ಪ್ರಧಾನ್ ರಾಜೀನಾಮೆ ಕೈ ಗೆಲುವಲ್ಲ! ಅವನ್ಯಾರ್ರೀ ಪ್ರಿಯಾಂಕ್ ಖರ್ಗೆ? ಉಗ್ರರಿಗಷ್ಟೇ ಇವನು ಮಂತ್ರಿಯೇ?: ವಿಜಯೇಂದ್ರ ಕಿಡಿ

Published : Jul 25, 2026, 06:09 PM IST
BY Vijayendra

ಸಾರಾಂಶ

ನೀಟ್ ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿದ್ಯಾರ್ಥಿಗಳ ಹೋರಾಟವನ್ನು ಕಾಂಗ್ರೆಸ್ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಬೆಂಗಳೂರಿನ ಪ್ರತಿಭಟನೆಯಲ್ಲಿ ದೇಶದ್ರೋಹಿ ಘೋಷಣೆಗಳ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ದೇಶಾದ್ಯಂತ ಸಂಚಲನ ಮೂಡಿಸಿರುವ 'ನೀಟ್' (NEET) ಪರೀಕ್ಷಾ ಅಕ್ರಮದ ವಿವಾದ ಹಾಗೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪಗಳ ಮಹಾಪೂರವೇ ಹರಿದುಬಂದಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ತಮ್ಮ ಹೋರಾಟಕ್ಕೆ ಸಿಕ್ಕ ಗೆಲುವು ಎಂದು ಬೀಗುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ವಿದ್ಯಾರ್ಥಿಗಳ ಹೋರಾಟವನ್ನು ತನ್ನ ಸ್ವಾರ್ಥ ರಾಜಕೀಯಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ನೇರ ಆರೋಪ ಮಾಡಿದ್ದಾರೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕಾಂಗ್ರೆಸ್ ಗೆಲುವಲ್ಲ!

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಕುರಿತು ಮಾತನಾಡಿದ ವಿಜಯೇಂದ್ರ, "ಇದನ್ನು ಕಾಂಗ್ರೆಸ್ ನಾಯಕರು ಹಾಗೂ ರಾಜ್ಯದ ಕಾಂಗ್ರೆಸ್ ಪುಡಾರಿಗಳು ತಮ್ಮ ಗೆಲುವು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಇದು ಕಾಂಗ್ರೆಸ್‌ನ ಗೆಲುವಲ್ಲ. ವಿದ್ಯಾರ್ಥಿಗಳ ಪ್ರತಿಭಟನೆಯನ್ನು ದುರುಪಯೋಗಪಡಿಸಿಕೊಂಡು ಕೆಲವು ಸಮಾಜಘಾತುಕ ಶಕ್ತಿಗಳು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವುದನ್ನು ಅರಿತು, ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಜವಾಬ್ದಾರಿ ಹೊತ್ತು ತಾವಾಗಿಯೇ ರಾಜೀನಾಮೆ ನೀಡಿದ್ದಾರೆ. ಲಡಾಖ್‌ನಲ್ಲಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸುವ ಸಂದರ್ಭದಲ್ಲಿ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರು ಸಹ ಇದೇ ಆತಂಕವನ್ನು ವ್ಯಕ್ತಪಡಿಸಿದ್ದರು" ಎಂದರು.

ಮುಂದುವರಿದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಇಡೀ ಪ್ರಕರಣದ ಕುರಿತು ಪಾರದರ್ಶಕ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ, ವಿದೇಶದಲ್ಲಿ ಮೋಜು-ಮಸ್ತಿಯಲ್ಲಿದ್ದ ರಾಹುಲ್ ಗಾಂಧಿ ಅವರು ತಕ್ಷಣವೇ ಓಡಿಬಂದು, ವಿದ್ಯಾರ್ಥಿಗಳ ಹಿತರಕ್ಷಣೆಗಿಂತ ಹೆಚ್ಚಾಗಿ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಈ ಪ್ರತಿಭಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿದರು.

ಅವನ್ಯಾರ್ರೀ ಪ್ರಿಯಾಂಕ್ ಖರ್ಗೆ? ವಿಜಯೇಂದ್ರ ಆಕ್ರೋಶ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ದೇಶದ್ರೋಹದ ಆರೋಪ ಎದುರಿಸುತ್ತಿರುವ ಉಮರ್ ಖಾಲಿದ್ ಪರವಾಗಿ ಘೋಷಣೆ ಕೂಗುತ್ತಿರುವ ಮತ್ತು ಆತನ ಫೋಟೋ ಹಿಡಿದು ಪ್ರದರ್ಶನ ಮಾಡುತ್ತಿರುವ ಘಟನೆಯನ್ನು ಪ್ರಸ್ತಾಪಿಸಿದ ವಿಜಯೇಂದ್ರ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲೇ ಕಿಡಿಕಾರಿದರು.

"ಅವನ್ಯಾರ್ರೀ ಪ್ರಿಯಾಂಕ್ ಖರ್ಗೆ? ಅವನಿಗೆ ತಾಕತ್, ಧಮ್ ಇದ್ದರೆ ಬೆಂಗಳೂರಿನಲ್ಲಿ ಏನು ನಡೆಯುತ್ತಿದೆ ಎಂದು ಮೊದಲು ಬಂದು ನೋಡಲಿ. ಈ ನಾಲಾಯಕ್ ಗೃಹ ಸಚಿವ ಎಲ್ಲಿ ಮಲಗಿದ್ದಾನೆ ಅಂತಾ ಕೇಳಿ. ರಾಜಧಾನಿಯಲ್ಲಿ ಪೊಲೀಸರ ವಿರುದ್ಧವೇ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗುತ್ತಿದ್ದರೂ ಇವರು ಕಣ್ಣುಮುಚ್ಚಿ ಕುಳಿತಿದ್ದಾರೆ. ರಾಜ್ಯದಲ್ಲಿ ಬೆಂಕಿ ಹಚ್ಚಲು ಪ್ರಿಯಾಂಕ್ ಖರ್ಗೆಯಂತಹ ಇಬ್ಬರು ನಾಯಕರು ಹುಟ್ಟಿಕೊಂಡರೆ ಸಾಕು. ಇವರು ಉಗ್ರಗಾಮಿಗಳಿಗೋ ಅಥವಾ ದೇಶದ್ರೋಹಿಗಳಿಗೋ ಮಾತ್ರ ಸಚಿವರಲ್ಲ, ಇಡೀ ರಾಜ್ಯದ ಜನತೆಗೆ ಸಚಿವರು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಬೆಂಗಳೂರಿನ ಕಾನೂನು ಸುವ್ಯವಸ್ಥೆ ಇಷ್ಟು ಹದಗೆಡುತ್ತಿದ್ದರೂ ಇಂತಹ ಬೇಜವಾಬ್ದಾರಿ ನಾಯಕರು ಎಲ್ಲಿ ಮಲಗಿದ್ದಾರೆ?" ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಬಿ.ಕೆ. ಹರಿಪ್ರಸಾದ್ ವಿರುದ್ಧ ವ್ಯಂಗ್ಯ

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಗಳನ್ನು ಬಿ.ಯಿ. ವಿಜಯೇಂದ್ರ ತೀವ್ರವಾಗಿ ವ್ಯಂಗ್ಯವಾಡಿದರು. "ಆ ಪುಣ್ಯಾತ್ಮನಿಗೆ ಆರ್‌ಎಸ್‌ಎಸ್ ಮೇಲೆ ಮುಗಿಬೀಳುವುದನ್ನು ಬಿಟ್ಟರೆ ಬೇರೆ ಏನಾದರೂ ಗೊತ್ತಿದೆಯೇ? ಅವರ ಜ್ಞಾನ ಅಷ್ಟಕ್ಕೇ ಸೀಮಿತ" ಎಂದು ಲೇವಡಿ ಮಾಡಿದರು.

ಒಟ್ಟಾರೆಯಾಗಿ, ವಿದ್ಯಾರ್ಥಿಗಳ ಶೈಕ್ಷಣಿಕ ಹೋರಾಟದ ಹಿಂದೆ ದೇಶವಿರೋಧಿ ಶಕ್ತಿಗಳು ಮತ್ತು ಕಾಂಗ್ರೆಸ್ ಕೈಜೋಡಿಸಿ ರಾಜ್ಯ ಹಾಗೂ ದೇಶದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಗಂಭೀರ ಆರೋಪ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಧ್ಯರಾತ್ರಿಯೂ ವಿಶ್ವ ದಾಖಲೆ ಬರೆದ ಮೋದಿ: ಜಾಗತಿಕ ಸೆಲೆಬ್ರಿಟಿಯನ್ನೇ ಮೀರಿಸಿದ ಪ್ರಧಾನಿ- ವಿದೇಶದಲ್ಲಿಯೂ ಹವಾ ಸೃಷ್ಟಿ
ಕಾಕ್ರೋಚ್ ಪಕ್ಷದ ಅಭಿಜಿತ್ ದೀಪ್ಕೆ ಇಷ್ಟ ಪಡುವ ಆಟ ಯಾವುದು? ಪ್ರತಿಭಟನೆ ವೇಳೆ ಕ್ರಿಕೆಟ್ ಆಡಿದ್ದೇಕೆ?