ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಟ್ವಿಸ್ಟ್, ಗಾಂಧಿ ಕುಟುಂಬದ ಅಭ್ಯರ್ಥಿಯಾಗಿ ಖರ್ಗೆ?

By Suvarna News  |  First Published Sep 30, 2022, 9:15 AM IST

ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ದಿನಕ್ಕೊಂದು ತಿರುವು, ರಾಜಕೀಯ ತಲ್ಲಣಕ್ಕೆ ಕಾರಣವಾಗುತ್ತಿದೆ. ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಇದೀಗ ರೇಸ್‌ಗೆ ಕಾಂಗ್ರೆಸ್ ಹಿರಿಯ ನಾಯಕ, ಗಾಂಧಿ ಕುಟುಂಬದ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಇಂದು ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ. ಈ ಮೂಲಕ ಸಂಪೂರ್ಣ ಚುನಾವಣೆ ಇದೀಗ ಹೊಸ ದಿಕ್ಕಿನತ್ತ ತಿರುಗಿದೆ.
 


ನವದೆಹಲಿ(ಸೆ.30): ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಪಕ್ಷದೊಳಗಿನ ಪ್ರಜಾಪ್ರಭುತ್ವ ಸಾಬೀತುಪಡಿಸುವುದಕ್ಕಿಂತ ಬಂಡಾಯವನ್ನೇ ಸೃಷ್ಟಿಸುತ್ತಿದೆ. ಈ ಅಧ್ಯಕ್ಷ ಚುನಾವಣೆಯಿಂದ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿರುಗಾಳಿ ಎದ್ದಿದೆ. ಗಾಂಧಿ ಕುಟುಂಬದ ಆಪ್ತ ಹಾಗೂ ಒಂದಕ್ಷ ಬಿಡದೇ ಪಾಲಿಸುತ್ತಿದ್ದ ಸಿಎಂ ಅಶೋಕ್ ಗೆಹ್ಲೋಟ್ ಇದೀಗ ರೆಬೆಲ್ ನಾಯಕನಾಗಿದ್ದಾರೆ. ಹೀಗಾಗಿ ಗಾಂಧಿ ಕುಟುಂಬ ಇದೀಗ ಮತ್ತೊರ್ವ ಆಪ್ತ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಣಕ್ಕಿಳಿಸಲು ಪ್ಲಾನ್ ಮಾಡಿದೆ. ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮಧ್ಯಾಹ್ನ 3 ಗಂಟೆ ಒಳಗೆ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿದೆ. ಈ ಮೂಲಕ ಅಶೋಕ್ ಗೆಹ್ಲೋಟ್ ಕಣದಿಂದ ಹಿಂದೆ ಸರಿದ ಬಳಿಕ, ಗಾಂಧಿ ಕುಟುಂಬದ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗುತ್ತಿದೆ. ಇಷ್ಟೇ ಅಲ್ಲ ಇಡೀ ಚುನಾವಣೆ ಇದೀಗ ಹೊಸ ದಿಕ್ಕಿನತ್ತ ಸಾಗಿದೆ. ಕಾರಣ ಕಣದಲ್ಲಿರುವ ಶಶಿ ತರೂರ್ ಹಾಗೂ ದಿಗ್ವಿಜಯ್ ಸಿಂಗ್‌ಗಿಂತ ಇದೀಗ ಮಲ್ಲಿಕಾರ್ಜುನ ಪರವಾಗಿ ಹೆಚ್ಚು ಮತಗಳು ಬೀಳಲಿವೆ. ಇಷ್ಟೇ ಅಲ್ಲ ಮುಂದಿನ ಕಾಂಗ್ರೆಸ್ ಅಧ್ಯಕ್ಷರಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗುತ್ತಿದೆ.

ಕೊನೆಯವರೆಗೆ ಕಾದು ನೋಡುವ ತಂತ್ರ ಅನುಸರಿಸಿದ ಕಾಂಗ್ರೆಸ್ ಹೈಕಮಾಂಡ್ ಇದೀಗ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಆಪ್ತರೇ ಇಲ್ಲದಾಗಿದೆ. ಇದ್ದ ಅಶೋಕ್ ಗೆಹ್ಲೋಟ್ ತಮ್ಮ ಸಿಎಂ ಪಟ್ಟ ಅಲುಗಾಡುತ್ತಿದೆ ಎಂದು ಅರಿತಾಗ ಗಾಂಧಿ ಕುಟುಂಬದ ವಿರುದ್ಧ ಸಿಡಿದು ನಿಂತು, ಇದೀಗ ಕಣದಿಂದ ಹೊರಗುಳಿದಿದ್ದಾರೆ. ಇನ್ನು ಶಶಿ ತರೂರ್ ಜಿ23 ಗುಂಪಿನಲ್ಲಿ ಕಾಣಿಸಿಕೊಂಡ ನಾಯಕ. ದಿಗ್ವಿಜಯ್ ಸಿಂಗ್ ಕೈಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿದರೆ, ವಿವಾದಾತ್ಮಕ ಹೇಳಿಕೆಯಿಂದ ಇರುವ ಸ್ಥಾನವನ್ನು ಕಾಂಗ್ರೆಸ್ ಕಳೆದುಕೊಳ್ಳಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಹೀಗಾಗಿ ಕಳೆದ ರಾತ್ರಿ ಮಹತ್ವದ ಸಭೆ ನಡೆಸಿದ ಕಾಂಗ್ರೆಸ್ ಹೈಕಮಾಂಡ್, ಆಪ್ತ ಮಲ್ಲಿಕಾರ್ಜುನ ಖರ್ಗೆಗೆ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಸೂಚಿಸಿದ್ದಾರೆ. ಗಾಂಧಿ ಕುಟುಂಬದ ಮಾತಿನಂತೆ ಖರ್ಗೆ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

Tap to resize

Latest Videos

ಅಧ್ಯಕ್ಷ ಯಾರಾದರೂ ನಾವು ಗಾಂಧಿ ನಾಯಕತ್ವದಡಿ ಕೆಲಸ, ಕಾಂಗ್ರೆಸ್‌ಗೆ ಸಂಕಷ್ಟ ತಂದ ದಿಗ್ವಿಜಯ್ ಹೇಳಿಕೆ!

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ಮಲ್ಲಿಕಾರ್ಜುನ ಖರ್ಗೆ ಗಾಂಧಿ ಕುಟುಂಬದ ಪರಮಾಪ್ತ. ಇದುವರೆಗೂ ಗಾಂಧಿ ಕುಟುಂಬದ ವಿರುದ್ಧ ಒಂದು ಅಕ್ಷರ ಮಾತನಾಡಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಅತ್ಯಂತ ಶಿಸ್ತಿನಿಂದ ನಡೆದುಕೊಂಡ ಹಿರಿಯ ನಾಯಕರಾಗಿದ್ದಾರೆ. ತಮ್ಮ ಸುದೀರ್ಘ ಕಾಂಗ್ರೆಸ್ ಪಕ್ಷದಲ್ಲಿನ ಪಯಣಧಲ್ಲಿ ಒಂದೇ ಒಂದು ಬಾರಿ ಪಕ್ಷದ ವಿರುದ್ಧ ಮಾತನಾಡಿಲ್ಲ. ಯಾವುದೇ ಕ್ಲಿಷ್ಟ ಸಂದರ್ಭದಲ್ಲೂ ಪಕ್ಷದ ಪರವಾಗಿ ಮಾತನಾಡಿದ್ದಾರೆ. ಗಾಂಧಿ ಕುಟುಂಬದ ಆರೋಪಗಳಿಗೆ ಸದನದಲ್ಲಿ ಹಾಗೂ ಹೊರಗೆ ಸಮರ್ಥವಾಗಿ ತಿರುಗೇಟು ನೀಡಿದ ನಾಯಕರಲ್ಲಿ ಮಲ್ಲಿಕಾರ್ಜುನ ಖರ್ಗೆ ಒಬ್ಬರಾಗಿದ್ದಾರೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಗಾಂಧಿ ಕುಟುಂಬ ಸೂಚಿಸಿದೆ.

ಜಿ23 ನಾಯಕರ ಗುಂಪಿನ ಮತ್ತೊಬ್ಬ ನಾಯಕ ಮನೀಶ್ ತಿವಾರಿ ಕೂಡ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿವೆ.  ಇನ್ನೊಂದೆಡೆ ದಿಗ್ವಿಜಯ ಸಿಂಗ್‌ ಕಣಕ್ಕಿಳಿಯುವುದಾಗಿ ಗುರುವಾರ ಅಧಿಕೃತ ಘೋಷಣೆ ಮಾಡಿದ್ದಾರೆ. ಇನ್ನೊಂದೆಡೆ ಜಾರ್ಖಂಡ್‌ ಮಾಜಿ ಶಾಸಕ ಕೆ.ಎನ್‌. ತ್ರಿಪಾಠಿ ಕೂಡಾ ಸ್ಪರ್ಧೆಗಿಳಿಯುವುದಾಗಿ ಘೋಷಿಸಿದ್ದು, ನಾಮಪತ್ರ ತೆಗೆದುಕೊಂಡು ಹೋಗಿದ್ದಾರೆ.

ಕಾಂಗ್ರೆಸ್‌ನಲ್ಲಿ ಮತ್ತೊಂದು ಗುದ್ದಾಟಕ್ಕೆ ವೇದಿಕೆ ರೆಡಿ, ಸೋನಿಯಾ ಗಾಂಧಿ ಭೇಟಿಯಾದ ಸಚಿನ್ ಪೈಲೆಟ್!

ಅ.17ಕ್ಕೆ ಚುನಾವಣೆ, 19ಕ್ಕೆ ಫಲಿತಾಂಶ
ನಾಮಪತ್ರ ಹಿಂಪಡೆಯಲು ಅ.8 ಕೊನೆಯ ದಿನವಾಗಿದೆ. ಅ.17 ರಂದು ಎಲ್ಲ ಪ್ರದೇಶ ಕಾಂಗ್ರೆಸ್‌ ಸಮಿತಿಯ ಮುಖ್ಯಕಚೇರಿಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದೆ. ಅ.19ರಂದು ಫಲಿತಾಂಶ ಪ್ರಕಟವಾಗಲಿದೆ.

click me!