2024ರಲ್ಲಿ ಜರುಗಲಿರುವ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ, ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ: ಶಾಸಕ ರಾಜು ಕಾಗೆ
ಕಾಗವಾಡ(ಸೆ.13): ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರ ಅವರಿಗೆ ಬಿಟ್ಟಿದ್ದು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಿಂದ ನಮ್ಮ ಪಕ್ಷಕ್ಕೇನು ಆಗುವುದಿಲ್ಲ ಎಂದು ಶಾಸಕ ರಾಜು ಕಾಗೆ ಹೇಳಿದರು.
ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಂಬರಗಿ ಗ್ರಾಮದಲ್ಲಿ 1.98 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಹಾಗೂ ಉಗಾರ ಪಟ್ಟಣದಲ್ಲಿ ಬಸವೇಶ್ವರ ವೃತ್ತದಿಂದ ಚನ್ನಮ್ಮ ವೃತದವರೆಗೆ 1.50 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೆಲ್ಲ ಒಂದಾದರೂ ಕಾಂಗ್ರೆಸ್ ಪಕ್ಷಕ್ಕೆ ಭಯವಿಲ್ಲ. ನಾವು ಇನ್ನಷ್ಟು ಬಲಿಷ್ಠರಾಗಿದ್ದೇವೆ ಎಂದರು.
ಡಿಕೆ ಸಹೋದರರಿಗೆ ಕಾದಿದ್ಯಾ "ಕಮಲದಳ" ಮೈತ್ರಿ ತೂಫಾನ್ ಶಾಕ್..?
ಮುಂಬರುವ ಲೋಕಸಭೆಯಲ್ಲಿ ಸೋಲಿನ ಭೀತಿಯಿಂದ ಜೆಡಿಎಸ್, ಬಿಜೆಪಿ ಒಂದಾಗುತ್ತಿರುವುದು ಗುಟ್ಟಾಗಿ ಏನು ಉಳಿದಿಲ್ಲ. ನಮ್ಮ ತಟ್ಟೆಯನ್ನು ನಾವು ಮೊದಲು ಸ್ವಚ್ಛವಾಗಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಇನ್ನೊಂದು ನೂರು ಜನರ ಜತೆಗೆ ಮೈತ್ರಿ ಮಾಡಿಕೊಳ್ಳಲಿ ನಮಗೇನು ಸಮಸ್ಯೆಯಿಲ್ಲ ಎಂದು ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಅವರು ಹಾಗೆ ಮಾಡಿದರು, ಇವರು ಹೀಗೆ ಮಾಡಿದರು ಅಂತಾ ವನಾ ಉಸಾಬರಿ ಮಾಡುವುದಕ್ಕಿಂತ ನಮ್ಮ ತಟ್ಟೆಯನ್ನು ನಾವು ಸ್ವಚ಼್ಛವಾಗಿಟ್ಟುಕೊಳ್ಳೋಣ. ಬೇರೆಯವರ ತಟ್ಟೆಯಲ್ಲಿ ಏನ್ ಬಿದ್ದಿದೆ ಎಂಬುವುದಕ್ಕೆ ನಾವು ಯಾಕೆ ತಲೆ ಕೆಡಿಸಿಕೊಳ್ಳುವುದು. 2024ರಲ್ಲಿ ಜರುಗಲಿರುವ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ, ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ ವಾಘಮೊಡೆ, ಕಾಗವಾಡ ಬ್ಲಾಕ್ ಎಸ್ಸಿ ಘಟಕದ ಅಧ್ಯಕ್ಷ ಈಶ್ವರ ಕಾಂಬಳೆ ಮುಖಂಡರಾದ ಗಂಗಾಧರ ಜೋರಾಪುರೆ, ವಲ್ಲಭ ಕಾಗೆ, ರೋಹನ ನಾಯಿಕ, ಮಹಾದೇವ ವಡಗಾಂವೆ, ಮಂಜುನಾಥ ತೆರದಾಳೆ, ಸತೀಶ ಜಗತಾಪ, ಅಮರ ಜಗತಾಪ, ರಾಜು ಡಾಂಗೆ, ರುಸ್ತುಂ ಸುತಾರ, ಮಹಾದೇವ ಕಟಗೇರಿ, ಬಾಳು ಕಟಗೇರಿ, ವಿಜಯ ಅಸೂದೆ, ವಿಶ್ವನಾಥ ಶಿರಸಟ್ಟ, ಬಸವರಾಜ ಪಾಟೀಲ, ಬಸು ಸಾಣಗಾಂವೆ, ಅನೀಲ ಮಾನೆ, ವಾಸು ಕಟಗೇರಿ ಅನೇಕರು ಇದ್ದರು.