ಎಂಟು ಜಿಲ್ಲೆಗಳಲ್ಲಿ ತಲಾ 10 ಕಿ.ಮೀ. ಪಾದಯಾತ್ರೆ ಹಮ್ಮಿಕೊಂಡಿವೆ. ಮೊದಲ ದಿನ ಚಿತ್ರದುರ್ಗದಲ್ಲಿ ಪ್ರಾರಂಭವಾಗಲಿರುವ ಪಾದಯಾತ್ರೆಯು ಐದನೇ ದಿನವಾದ ಡಿ.2ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶದೊಂದಿಗೆ ಮುಕ್ತಾಯ
ಬೆಂಗಳೂರು(ನ.25): ಕೆಪಿಸಿಸಿಯ ವಿವಿಧ ಮುಂಚೂಣಿ ಘಟಕಗಳು ಈ ತಿಂಗಳ 28ರ ಸೋಮವಾರದಿಂದ ಐದು ದಿನಗಳ ಕಾಲ ಎಂಟು ಜಿಲ್ಲೆಗಳಲ್ಲಿ ತಲಾ 10 ಕಿ.ಮೀ. ಪಾದಯಾತ್ರೆ ಹಮ್ಮಿಕೊಂಡಿವೆ. ಮೊದಲ ದಿನ ಚಿತ್ರದುರ್ಗದಲ್ಲಿ ಪ್ರಾರಂಭವಾಗಲಿರುವ ಪಾದಯಾತ್ರೆಯು ಐದನೇ ದಿನವಾದ ಡಿ.2ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶದೊಂದಿಗೆ ಮುಕ್ತಾಯಗೊಳ್ಳಲಿದೆ. ‘ಭಾರತ್ ಜೋಡೋ’ ಯಾತ್ರೆಗೆ ಪೂರಕವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ ಮತ್ತು ಸಂವಿಧಾನ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಯಾತ್ರೆಗೆ ಚಿತ್ರದುರ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ.
ಬಳಿಕ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ ಜಿಲ್ಲೆಯಲ್ಲಿ ತಲಾ 10 ಕಿ.ಮೀ. ಪಾದಯಾತ್ರೆ ನಡೆಯಲಿದ್ದು, ಡಿ.2ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಎಲ್ಲಾ ಹಿರಿಯ ನಾಯಕರೂ ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಪರಿಶಿಷ್ಟವಿಭಾಗದ ಅಧ್ಯಕ್ಷ ಧರ್ಮಸೇನ ಮಾಹಿತಿ ನೀಡಿದ್ದಾರೆ.
ಡಬಲ್ ಇಂಜಿನ್ ಸರ್ಕಾರ ನುಡಿದಂತೆ ನಡೆದಿಲ್ಲ: ಡಿ.ಕೆ.ಶಿವಕುಮಾರ್
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಪಿಸಿಸಿಯ ಗ್ರಾಮೀಣಾವೃದ್ಧಿ, ಕಿಸಾನ್, ಕಾರ್ಮಿಕ, ಅಲ್ಪಸಂಖ್ಯಾತ, ಹಿಂದುಳಿದ, ಪರಿಶಿಷ್ಟಜಾತಿ ಹಾಗೂ ಪಂಗಡದ ವಿಭಾಗಗಳು ಕೂಡಿ ಯಾತ್ರೆಯನ್ನು ಹಮ್ಮಿಕೊಂಡಿವೆ. ನ.28ರಂದು ಬೆಳಗ್ಗೆ ಚಿತ್ರದುರ್ಗದಲ್ಲಿ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ. ಅಂದು ಬೆಳಗ್ಗೆ 10 ಕಿ.ಮೀ. ದೂರ ಯಾತ್ರೆ ನಡೆಸಲಾಗುವುದು. ಬಳಿಕ ಅದೇ ದಿನ ಮಧ್ಯಾಹ್ನ ದಾವಣಗೆರೆಯಲ್ಲಿ 10 ಕಿ.ಮೀ., ನ.29ರಂದು ಹಾವೇರಿಯಲ್ಲಿ 10 ಕಿ.ಮೀ., ನ.30ರಂದು ಹುಬ್ಬಳ್ಳಿಯಲ್ಲಿ 10 ಕಿ.ಮೀ., ಮಧ್ಯಾಹ್ನ ಧಾರವಾಡ ಗ್ರಾಮೀಣದಲ್ಲಿ 10 ಕಿ.ಮೀ. ಯಾತ್ರೆ ನಡೆಯಲಿದೆ. ನಾಲ್ಕನೇ ದಿನ (ಡಿ.1) ಬೆಳಗ್ಗೆ ಬೆಳಗಾವಿಯಲ್ಲಿ 10 ಕಿ.ಮೀ., ಮಧ್ಯಾಹ್ನ ಚಿಕ್ಕೋಡಿಯಲ್ಲಿ 10 ಕಿ.ಮೀ. ಯಾತ್ರೆ ನಡೆಯಲಿದೆ. ಈ ವೇಳೆ ಪ್ರತಿ ದಿನ ಎರಡೆರಡು ಮುಂಚೂಣಿ ಘಟಕಗಳು ಜವಾಬ್ದಾರಿ ವಹಿಸಿಕೊಂಡು ಪಾದಯಾತ್ರೆಯನ್ನು ನಿರ್ವಹಿಸಲಿವೆ ಎಂದು ಹೇಳಿದರು.
JDS Pancharatna Rathayatra: ಬಿಜೆಪಿ ಬಿ ಟೀಮ್ ಜೆಡಿಎಸ್ ಅಲ್ಲ ಕಾಂಗ್ರೆಸ್: ಎಚ್.ಡಿ.ಕುಮಾರಸ್ವಾಮಿ
ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ:
ಐದನೇ ದಿನವಾದ ಡಿ.2ರಂದು ಹುಬ್ಬಳ್ಳಿಯ ಮಹಾತ್ಮಗಾಂಧಿ ಪ್ರತಿಮೆ ಬಳಿ ಒಂಬತ್ತು ಘಟಕಗಳೂ ಸೇರಿ ಬೃಹತ್ ಸಮಾವೇಶ ನಡೆಸಲಾಗುವುದು. ಈ ವೇಳೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನಾಯಕರೂ ಭಾಗವಹಿಸಲಿದ್ದಾರೆ. ತನ್ಮೂಲಕ ಸಂವಿಧಾನ ರಕ್ಷಣೆಗಾಗಿ ಮಾಡುತ್ತಿರುವ ಹೋರಾಟವನ್ನು ಬೆಂಬಲಿಸಲಿದ್ದಾರೆ ಎಂದು ಧರ್ಮಸೇನ ತಿಳಿಸಿದರು.
ಐಕ್ಯತಾ ಸಮಾವೇಶದ ಕುರಿತು ಪ್ರತಿಕ್ರಿಯಿಸಿದ ಅವರು, ಐಕ್ಯತಾ ಸಮಾವೇಶವೂ ಎಐಸಿಸಿ ಸೂಚಿಸಿರುವ ಕಾರ್ಯಕ್ರಮ. ಎಸ್ಸಿ, ಎಸ್ಟಿಎರಡೂ ಸಮುದಾಯವನ್ನು ಸೇರಿಸಿ ಸಮಾವೇಶ ನಡೆಸಲು ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂದರು. ಪಂಚಾಯತ್‌ರಾಜ್ ಗ್ರಾಮೀಣಾಭಿವೃದ್ಧಿ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಮಿಕ ವಿಭಾಗದ ಅಧ್ಯಕ್ಷ ಪುಟ್ಟಸ್ವಾಮಿ ಗೌಡ ಸೇರಿದಂತೆ ಹಲವರು ಹಾಜರಿದ್ದರು.