದರ ಏರಿಕೆ ಮೂಲಕ ಬಡವರನ್ನು ಲೂಟಿ ಮಾಡುತ್ತಿದೆ. ಹೀಗಾಗಿ ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ ಬೃಹತ್ ಹೋರಾಟ ನಡೆಸಲು ನಿರ್ಧರಿಸಿದ್ದೇವೆ. ಈ ಕುರಿತು ರೂಪರೇಷೆ ಸಿದ್ಧಪಡಿಸಲು ಸೆ.5, 6 ರಂದು ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.