ಗ್ಯಾರಂಟಿ ಈಡೇರಿಸಿದ ಬದ್ಧತೆ ಕಾಂಗ್ರೆಸ್‌ ಸರ್ಕಾರದ್ದು: ಜೆ.ಟಿ.ಪಾಟೀಲ

By Kannadaprabha News  |  First Published Nov 1, 2023, 10:15 PM IST

ಕೆಲ ಮನೆ ಒಡತಿಯರ ಖಾತೆಗೆ ಹಣ ಬಂದಿಲ್ಲವೆಂದು ತಿಳಿದು ಬಂದಿದ್ದು ತಾಂತ್ರಿಕ ದೋಷದಿಂದ ವಿಳಂಬವಾಗಿರಬಹುದು. ಖಂಡಿತ ಇದನ್ನು ಸರಿಪಡಿಸಲಾಗುತ್ತದೆ. ನಂತರ ಹಣ ಬಂದೇ ಬರುತ್ತದೆ ಎಂದ ಬೀಳಗಿ ಶಾಸಕ ಜೆ.ಟಿ.ಪಾಟೀಲ 


ಕೆರೂರ(ನ.01):  ಭೀಕರ ಬರಗಾಲ, ಹಿಂದಿನ ಸರ್ಕಾರದ ಸಾಲ, ಕೇಂದ್ರ ಸರ್ಕಾರದ ಅಸಹಕಾರದ ನಡುವೆ ಕಾಂಗ್ರೆಸ್‌ ಭರವಸೆ ನೀಡಿದ ಐದು ಗ್ಯಾರಂಟಿಗಳ ಪೈಕಿ ನಾಲ್ಕನ್ನು ಈಡೇರಿಸಿದೆ. ಐದನೇ ಗ್ಯಾರಂಟಿ ಯುವನಿಧಿ ಈಡೇರಿಕೆಯತ್ತ ದಾಪುಗಾಲು ಇಡುತ್ತಿದೆ ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಅವರು ಕೆರೂರ ಸಮೀಪದ ನರೇನೂರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷೆ ರಕ್ಷಿತಾ ಈಟಿ ವಿದ್ಯಾರ್ಥಿಗಳಿಗೆ ಕೊಡಮಾಡಿದ ಮಹಾಪುರುಷರ ಪುಸ್ತಕಗಳ ಜೊತೆಗೆ ನೋಟ್‌ಬುಕ್‌, ಪೆನ್ನು ಹಾಗೂ ಬಿಸ್ಕತ್ತು ವಿತರಿಸಿ ಮಾತನಾಡಿದರು.

Tap to resize

Latest Videos

undefined

ಕಾಂಗ್ರೆಸ್‌ ಬದ್ಧತೆಯನ್ನು ಜನ ಬೆಂಬಲಿಸಿದ್ದಾರೆ: ಸಚಿವ ಆರ್.ಬಿ.ತಿಮ್ಮಾಪುರ

ಕೆಲ ಮನೆ ಒಡತಿಯರ ಖಾತೆಗೆ ಹಣ ಬಂದಿಲ್ಲವೆಂದು ತಿಳಿದು ಬಂದಿದ್ದು ತಾಂತ್ರಿಕ ದೋಷದಿಂದ ವಿಳಂಬವಾಗಿರಬಹುದು. ಖಂಡಿತ ಇದನ್ನು ಸರಿಪಡಿಸಲಾಗುತ್ತದೆ. ನಂತರ ಹಣ ಬಂದೇ ಬರುತ್ತದೆ ಎಂದರು.

ಹಿಂದಿನ ಸರ್ಕಾರ ₹2.45ಲಕ್ಷ ಕೋಟಿ ಸಾಲ ಮಾಡಿಟ್ಟಿದೆ. ₹30 ಸಾವಿರ ಕೋಟಿ ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಯಲ್ಲಿ ಸಾಲ ಇದೆ. ₹1.33ಲಕ್ಷ ಕೋಟಿ ಅನುದಾನರಹಿತ ಕಾಮಗಾರಿಗಳನ್ನು ಹಿಂದಿನ ಸರ್ಕಾರ ಮಂಜೂರು ಮಾಡಿದೆ. ಇವೆಲ್ಲವುಗಳನ್ನು ಸರಿಪಡಿಸುವ ಹೊಣೆಗಾರಿಕೆ ನಮ್ಮ ಸರ್ಕಾರದ ಮೇಲಿದೆ. ಇವೆಲ್ಲವುಗಳ ನಡುವೆಯೂ ಗ್ಯಾರಂಟಿಗಳನ್ನು ಪೂರೈಸಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಬೇಕಿದೆ. ಸ್ವಲ್ಪ ಹೆಚ್ಚುಕಡಿಮೆ ಆಗಬಹುದು ಆದರೆ, ತಾಳ್ಮೆಯಿಂದ ಇದ್ದರೆ ಎಲ್ಲವೂ ಸರಿ ಹೋಗುತ್ತದೆ ಎಂದರು.

ದೇಶ ಕಟ್ಟುವ ಸಾಮರ್ಥ್ಯ ಪ್ರಾಥಮಿಕ ಶಾಲೆಯ ಶಿಕ್ಷಕರಲ್ಲಿದ್ದು, ಮಕ್ಕಳ ಸುಪ್ತ ಪ್ರತಿಭೆ ಗುರುತಿಸಿ ಅವರ ಉತ್ತಮ ಭವಿಷ್ಯಕ್ಕೆ ಮಾರ್ಗದರ್ಶನ ನೀಡಬೇಕು. ಸರ್ಕಾರ ಉಚಿತವಾಗಿ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿದೆ. ಮಕ್ಕಳು ನಿರ್ದಿಷ್ಟ ಗುರಿ ಇಟ್ಟುಕೊಂಡು ಶ್ರದ್ಧೆಯಿಂದ ಕಲಿತರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದರು. ರಕ್ಷಿತಾ ಈಟಿಯವರು ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ಕೊಡುಗೆ ನೀಡಿದ್ದು, ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ರಕ್ಷಿತಾ ಈಟಿ ಮಾತನಾಡಿ, ಶಾಸಕರಿಗೆ ಸನ್ಮಾನಿಸಲು ಹೋದಾಗ ಅವರು ನನ್ನನ್ನು ಸನ್ಮಾನಿಸುವ ಬದಲು ಮಕ್ಕಳಿಗೆ ಪುಸ್ತಕ ಕೊಡಿ ಎಂದಿದ್ದರು. ನಾನು ಅವರದ್ದೇ ಕ್ಷೇತ್ರದ ವಿದ್ಯಾರ್ಥಿಗಳಿಗೆ ಪುಸ್ತಕ ಹಂಚಿದರೆ ಅವರಿಗೇ ಸನ್ಮಾನ ಮಾಡಿದಂತೆ ಆಗುತ್ತದೆ ಎಂದು ಭಾವಿಸಿ, ಅವರದ್ದೇ ಕ್ಷೇತ್ರದ ನರೇನೂರ ಗ್ರಾಮವನ್ನು ಆರಿಸಿಕೊಂಡು ಅವರ ಸಮ್ಮುಖದಲ್ಲಿ ವಿತರಿಸಿದೆ. ಇದರ ಪ್ರೇರಣಾ ಶಕ್ತಿ ಜೆ.ಟಿ.ಪಾಟೀಲರು ಎಂದರು.
ಬೀಳಗಿ ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಎಚ್‌.ಎನ್‌.ತೆಕ್ಕೆನ್ನವರ ಮಾತನಾಡಿ, ವಿದ್ಯೆ ಯಾರೂ ಕಸಿದುಕೊಳ್ಳಲಾಗದ ಆಸ್ತಿ. ಸಂಸ್ಕಾರಭರಿತ ಶಿಕ್ಷಣ ಒದಗಿಸಿದರೆ ಮಕ್ಕಳು ಉತ್ತಮ ನಾಗರಿಕರಾಗುತ್ತಾರೆ. ಆ ಕೆಲಸ ಮಾಡುವ ಶಕ್ತಿ ಪ್ರಾಥಮಿಕ ಶಾಲೆಯ ಶಿಕ್ಷಕರಲ್ಲಿದೆ ಎಂದರು.

ರೈತರ ಹಿತ ಕಾಪಾಡಲು ಸರ್ಕಾರ ಬದ್ಧ: ಸಚಿವ ತಿಮ್ಮಾಪೂರ

ಡಾ.ಎಂ.ಜಿ.ಕಿತ್ತಲಿ ಮಾತನಾಡಿದರು. ಮುಖ್ಯಗುರು ಜುಮ್ಮಣ್ಣವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸಭೆಯಲ್ಲಿ ಲಕ್ಷ್ಮಿ ಬೆಳಗಂಟಿ, ಶೇಖರ ರಾಠೋಡ, ನಿಂಗಪ್ಪ ಬೆಳಗಂಟಿ, ಮಲ್ಲಪ್ಪ ಪೂಜಾರ, ಕಾಳಪ್ಪ ಲಮಾಣಿ, ಅಶೋಕ ಕೊಪ್ಪದ, ಡಾ.ಬಿ.ಕೆ.ಕೊವಳ್ಳಿ, ಶ್ರೀಶೈಲ ಅಂಟಿನ, ಶಿವಾನಂದ ನರಗುಂದ, ಲಾಲಸಾಬ್‌ ನದಾಫ, ಪ್ರವೀಣ ಚಿಕ್ಕೂರ, ಸಿದ್ದಪ್ಪ ಮೆಟಗುಡ್ಡ, ವಾಸು ಲಮಾಣಿ, ಶಿಕ್ಷಕರು ಉಪಸ್ಥಿತರಿದ್ದರು.

click me!