ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೆಚ್ಚಿನ ಕೊಲೆಗಳಾಗುತ್ತಿವೆ. ಕಾಂಗ್ರೆಸ್ ನೇತೃತ್ವ, ಕೃಪಾಕಟಾಕ್ಷದಲ್ಲಿ ರಾಜ್ಯದಲ್ಲಿ ಕೊಲೆಗಳು ನಡೆಯುತ್ತಿವೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜು.15): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಾದ್ಯಂತ ಕೊಲೆಗಳಾಗುತ್ತಿವೆ. ಕಾಂಗ್ರೆಸ್ ನೇತೃತ್ವ, ಕೃಪಾಕಟಾಕ್ಷದಲ್ಲಿ ರಾಜ್ಯದಲ್ಲಿ ಕೊಲೆಗಳು ನಡೆಯುತ್ತಿವೆ. ಯಾವುದೇ ಭಯವಿಲ್ಲದೆ ಕೊಲೆಗಾರರು ರಸ್ತೆಗೆ ಬಂದಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಗಟ್ಟಿತನ ಈ ಸರ್ಕಾರಕ್ಕಿಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಸರ್ಕಾರದ ವಿರುದ್ಧ ರೆಬಲ್ ಆದರು.
ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಮೇಲೆ ಕಳೆದ 2 ತಿಂಗಳಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಜೈನ ದಿಗಂಬರ ಮುನಿಗಳೊಬ್ಬರನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಬೆಂಗಳೂರಲ್ಲಿ ಇಬ್ಬರು ಟೆಕ್ಕಿಗಳು ಹಾಡಹಗಲೇ ಸಾಯ್ತಾರೆ, ಉಳ್ಳಾಲದಲ್ಲಿ ನಮ್ಮ ಕಾರ್ಯಕರ್ತನ ಶವ ನೀರಲ್ಲಿ ಸಿಗುತ್ತೆ ಎಂದರೆ ಏನು ಅರ್ಥ. ಟಿ. ನರಸೀಪುರದ ವೇಣುಗೋಪಾಲ್ ಮಾಡಿದ ತಪ್ಪೇನು. ಹಿಂದಿನ ದಿನ ಹನುಮ ಜಯಂತಿ ಆಚರಣೆ ಮಾಡಿದ್ದಾರೆ. ಅಲ್ಲಿಗೂ ಕೂಡಾ ಹೋಗಿದ್ದ ಆರೋಪಿಗಳು ಗಲಾಟೆ ಮಾಡಿ, ಹಲ್ಲೆ ಮಾಡಿ ಅವರ ಮುಖಕ್ಕೆ ಗಾಯ ಮಾಡಿದ್ದಾರೆ. ಹನುಮಜಯಂತಿಯನ್ನು ಯಶಸ್ವಿಯಾಗಿ ಮಾಡಿದ್ದ ಎನ್ನವು ಏಕೈಕ ಕಾರಣಕ್ಕಾಗಿ ಯುವ ಬ್ರಿಗೇಡ್ನ ತಾಲೂಕು ಅಧ್ಯಕ್ಷ ಎನ್ನುವ ಕಾರಣಕ್ಕಾಗಿ ವೇಣುಗೋಪಾಲ್‌ನನ್ನು ಟಾರ್ಗೆಟ್ ಮಾಡಿ ಮರುದಿನ ಸಂಧಾನಕ್ಕೆ ಕರೆದು ಡ್ರಾಗನ್ನಿಂದ 18-20 ಬಾರಿ ಚುಚ್ಚಿ ಕೊಂದಿದ್ದಾರೆ. ಅವರ ಮನೆಯಲ್ಲಿ ಈಗ ಗಂಡು ಮಕ್ಕಳಿಲ್ಲ ಕೇವಲ ಅವರ ತಾಯಿ, ಹೆಂಡತಿ ಮತ್ತೆ ಅವರ ಮಗಳು ಮಾತ್ರ ಇದ್ದಾರೆ.
undefined
ಅಧಿಕಾರಕ್ಕೆ ಬಂದ ಎರಡೇ ತಿಂಗಳಿಗೆ ಕೊಲೆ ಪ್ರಕರಣಗಳು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಿಗೆ ಕಾನೂನಿನ ಯಾವುದೇ ಭಯವಿಲ್ಲದೆ ಕೊಲೆಗಾರರು ರಸ್ತೆಗೆ ಬಂದಿದ್ದಾರೆ. ಈ ಸರ್ಕಾರ ನೈತಿಕತೆ ಕಳೆದುಕೊಂಡಿದೆ ಆದ್ದರಿಂದ ದೇಶದ್ರೋಹಿಗಳು, ಕ್ರಿಮಿನಲ್ಗಳು ಇವತ್ತು ರಸ್ತೆಗೆ ಬಂದು ಬಡವರು, ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಗುಡುಗಿದರು.
ಯಾಕೆ ಗ್ಯಾರಂಟಿಗಳು ಜಾರಿಯಾಗಿಲ್ಲ: ಗ್ಯಾರಂಟಿ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಸರ್ಕಾರ ರಚನೆಯಾದ ಮೊದಲ ಕ್ಯಾಬಿನೆಟ್ನಲ್ಲೇ ಗ್ಯಾರಂಟಿ ಜಾರಿಗೆ ಮಾಡುವುದಾಗಿ ಹೇಳಿದ್ದರು. ಆದರೆ, ಇನ್ನೂ ಯಾಕೆ ಗ್ಯಾರಂಟಿಗಳು ಜಾರಿಯಾಗಿಲ್ಲ?. ಯಾವಾಗ ನಿಮ್ಮ ಮೊದಲ ಕ್ಯಾಬಿನೆಟ್?. ಎಲ್ಲಿ ಹೋಯ್ತು ನಿಮ್ಮ ಗ್ಯಾರಂಟಿ?. ಅನವಶ್ಯಕವಾಗಿ ಇನ್ನೊಬ್ಬರ ಮೇಲೆ ಆರೋಪ ಹೊರಿಸುತ್ತಾರೆ. ವೇಣುಗೋಪಾಲ್ ಸತ್ತರೆ ಅದು ಬಿಜೆಪಿ ರಾಜಕೀಯ ಎಂದು ಹೇಳುತ್ತಾರೆ.
ರಾಜ್ಯ ಸರ್ಕಾರ 4ನೇ ಆರೋಪಿಯನ್ನು ಒಂದನೆ ಆರೋಪಿ ಮಾಡಿ ಒಂದನೆ ಆರೋಪಿಯನ್ನು ರಕ್ಷಣೆ ಮಾಡಲು ನೋಡುತ್ತಾರೆ.
ಇದು ಕಾಂಗ್ರೆಸ್ ಇಂದು ಮಾಡುತ್ತಿರುವ ನೀತಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು 135 ಸ್ಥಾನ ಗೆದ್ದಿದ್ದೇವೆ ಎನ್ನುವ ದರ್ಪದಲ್ಲಿ ಹೋಗುತ್ತಿದ್ದಾರೆ. ಅವರ ದರ್ಪಕ್ಕೆ ರಾಜ್ಯದ ಜನ ಮುಂದೆ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್ ವಿರುದ್ಧ ರೆಬಲ್ ಆಗಿದ್ದ ಶೋಭಾ ಬಿಜೆಪಿಗೆ ಮಹಿಳಾ ರಾಜ್ಯಾಧ್ಯಕ್ಷೆ ಹಾಗೂ ವಿಪಕ್ಷ ನಾಯಕನ ಸ್ಥಾನದ ಪ್ರಶ್ನೆಗೆ ಉತ್ತರಿಸದೆ ಹೋದರು.