ಬಿಜೆಪಿಯವರು ಹತಾಶರಾಗಿದ್ದಾರೆ. ರಾಜ್ಯದ 28 ಕ್ಷೇತ್ರಗಳನ್ನೂ ಗೆಲ್ಲಲು ಕೇಂದ್ರದವರು ಟಾರ್ಗೆಟ್ ನೀಡಿದ್ದಾರೆ. ಗೆಲ್ಲಲು ಆಗುವುದಿಲ್ಲ ಎಂಬ ಭ್ರಮನಿರಸನದಲ್ಲಿ ಮಾತನಾಡುತ್ತಿದ್ದಾರೆ ಎಂದ ಶಾಸಕ ಲಕ್ಷ್ಮಣ ಸವದಿ
ವಿಜಯಪುರ(ಫೆ.25): ದೀಪ ಆರುವ ಮುಂಚೆ ದೊಡ್ಡದಾಗಿ ಉರಿಯುತ್ತದೆ ಎಂಬಂತೆ ಸಂಸದ ಅನಂತಕುಮಾರ ಹೆಗಡೆ ರಾಜಕೀಯವಾಗಿ ಕಳೆದು ಹೋಗುವ ಮುನ್ನ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ವಾಗ್ದಾಳಿ ನಡೆಸಿದರು.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಅನಂತಕುಮಾರ ಹೆಗಡೆ ವಾಗ್ದಾಳಿ ಮಾಡಿದ್ದರ ಕುರಿತು ಖಾರವಾಗಿ ಪ್ರತಿಕ್ರಿಯಿಸಿದರು. ಅವರು ತಮ್ಮ ಅಸ್ತಿತ್ವವನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ. ವಿನಾಶ ಕಾಲೇ ವಿಪರೀತ ಬುದ್ಧಿ ಎಂದು ಅನಂತಕುಮಾರ ವಿರುದ್ಧ ಕಿಡಿಕಾರಿದರು.
ಬಿಜೆಪಿಯವರು ಹತಾಶರಾಗಿದ್ದಾರೆ. ರಾಜ್ಯದ 28 ಕ್ಷೇತ್ರಗಳನ್ನೂ ಗೆಲ್ಲಲು ಕೇಂದ್ರದವರು ಟಾರ್ಗೆಟ್ ನೀಡಿದ್ದಾರೆ. ಗೆಲ್ಲಲು ಆಗುವುದಿಲ್ಲ ಎಂಬ ಭ್ರಮನಿರಸನದಲ್ಲಿ ಮಾತನಾಡುತ್ತಿದ್ದಾರೆ ಎಂದರು.
ಬಿಜೆಪಿ 28 ಸ್ಥಾನ ಗೆಲ್ಲದಿದ್ದರೆ ಬಿಜೆಪಿಯಲ್ಲಿ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬದಲಾವಣೆ ಆಗುವ ಪ್ರಶ್ನೆಯೇ ಉದ್ಭವ ಆಗಲ್ಲ, ಈಗ ಎಲ್ಲಿ ಕೂರಬೇಕೋ ಅಲ್ಲಿಯೇ ಅವರು ಕೂತಿದ್ದಾರೆ. ಈಗಾಗಲೇ ಬದಲಾವಣೆ ಆಗಿಯೇ ಕೂತಿದ್ದಾರೆ ಎಂದು ಹೇಳಿದರು. ಇದೇ ವೇಳೆ, ಲೋಕಸಭಾ ಚುನಾವಣೆಯಲ್ಲಿನ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿ, ‘ನಾನು ರಾಜ್ಯ ರಾಜಕಾರಣದಲ್ಲೇ ಇರುವೆ’ ಎಂದು ಸ್ಪಷ್ಟಪಡಿಸಿದರು.