'ಬಿಜೆಪಿ ಸರಕಾರಕ್ಕೆ ಕೊರೋನಾ ಅಲ್ಲ ಭ್ರಷ್ಟಾಚಾರದ ಸೋಂಕು ತಗುಲಿದೆ'

By Suvarna News  |  First Published Aug 2, 2020, 2:34 PM IST

ರಾಜ್ಯ ಸರಕಾರದ ವಿರುದ್ಧ ಮಾಜಿ ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ| ಕೊರೋನಾ ವೈರಸ್ ನಿಯಂತ್ರಣ ಮಾಡುವುದರಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ಸಂಪೂರ್ಣ ವಿಫಲ|ಬಿಜೆಪಿಯವರು ಎಲ್ಲರೂ ಸೇರಿ ಜನರ ಹಣವನ್ನ ಲೂಟಿ ಮಾಡುತ್ತಿದ್ದಾರೆ|


ಯಾದಗಿರಿ(ಆ.02): ಕೋವಿಡ್‌-19 ಸೋಂಕು ನಿಯಂತ್ರಣ ವಿಚಾರದಲ್ಲಿ ಎಡವಿರುವ ರಾಜ್ಯ ಬಿಜೆಪಿ ಸರ್ಕಾರ ಬರೀ ಭ್ರಷ್ಟಾಚಾರಕ್ಕಿಳಿದಿದೆ. ಸರ್ಕಾರಕ್ಕೇ ಸೋಂಕು ತಗುಲಿದೆ, ಪ್ರಸ್ತುತ ಸರ್ಕಾರ ಇನ್‌ಫೆಕ್ಟೆಡ್‌ ಸರ್ಕಾರ ಎಂದು ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ ಮಲ್ಲಿಕಾರ್ಜುನ ಖರ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್‌ ಮಾಡುವ ಸಮಯದಲ್ಲಿ ಸರ್ಕಾರ ಅಲ್‌ಲಾಕ್‌ ಮಾಡಿತ್ತು. ಅನ್‌ಲಾಕ್‌ ಮಾಡುವ ಸಂದರ್ಭದಲ್ಲಿ ಲಾಕ್‌ಡೌನ್‌ ಮಾಡಿತ್ತು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಧಾರಗಳನ್ನ ತರಾಟೆಗೆ ತೆಗೆದುಕೊಂಡರು.

Latest Videos

undefined

ಯಡಿಯೂರಪ್ಪಗೆ ಕೌಂಟರ್ ಕೊಡೋಕೆ ಡಿಸಿಎಂಗಳನ್ನ ಮಾಡಿದ್ದು: ಜಾರಕಿಹೊಳಿ

ಮೂರು ತಿಂಗಳ ಹಿಂದೆ ಕಲಬುರಗಿಯಲ್ಲಿ ಒಂದು ಸೋಂಕಿನ ಪ್ರಕರಣ ಹಾಗೂ ರಾಜ್ಯದಲ್ಲಿ 500 ಪ್ರಕರಣಗಳಿದ್ದವು. ಆದರೀಗ, ಕೊರೋನಾ ಕೈಮೀರಿ ಹೋಗಿದೆ. ಪ್ರಧಾನಿ ತಮ್ಮ ಭಾಷಣದಲ್ಲಿ ಕೊರೋನಾದ ವಿರುದ್ಧ ಹೋರಾಟವನ್ನು ಮಹಾಭಾರತ ಯುದ್ಧಕ್ಕೆ ಹೋಲಿಸಿ, 21 ದಿನಗಳ ಹೋರಾಟ ಎಂದು ಹೇಳಿದ್ದರು. ಆದರೆ, 120 ದಿನಗಳು ಕಳೆದರೂ ಕೊರೋನಾ ನಿಯಂತ್ರಣಕ್ಕೆ ಬಂದಿಲ್ಲ.

ಲಾಕ್‌ಡೌನ್‌ ಮಾಡುವ ಮೂಲಕ ಸರ್ಕಾರ ವೈದ್ಯಕೀಯ ಅಗತ್ಯತೆಗಳ ಬಗ್ಗೆ ತಯಾರಿ ನಡೆಸುವುದಾಗಿ ಹೇಳಿತ್ತು. ಆದರೆ, ಅನ್‌ಲಾಕ್‌ ಬಳಿಕವೂ ಸೋಂಕು ಉಲ್ಬಣವಾಗುತ್ತಿದೆ. ಸರ್ಕಾರ ಕೊರೋನಾ ಬಗ್ಗೆ ಯೋಚನೆ ಮಾಡಿದಂತಿಲ್ಲ ಎಂದು ಟೀಕಿಸಿದ ಖರ್ಗೆ, ಕೊರೋನಾ ವಿಚಾರವಾಗಿ ಪ್ರಶ್ನಿಸಿದರೆ ರಾಜಕೀಯ ಮಾಡುತ್ತಿದ್ದೀರಿ ಎನ್ನುತ್ತಾರೆ ಎಂದು ಟೀಕಾಕಾರರಿಗೆ ಮಾತಿನೇಟು ನೀಡಿದರು.

ನಮ್ಮ ರಾಜ್ಯ ಹಾಗೂ ದೇಶದಲ್ಲಿ ವಿರೋಧ ಪಕ್ಷಗಳು ಸಹಕಾರ ನೀಡಿದಷ್ಟುಬೇರೆ ಯಾವುದೇ ರಾಜ್ಯಹಾಗೂ ದೇಶದಲ್ಲಿ ಸಹಕಾರ ಸಿಕ್ಕಿಲ್ಲ. ಹಾಗಂತ, ಭ್ರಷ್ಟಾಚಾರಕ್ಕೂ ಸಹಕಾರ ನೀಡಲು ಸಾಧ್ಯವಿಲ್ಲ ಎಂದು ಗುಡುಗಿದ ಖರ್ಗೆ, ಕೇಂದ್ರ ಸರ್ಕಾರ 6 ಸಾವಿರ ವೆಂಟಿಲೇಟರ್‌ಗಳ ನೀಡುವುದಾಗಿ ಹೇಳಿತ್ತು. ಈಗ ಆ ವೆಂಟಿಲೇಟರ್‌ಗಳು ಎಲ್ಲಿ ಎಂದು ಪ್ರಶ್ನಿಸಿದರು.

ಕೋವಿಡ್‌ ಸಂದರ್ಭದಲ್ಲಿ ಯಾವುದೇ ಸಚಿವರು ಕಲ್ಯಾಣ ಕರ್ನಾಟಕ ಭಾಗದ ಆಸ್ಪತ್ರೆಗಳಿಗೆ ಭೇಟಿ ನೀಡಲಿಲ್ಲ. ಬೃಹತ್‌ ನಗರಗಳಿಗೆ ರಾಜ್ಯದಿಂದ ಗುಳೆ ಹೋಗಿದ್ದ ಜನರು ಅಲ್ಲಿ ಉದ್ಯೋಗವಿಲ್ಲದೆ ತಮ್ಮ ಗ್ರಾಮಗಳಿಗೆ ವಾಪಸ್‌ ಬರಲೂ ಹಣವಿದ್ದಿಲ್ಲ. ಕಾಂಗ್ರೆಸ್‌ ಪಕ್ಷದ ನಾಯಕರು ಅವರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಅವರ ಮನೆ ಸೇರಿಸಿದ್ದೇವೆ ಎಂದು ತಿಳಿಸಿದ ಅವರು, ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.

ಕೊರೋನಾ ಆರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ ಎಲ್ಲ ವಿಷಯಕ್ಕೂ ದೇಶದ ಜನರು ಉತ್ತಮ ಬೆಂಬಲ ವ್ಯಕ್ತಪಡಿಸಿದರು. ಆದರೆ, ಕಾರ್ಮಿಕರ ಬದುಕಿನ ವಿಷಯದಲ್ಲಿ ಚಿಂತಿಸದೆ ಲಾಕ್‌ಡೌನ್‌ ಜಾರಿ ಮಾಡಿರುವುದರಿಂದ ಕಾರ್ಮಿಕರ ಬದುಕು ಬೀದಿ ಪಾಲಾಯಿತು ಎಂದು ಕೇಂದ್ರ ಸರ್ಕಾರದ ನಡೆ ಖಂಡಿಸಿದರು.

ಸುದ್ದಿಗೋಷ್ಠಿಯಲ್ಲಿ ಶಹಾಪುರ ಶಾಸಕ ಶರಣಬಸಪ್ಪ ಗೌಡ ದರ್ಶನಾಪುರ, ಶಾಸಕ ಆನಂದ ನ್ಯಾಮಗೌಡ, ಹಿರಿಯ ಕಾಂಗ್ರೆಸ್‌ ಮುಖಂಡರು ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಚೆನ್ನಾರೆಡ್ಡಿಗೌಡ ಪಾಟೀಲ್‌ ತುನ್ನೂರು, ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರು, ಜಿಲ್ಲಾಧ್ಯಕ್ಷ ಮರಿಗೌಡ ಹುಲ್ಕಲ್‌, ಕಾಂಗ್ರೆಸ್‌ ಮುಖಂಡ ಮಾಣಿಕರೆಡ್ಡಿ ಕುರಕುಂದಿ, ಯುವ ಕಾಂಗ್ರೆಸ್‌ ಮುಖಂಡ ರಾಘವೇಂದ್ರ ಮಾನಸಗಲ್‌, ಚಿದಾನಂದಪ್ಪ ಕಾಳಬೆಳಗುಂದಿ, ಸುರೇಶ್‌ ಜೈನ್‌, ಬಸರೆಡ್ಡಿ ಪಾಟೀಲ್‌ ಅನಪೂರ ಮುಂತಾದವರಿದ್ದರು.

click me!