ಹೊಸಕೋಟೆ ಅಖಾಡಕ್ಕಿಳಿದ ಸಿದ್ದು ಶಿಷ್ಯ: ಎಂಟ್ರಿಯಾಗುತ್ತಿದ್ದಂತೆಯೇ MTBಗೆ ಓಪನ್ ಚಾಲೆಂಜ್..!

By Web DeskFirst Published Nov 2, 2019, 6:28 PM IST
Highlights

ಮಾಜಿ ಆಪ್ತನನ್ನು ಸೋಲಿಸಲು ತೊಡೆತಟ್ಟಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೊಸಕೋಟೆ ಉಪಚುನಾವಣೆಗೆ ಶಿಷ್ಯನನ್ನು ಅಖಾಡಕ್ಕಿಳಿಸಿದ್ದಾರೆ. ಸಿದ್ದರಾಮಯ್ಯರಿಂದ ಅಪ್ಪಣೆ ಸಿಕ್ಕ ಬಳಿಕ ಕೋಟೆಗೆ ಇಳಿದಿರುವ ಶಿಷ್ಯ ಆರಂಭದಲ್ಲಿಯೇ ವಿರೋಧಿ ಎಂಟಿಬಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ. 

ಬೆಂಗಳೂರು, [ನ.02]: ರಾಜ್ಯ ರಾಜಕಾರಣದಲ್ಲಿ ಉಪ ಚುನಾವಣೆ ಕಣ ರಂಗೇರಿದೆ. ಅದರಲ್ಲೂ ಮೈತ್ರಿ ಸರ್ಕಾರ ಉರುಳಿಸಲು ರಾಜೀನಾಮೆ ನೀಡಿದ್ದ ಶಾಸಕರ ಕ್ಷೇತ್ರಗಳಲ್ಲಿ ಉಪಚುನಾವಣಾ ಪ್ರಚಾರ ಬಿರುಸು ಪಡೆದಿದ್ದು, ಹೊಸಕೋಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹಾಗೂ ಶಾಸಕ ಭೈರತಿ ಸುರೇಶ್ ಅವರ ನಡುವಿನ ಮಾತಿನ ಸಮರ ಜೋರಾಗಿದೆ. 

ಇಂದು (ಶನಿವಾರ]) ನಡೆದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಭೈರತಿ ಸುರೇಶ್ ಅವರು ಬಹಿರಂಗ ಸವಾಲು ಹಾಕಿದ್ದು, ಮುಸ್ಲಿಂರ ಸಮುದಾಯದ  300 ಮತಗಳನ್ನು ಎಂಟಿಬಿ ಪಡೆದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದರು. 

ಹೊಸಕೋಟೆ ಚುನಾವಣೆ ಕಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಫಿಕ್ಸ್ 

 ಬಿಜೆಪಿ ಕೋಮುವಾದಿ ಪಕ್ಷವಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಬುದ್ಧ ಜಯಂತಿ ನಿಲ್ಲಿಸಿದ್ದರು. ಈಗ ಟಿಪ್ಪುಸುಲ್ತಾನ್ ಬಗ್ಗೆ ಪಠ್ಯವೇ ಇರದಂತೆ ಮಾಡುತ್ತಿದ್ದಾರೆ. ಆದ್ದರಿಂದ ಕೋಮುವಾದಿ ಪಕ್ಷವನ್ನು ಅಲ್ಪ ಸಂಖ್ಯಾತರು, ದಲಿತ ಸಮುದಾಯಗಳು ಬೆಂಬಲಿಸಬಾರದು ಎಂದು ಕರೆ ಕೊಟ್ಟರು.

ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಿರುವ ಎಂಟಿಬಿ ಅವರು ನಾವು ಕಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೆ ಅವರು ಬಂದಿದ್ದಾರೆ ಎಂದಿದ್ದಾರೆ. ಆದರೆ ಈಗ ಬಿಜೆಪಿಗೆ ಹೋಗಲು ಸಿದ್ಧವಾಗಿರುವ ಎಂಟಿಬಿ ಅವರು ಆ ಪಕ್ಷವನ್ನು ಕಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು. ಅಲ್ಲದೇ ಕ್ಷೇತ್ರದಲ್ಲಿ ಜಾತಿಗಳ ನಡುವೆ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಆದರೆ ಹೊಸಕೋಟೆ ಜನ ಸ್ವಾಭಿಮಾನಿಗಳಾಗಿದ್ದಾರೆ ಎಂದರು.

ಕಾಂಗ್ರೆಸ್ ನಿಂದ ಶಾಸಕ ಭೈರತಿ ಸುರೇಶ್ ಪತ್ನಿ ಪದ್ಮಾವತಿ ಅವರನ್ನು ಕಣಕ್ಕಿಳಿಸಿದೆ.ಮತ್ತೊಂದೆಡೆ ಬಿಜೆಪಿ ಕಾಂಗ್ರೆಸ್ ನಿಂದ ಅನರ್ಹ ಗೊಂಡಿರುವ ಎಂಟಿಬಿ ನಾಗರಾಜ್ ಅವರಿಗೆ ಟಿಕೇಟ್ ನೀಡಲು ನಿರ್ಧರಿಸಿದೆ. ಇನ್ನು ಬಿಜೆಪಿಗೆ ಶರತ್ ಬಚ್ಚೇಗೌಡ ನಡೆ ಆತಂಕ ಸೃಷ್ಟಿಸಿದೆ. ಶರತ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಗ್ಯಾರಂಟಿಯಾಗಿದೆ. ಈ ಹಿನ್ನೆಲೆಯಲ್ಲಿ ಹೊಸಕೋಟೆ ಕಣ ತ್ರಿಕೋನ ಸ್ಪರ್ಧೆಯಾಗುವುದು ಖಚಿತ.

click me!