
ಮಂಗಳೂರು (ಜ.05): ‘ರಸ್ತೆ ಮತ್ತಿತರರ ಅಭಿವೃದ್ಧಿ ಕಾಮಗಾರಿಗಳನ್ನು ಜನಪ್ರತಿನಿಧಿಗಳು ಮಾಡುತ್ತಾರೆ. ನೀವು ಲವ್ ಜಿಹಾದ್ ಮುಂತಾದವುಗಳ ಮೂಲಕ ಸಮಾಜದಲ್ಲಿ ವಿಷದ ವಾತಾವರಣ ಉಂಟು ಮಾಡುವವರ ವಿರುದ್ಧ ಜಾಗೃತರಾಗಿರಬೇಕು’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದು, ಅದೀಗ ತೀವ್ರ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ದ್ವೇಷದ ರಾಜಕಾರಣ ಬಿಟ್ಟು ಅವರಿಗೆ ಇನ್ನೇನು ಬರುತ್ತೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರೆ, ಅಭಿವೃದ್ಧಿ ಮಾಡುವ ಯೋಗ್ಯತೆ ಇಲ್ಲದೆ ಭಾವನಾತ್ಮಕ ವಿಚಾರ ಮುಂದೆ ತರುತ್ತಿದ್ದಾರೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ಹೊರಹಾಕಿದ್ದಾರೆ. ಆದರೆ, ಬಿಜೆಪಿ ಶಾಸಕ ಭರತ್‌ಶೆಟ್ಟಿ ಮಾತ್ರ ನಳಿನ್ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಮೋದಿ ಎದುರಿಗೆ ಸಿಎಂ ಬೊಮ್ಮಾಯಿ ನಾಯಿಮರಿ: ಸಿದ್ದು ಹೇಳಿಕೆ, ಬಿಜೆಪಿ ಕಿಡಿ
ಕಟೀಲ್ ಹೇಳಿದ್ದೇನು?: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬಿಜೆಪಿ ಭೂತ್ ವಿಜಯ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಕಟೀಲ್, ಲವ್ ಜಿಹಾದ್ ನಿಲ್ಲಿಸಲು ಬಿಜೆಪಿ ಬೇಕು. ರಸ್ತೆ ಮತ್ತಿತರರ ಅಭಿವೃದ್ಧಿ ಕಾಮಗಾರಿಗಳನ್ನು ಜನಪ್ರತಿನಿಧಿಗಳು ಮಾಡುತ್ತಾರೆ. ಯಾರದೋ ತುಷ್ಟೀಕರಣಕ್ಕೆ ಜೀವನ ಹಾಳು ಮಾಡಿಕೊಳ್ಳಬೇಡಿ, ಲವ್ ಜಿಹಾದ್ ಮುಂತಾದವುಗಳ ಮೂಲಕ ಸಮಾಜದಲ್ಲಿ ವಿಷದ ವಾತಾವರಣ ಉಂಟು ಮಾಡುವವರ ವಿರುದ್ಧ ಜಾಗೃತರಾಗಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದರು.
ಸಂಸದ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಖಾದರ್, ರಸ್ತೆ, ಚರಂಡಿ ಸೇರಿ ಮೂಲ ಸವಲತ್ತುಗಳ ಅಭಿವೃದ್ಧಿ ಮಾಡುವ ಯೋಗ್ಯತೆ ಹಾಗೂ ಅರ್ಹತೆ ಅವರಿಗೆ ಇಲ್ಲ. ಬದಲಾಗಿ ಭಾವನಾತ್ಮಕ ವಿಚಾರಗಳನ್ನು ಮುಂದೆ ತರುತ್ತಿದ್ದಾರೆ. ಕರಾವಳಿ ಜನರಿಗೆ ಕನಿಷ್ಠ ಕುಚ್ಚಲಕ್ಕಿಯನ್ನೂ ಕೊಡಲು ಅವರಿಂದ ಆಗಿಲ್ಲ. ಇಂಥವರಿಂದ ಅಭಿವೃದ್ಧಿ ಕುರಿತಾದ ಹೇಳಿಕೆ ಬರಲು ಸಾಧ್ಯವಿಲ್ಲ ಎಂದರು.
ಇನ್ನು ಬಿಜೆಪಿಯವರೇ ಆದ ಎಂಎಲ್ಸಿ ಎಚ್.ವಿಶ್ವನಾಥ್ ಕೂಡ ಕಟೀಲ್ ಹೇಳಿಕೆಗೆ ಅಸಮಾಧಾನ ಹೊರಹಾಕಿದ್ದು, ರಾಜ್ಯವನ್ನಾಳುವ ಪಕ್ಷದ ಅಧ್ಯಕ್ಷ ಹೀಗೆ ಅರ್ಥವಿಲ್ಲದ ಮಾತುಗಳನ್ನಾಡಬಾರದು. ಕಟೀಲರಿಗೆ ಅದು ಸಣ್ಣ ಪುಟ್ಟ ವಿಷಯವೇ ಆಗಿರಬಹುದು. ಆದರೆ ಕೇರಿಯಲ್ಲಿ ಬದುಕುವವರಿಗೆ ಮೂಲಭೂತ ಸೌಲಭ್ಯವೇ ಮುಖ್ಯ. ಲವ್ ಜಿಹಾದ್ ಹೆಸರಿನಲ್ಲಿ ಜನರ ಹಾದಿ ತಪ್ಪಿಸಬೇಡಿ ಎಂದು ತಿಳಿಸಿದರು.
ಅಧಿವೇಶನದಲ್ಲಿ ಸೈಲೆಂಟ್ ಆಗಿದ್ದವರು ಇಲ್ಲಿ ರಾಜಕೀಯ ಮಾಡುತ್ತಿದ್ದಾರೆ: ಸಿದ್ದರಾಮಯ್ಯ ವಿರುದ್ಧ ಶೆಟ್ಟರ್ ಕಿಡಿ
ಬಿಜೆಪಿಯೆಂದರೆ ಮನುಷ್ಯತ್ವ ಇಲ್ಲದವರು. ಮಾನವೀಯತೆ ಇಲ್ಲದವರು. ಬಿಜೆಪಿ ಅಂದರೆ ಸುಳ್ಳು. ದ್ವೇಷದ ರಾಜಕಾರಣ ಬಿಟ್ಟು ಅವರಿಗೆ ಇನ್ನೇನು ಬರುತ್ತೆ.
- ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.