ಜಾತ್ಯತೀತ ತತ್ವ ಬಲಿಕೊಟ್ಟ ಹೊರಟ್ಟಿ, ಸಲೀಂ ಅಹ್ಮದ್ ವಾಗ್ದಾಳಿ

By Suvarna News  |  First Published Jun 8, 2022, 11:03 PM IST

* ಜಾತ್ಯತೀತ ತತ್ವ ಬಲಿಕೊಟ್ಟ ಹೊರಟ್ಟಿ
* ಕಾಂಗ್ರೆಸ್ ನಾಯಕ ಸಲೀಂ ಅಹ್ಮದ್ ವಾಗ್ದಾಳಿ
* ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಟೀಕೆ


ಹಾವೇರಿ, (ಜೂನ್.08): ಬಸವರಾಜ ಹೊರಟ್ಟಿ ಅವರು ಕೋಮುವಾದಿ ಪಕ್ಷ ಬಿಜೆಪಿ ಸೇರುವ ಮೂಲಕ ತಾವು ನಂಬಿದ್ದ ಸಿದ್ಧಾಂತ, ಜಾತ್ಯತೀತ ತತ್ವಗಳನ್ನು ಬಲಿಕೊಟ್ಟಿದ್ದಾರೆ. 42 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಹೊರಟ್ಟಿ ಅವರು ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಸಲೀಂ ಅಹಮದ್‌ ವಾಗ್ದಾಳಿ ನಡೆಸಿದರು. 

ಹಾವೇರಿ ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಬುಧವಾರ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ  ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಗುರಿಕಾರ ಪರ ಮತ ಯಾಚಿಸಿ ಅವರು ಮಾತನಾಡಿದರು. 

Tap to resize

Latest Videos

undefined

‘ಸಬ್‌ ಕಾ ಸಾತ್‌– ಸಬ್‌ ಕಾ ವಿಕಾಸ್‌’ ಎನ್ನುತ್ತಿದ್ದ ಮೋದಿ ಅವರು ‘ಸಬ್‌ ಕಾ ವಿನಾಶ್‌’ ಮಾಡಿದ್ದಾರೆ. ರಾಜ್ಯ ಸರ್ಕಾರದ ಶೇ 40ರಷ್ಟು ಕಮಿಷನ್‌ ದಂಧೆಯಿಂದ ದೆಹಲಿ ಮಟ್ಟದಲ್ಲಿ ರಾಜ್ಯಕ್ಕೆ ಕೆಟ್ಟ ಹೆಸರು ಬಂದಿದೆ. ನೇಮಕಾತಿಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಮಾಜ ಒಡೆಯುವ ಬಿಜೆಪಿಗೆ ಶಿಕ್ಷಕರು ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು. 

MLC Election; 4 ಮಾಜಿ ಸಿಎಂಗಳಿಂದ ಭರ್ಜರಿ ಪ್ರಚಾರ

ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಗುರಿಕಾರ ಮಾತನಾಡಿ, 7 ಬಾರಿ ಆಯ್ಕೆಯಾದ ಬಸವರಾಜ ಹೊರಟ್ಟಿ ಅವರು ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಬದಲಾಗಿ ಸಮಸ್ಯೆಗಳ ಸರಮಾಲೆಯನ್ನೇ ಸೃಷ್ಟಿಸಿದ್ದಾರೆ. ಶಿಕ್ಷಕರ ಬೇಡಿಕೆಗಳು ನನೆಗುದಿಗೆ ಬಿದ್ದಿವೆ. ಶಿಕ್ಷಕರ ಪ್ರತಿನಿಧಿಯಾದವರು ಪರಿಷತ್‌ನಲ್ಲಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕೇ ಹೊರತು, ರಾಜಕಾರಣಿಯಾಗಿ ಬದಲಾಗಬಾರದು ಎಂದು ಟೀಕಿಸಿದರು. 

ಸರ್ಕಾರಿ ಶಿಕ್ಷಕರಿಗೆ ಮಾತ್ರ ಅನ್ವಯವಾಗುವ ‘ಜ್ಯೋತಿ ಸಂಜೀವಿನಿ’ ಸೌಲಭ್ಯವನ್ನು ಖಾಸಗಿ ಶಾಲೆಯ ಶಿಕ್ಷಕರಿಗೂ ವಿಸ್ತರಿಸುವ ಕೆಲಸ ಮಾಡಲಿಲ್ಲ. ಕಾಲ್ಪನಿಕ ವೇತನ ಸಮಸ್ಯೆಯನ್ನು ಶಿಕ್ಷಣ ಮಂತ್ರಿಯಾಗಿದ್ದಾಗಲೂ ಹೊರಟ್ಟಿ ಬಗೆಹರಿಸಲಿಲ್ಲ. ಹೊಸ ಪಿಂಚಣಿ ಯೋಜನೆಯಿಂದ 2 ಸಾವಿರ ಶಿಕ್ಷಕರು ಪಿಂಚಣಿಯಿಂದ ವಂಚಿತರಾಗಿ, ಕಣ್ಣೀರಿಡುತ್ತಾ ನಿವೃತ್ತರಾಗಿದ್ದಾರೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ, ಶಾಸಕ ಶ್ರೀನಿವಾಸ ಮಾನೆ, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ್‌, ಮಾಜಿ ಶಾಸಕರಾದ ಬಿ.ಎಚ್‌.ಬನ್ನಿಕೋಡ, ಸೋಮಣ್ಣ ಬೇವಿನಮರದ, ಅಜಂಪೀರ್‌ ಖಾದ್ರಿ, ಐ.ಜಿ.ಸನದಿ, ಆರ್‌.ಎಂ.ಕುಬೇರಪ್ಪ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮುಂತಾದವರು ಇದ್ದರು.

click me!