ಧರ್ಮಸ್ಥಳ ವಿವಾದ: ಕಾಂಗ್ರೆಸ್ ಶಾಸಕರ ಧರ್ಮ ವಿಜಯ ಯಾತ್ರೆ: ಡಾ.ವೀರೇಂದ್ರ ಹೆಗ್ಗಡೆಗೆ ಬೆಂಬಲ

Published : Sep 04, 2025, 06:48 AM IST
Dharmasthala Controversy

ಸಾರಾಂಶ

ನಮ್ಮದು ಬಿಜೆಪಿ, ಜೆಡಿಎಸ್ ರೀತಿ ರಾಜಕೀಯ ಪ್ರೇರಿತ ಯಾತ್ರೆಯಲ್ಲ. ನಾವು ಮಾಡುತ್ತಿರುವುದು ಧರ್ಮ ವಿಜಯ ಯಾತ್ರೆ. ಧರ್ಮಸ್ಥಳ ವಿಚಾರವಾಗಿ ಎಸ್ಐಟಿ ತನಿಖೆ ನಡೆಸಿ ಸತ್ಯ ಹೊರ ಬರುವಂತೆ ಮಾಡಿದ್ದೇವೆ.

ಬೆಂಗಳೂರು (ಸೆ.04): ರಾಜ್ಯದ ಪ್ರಮುಖ ಹಿಂದೂಗಳ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ವಿರುದ್ಧದ ಅಪಪ್ರಚಾರ ಖಂಡಿಸಿ ಜೆಡಿಎಸ್‌, ಬಿಜೆಪಿ ಬಳಿಕ ಆಡಳಿತ ಪಕ್ಷ ಕಾಂಗ್ರೆಸ್‌ ಶಾಸಕರು ಸಹ ಕಾರು ಹಾಗೂ ಬಸ್‌ಗಳಲ್ಲಿ ಯಾತ್ರೆ ಕೈಗೊಂಡಿದ್ದು, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಧರ್ಮಸ್ಥಳಕ್ಕೆ ಅಂಟಿದ್ದ ಕಳಂಕವನ್ನು ಕಾಂಗ್ರೆಸ್‌ ಸರ್ಕಾರ ತೊಳೆದಿದೆ ಎಂದು ಕೈ ನಾಯಕರು ಪ್ರತಿಪಾದಿಸಿದ್ದಾರೆ.

ಮೈಸೂರು ನಗರ ಕಾಂಗ್ರೆಸ್ ಸಮಿತಿ ಚಾಮರಾಜಕ್ಷೇತ್ರದ ವತಿಯಿಂದ ಶಾಸಕ ಕೆ.ಹರೀಶ್‌ ಗೌಡ ನೇತೃತ್ವದಲ್ಲಿ ಕೈಗೊಂಡ ಧರ್ಮ ವಿಜಯ ಯಾತ್ರೆಗೆ ಬುಧವಾರ ಶಾಸಕ ತನ್ವೀರ್‌ಸೇಠ್‌ ಚಾಲನೆ ನೀಡಿದರು. ಸುಮಾರು 2000ಕ್ಕೂ ಅಧಿಕ ಜನರು 30 ಬಸ್‌ ಮತ್ತು ಕಾರುಗಳಲ್ಲಿ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಧರ್ಮಸ್ಥಳಕ್ಕೆ ತೆರಳಿದರು. ಇನ್ನೂ ಕುಣಿಗಲ್‌ ಶಾಸಕ ಡಾ.ರಂಗನಾಥ್ ಅವರು ಸೆ.6ರಂದು 200 ಕಾರುಗಳಲ್ಲಿ ಬೆಂಬಲಿಗರನ್ನು ಕರೆದುಕೊಂಡು ಕ್ಷೇತ್ರಕ್ಕೆ ಹೋಗಲಿದ್ದಾರೆ.

ಮೈಸೂರಲ್ಲಿ ಮಾತನಾಡಿದ ಶಾಸಕ ಕೆ.ಹರೀಶ್‌ಗೌಡ ಅವರು, ನಮ್ಮದು ಬಿಜೆಪಿ, ಜೆಡಿಎಸ್ ರೀತಿ ರಾಜಕೀಯ ಪ್ರೇರಿತ ಯಾತ್ರೆಯಲ್ಲ. ನಾವು ಮಾಡುತ್ತಿರುವುದು ಧರ್ಮ ವಿಜಯ ಯಾತ್ರೆ. ಧರ್ಮಸ್ಥಳ ವಿಚಾರವಾಗಿ ಎಸ್ಐಟಿ ತನಿಖೆ ನಡೆಸಿ ಸತ್ಯ ಹೊರ ಬರುವಂತೆ ಮಾಡಿದ್ದೇವೆ. ಆ ಮೂಲಕ ಶ್ರೀಕ್ಷೇತ್ರದ ಮೇಲೆ ಇದ್ದ ಕಳಂಕ ದೂರ ಮಾಡಿದ್ದೇವೆ. ಯಾತ್ರೆಗೆ ನಮ್ಮ ಪಕ್ಷದ ಒಪ್ಪಿಗೆ ಕೂಡ ಇದೆ. ನಮ್ಮದು ಧರ್ಮಾತೀತ ಪಕ್ಷವಾಗಿದ್ದು, ಎಲ್ಲಾ ಧರ್ಮವನ್ನು ಆರಾಧಿಸುತ್ತೇವೆ. ಧರ್ಮಸ್ಥಳ ಭಕ್ತರ ಭಾವನೆಗೆ ಸ್ಪಂದಿಸಿ ಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಶಾಸಕ ತನ್ವೀರ್ ಸೇಠ್ ಮಾತನಾಡಿ, ಇದಕ್ಕೆ ಕಾಂಗ್ರೆಸ್ ಯಾತ್ರೆ ಎನ್ನದೆ ಜನರ ಯಾತ್ರೆ ಎನ್ನಬೇಕು. ಪಕ್ಷದಿಂದ ಇಲ್ಲಿ ಯಾತ್ರೆ ಕೈಗೊಂಡಿಲ್ಲ. ಧರ್ಮಸ್ಥಳದ ವಿರುದ್ಧ ದೂರು ನೀಡಿದ ಮುಸುಕುದಾರಿ ಮಂಪರು ಪರೀಕ್ಷೆ ಆಗಬೇಕು. ಆತ ಹೇಳುವ ಹೆಸರುಗಳ ಬಗ್ಗೆ ಕೂಡ ತನಿಖೆ ಆಗಬೇಕು. ಕನಿಷ್ಠ ಎಸ್ಐಟಿ ಮಧ್ಯಂತರ ವರದಿಯಾದರೂ ಹೊರ ಬರಬೇಕು. ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಗೃಹ ಸಚಿವರಿಗೆ ಕೇಳಿದ್ದೇನೆ ಎಂದು ತಿಳಿಸಿದರು.

ಮಂಜುನಾಥ ಬಿಜೆಪಿಯವರ ಆಸ್ತಿಯಲ್ಲ: ಬುಧವಾರ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿಯವರು ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ. ಒಂದು ಕಡೆ ಮಗುವನ್ನು ಚಿವುಟಿ ತೊಟ್ಟಿಲನ್ನೂ ತೂಗುತ್ತಾರೆ. ಮಂಜುನಾಥಸ್ವಾಮಿ ಬಿಜೆಪಿಯವರ ಆಸ್ತಿಯಲ್ಲ. ಕಾಂಗ್ರೆಸ್ ಶಾಸಕರು ಸಹ ಧರ್ಮಸ್ಥಳದ ಭಕ್ತರೇ. ನಾವು ಸಹ ಸೆ.6ರಂದು ಬೆಳಗ್ಗೆ 8 ಗಂಟೆಗೆ ಕುಣಿಗಲ್‌ನಿಂದ ಸಾವಿರಾರು ಜನರನ್ನು ಕರೆದುಕೊಂಡು 200 ಕಾರುಗಳಲ್ಲಿ ಧರ್ಮಸ್ಥಳಕ್ಕೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ.

ಇಂದು ಧರ್ಮಾಧಿಕಾರಿ ಭೇಟಿ: ಮೈಸೂರಿನಿಂದ ಶಾಸಕ ಕೆ.ಹರೀಶ್ ಗೌಡ ನೇತೃತ್ವದಲ್ಲಿ ಆಗಮಿಸಿದ ಸಾವಿರಾರು ಜನರನ್ನು ಕ್ಷೇತ್ರದ ಮುಖ್ಯಪ್ರವೇಶದ್ವಾರದ ಬಳಿ ಸ್ವಾಗತಿಸಲಾಯಿತು. ಬಳಿಕ ಎಲ್ಲರೂ ದೇವರ ದರ್ಶನ ಮಾಡಿ, ಅನ್ನಪೂರ್ಣದಲ್ಲಿ ಪ್ರಸಾದ ಸ್ವೀಕರಿಸಿದರು. ಗುರುವಾರ ಬೆಳಗ್ಗೆ 9 ಗಂಟೆಗೆ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯ ಅವರನ್ನು ಕಾಂಗ್ರೆಸ್‌ ನಾಯಕರು ಭೇಟಿಯಾಗಿ ಗೌರವಾರ್ಪಣೆ ಸಲ್ಲಿಸಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ