
ಶಿವಮೊಗ್ಗ(ಅ.18): ಮುಡಾ ಕಚೇರಿ ಮೇಲೆ ಇಡಿ ದಾಳಿ ಒಂದು ರಾಜಕೀಯ ತಂತ್ರವಾಗಿದೆ. ರಾಜ್ಯಪಾಲರನ್ನ ಬಳಸಿಕೊಂಡು ಸರಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆದಿದೆ. ಇಡಿ ಬಂಧಿನಕ್ಕೊಳಗಾಗಿದ್ದ ನಾಗೇಂದ್ರ ಅವರು ಏನು ಹೇಳಿದ್ರು, ಇಡಿ ಅವರು ಸಿಎಂ, ಡಿಸಿಎಂ ಹೆಸರು ಹೇಳಬೇಕು ಎಂದು ಒತ್ತಾಯಿಸಿದ್ದರಂತೆ. ಮುಡಾ ವಿಚಾರದಲ್ಲಿ ನ್ಯಾಯಾಲಯ ತನಿಖೆ ನಡೆಸುವಂತೆ ಸೂಚಿಸಿದೆ. ತನಿಖೆ ನಂತರ ತಪ್ಪಿತಸ್ಥರು ಹೊರಗೆ ಬರುತ್ತಾರೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಅವರು, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಿಎಂ ಸಿದ್ದರಾಮಯ್ಯ ಅವರನ್ನು ಕಳ್ಳ ಎಂದಿದ್ದಾರೆ. ಹಾಗಾದರೆ ಯಡಿಯೂರಪ್ಪ ಅವರನ್ನು ಕಳ್ಳ ಎನ್ನಲು ಆಗ್ತದಾ. ಕಳ್ಳ ಎನ್ನುವುದು ಯಾವಾಗ ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಿದ ನಂತರ. ಯಡಿಯೂರಪ್ಪ ಮತ್ತು ಮಕ್ಕಳು ಹಾಗೂ ಈಶ್ವರಪ್ಪ ಅವರು ಏನೇನು ಲೂಟಿ ಹೊಡೆದಿದ್ದಾರೆ ಎಲ್ಲವೂ ಗೊತ್ತಿದೆ. ಈ ರೀತಿಯ ದ್ವೇಷದ ರಾಜಕಾರಣ ಮಾಡಬಾರದು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಡವರ ಆಸರೆಯ ಬೆಳಕು: ಶಾಸಕ ಬೇಳೂರು ಗೋಪಾಲಕೃಷ್ಣ
ದೇಶದಲ್ಲಿ ಅತಂತ್ರ ರಾಜಕಾರಣ ಇದೆ. ನಮ್ಮ ಮುಖ್ಯಮಂತ್ರಿಗಳು ತಪ್ಪಿತಸ್ಥರು ಎಂದಾದರೆ ನಾವೇ ರಾಜೀನಾಮೆ ಕೊಡಿಸುತ್ತೇವೆ. ವಿಪಕ್ಷಗಳಿಗೆ ಕೆಲಸ ಇಲ್ಲ, ಸರಕಾರ ಅಸ್ಥಿರಗೊಳಿಸುವುದೇ ಉದ್ದೇಶ ಆಗಿದೆ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
ದೀಪಾವಳಿ ಒಳಗೆ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ ಬಗ್ಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ವಿಜಯೇಂದ್ರ ಏನು ಭವಿಷ್ಯ ಹೇಳ್ತಾನಾ?. ಯಡಿಯೂರಪ್ಪ ಅವರನ್ನು 20 ತಿಂಗಳು ಮುಖ್ಯಮಂತ್ರಿ ಮಾಡಿದಾಗ ಭವಿಷ್ಯ ಹೇಳಬೇಕಿತ್ತು. ಭವಿಷ್ಯ ನುಡಿಯುವುದನ್ನು ಮೊದಲು ನಿಲ್ಲಿಸಬೇಕು. ಮೋದಿಗೆ ಸೆಡ್ಡು ಹೊಡೆಯುವ ರಾಜಕಾರಣಿ ಅಂದ್ರೆ ಸಿದ್ದರಾಮಯ್ಯ. ಹೀಗಾಗಿಯೇ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ವಿಚಾರದ ಬಗ್ಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಅವರು, ಮೂರು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ಇದೆ. ಯಾರು ಅಭ್ಯರ್ಥಿ ಆಗ್ತಾರೆ ಎಂಬ ಬಗ್ಗೆ ಗೊತ್ತಿಲ್ಲ. ಚನ್ನಪಟ್ಟಣಕ್ಕೆ ತೇಜಸ್ವಿನಿ ಅಭ್ಯರ್ಥಿ ಆಗಬಹುದು. ಸಿ.ಪಿ.ಯೋಗೀಶ್ವರ್ ಅವರೇ ಕಾಂಗ್ರೆಸ್ ಗೆ ಬರಬಹುದು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.