ಕಾಂಗ್ರೆಸ್‌ನಲ್ಲಿ ಅಪ್ಪ-ಮಕ್ಕಳಿಗೆ ಟಿಕೆಟ್‌ ಬೇಡಿಕೆ: ಕುಟುಂಬ ರಾಜಕಾರಣಕ್ಕೆ ಒಪ್ಪಲ್ಲ ಎಂದ ವರಿಷ್ಠರು

By Sharath Sharma KalagaruFirst Published Nov 9, 2022, 11:03 AM IST
Highlights

Karnataka Vidhan Sabha election 2023: ಕಾಂಗ್ರೆಸ್‌ನ ಹಲವು ನಾಯಕರು ತಮ್ಮ ಮಕ್ಕಳಿಗೂ ಈ ಬಾರಿ ಚುನಾವಣೆಯಲ್ಲಿ ಟಿಕೆಟ್‌ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಟಿಕೆಟ್‌ ನೀಡಿದರೆ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಆದರೆ ಹೈಕಮಾಂಡ್‌ ಕುಟುಂಬ ರಾಜಕಾರಣಕ್ಕೆ ಒಪ್ಪಿಗೆ ನೀಡುತ್ತಿಲ್ಲ.

ಬೆಂಗಳೂರು: ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು ಈಗಾಗಲೇ ಎಲ್ಲಾ ಪಕ್ಷಗಳು ಸಿದ್ಧತೆ ನಡೆಸಿಕೊಳ್ಳುತ್ತಿವೆ. ಜೆಡಿಎಸ್‌ ಈಗಾಗಲೇ ಮೈಸೂರು ಭಾಗದ ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನೂ ಘೋಷಿಸಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದ್ದು, ಜೆಡಿಎಸ್‌ ಮತ್ತೆ ಕಿಂಗ್‌ ಮೇಕರ್‌ ಆಗುವ ಎಲ್ಲಾ ಸಾಧ್ಯತೆಯೂ ಇದೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಶಾಸಕರು, ಮಾಜಿ ಶಾಸಕರು ತಮ್ಮ ಜೊತೆಗೆ ತಮ್ಮ ಮಕ್ಕಳಿಗೂ ಈ ಬಾರಿ ಚುನಾವಣೆಯಲ್ಲಿ ಟಿಕೆಟ್‌ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಆದರೆ ಪಕ್ಷದ ವರಿಷ್ಠರು ಕುಟುಂಬ ರಾಜಕಾರಣಕ್ಕೆ ಸಮ್ಮತಿ ನೀಡುತ್ತಿಲ್ಲ. ಸೋತ ಕ್ಷೇತ್ರಗಳನ್ನು ಗೆಲ್ಲುವತ್ತ ಕೆಲಸ ಮಾಡಿ. ಅದರ ಬದಲು ಮಕ್ಕಳಿಗೇ ಟಿಕೆಟ್‌ ನೀಡಿ ಎಂದು ಕೇಳುವುದನ್ನು ಒಪ್ಪುವುದಿಲ್ಲ ಎಂಬ ಖಡಕ್‌ ಸಂದೇಶ ನೀಡಿದೆ. ಕುಟುಂಬ ರಾಜಕಾರಣದಿಂದ ಕಾಂಗ್ರೆಸ್‌ ಗಳಿಸಿಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಇತ್ತೀಚೆಗೆ ಹೆಚ್ಚು. ಇದೇ ಕಾರಣಕ್ಕೆ ತಮ್ಮ ಕ್ಷೇತ್ರದ ಜೊತೆಗೆ ಸೋತ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗೆಲುವು ಸಿಗುವಂತೆ ನೋಡಿಕೊಳ್ಳಿ ಎಂದು ಪಕ್ಷ ತಾಕೀತು ಮಾಡಿದೆ. 

ಯಾವ ನಾಯಕರ ಮಕ್ಕಳಿಗೆ ಟಿಕೆಟ್‌ ಕೇಳುತ್ತಿದ್ಧಾರೆ?:

ಹಲವು ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ವರಿಷ್ಠರ ಮೇಲೆ ಒತ್ತಡ ಹೇರಿರುವ ಅಪ್ಪ - ಮಕ್ಕಳಿಗೆ ಹೈಕಮಾಂಡ್‌ ಒಪ್ಪಿಗೆ ನೀಡುತ್ತಿಲ್ಲ. ಆದರೂ ಲಾಬಿ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಳಿಯಾಳ ಕ್ಷೇತ್ರದಲ್ಲಿ ಆರ್ ವಿ.ದೇಶಪಾಂಡೆ, ಯಲ್ಲಾಪುರ ಕ್ಷೇತ್ರದಲ್ಲಿ ಪ್ರಶಾಂತ ದೇಶಪಾಂಡೆ. ಯಮಕನಮರಡಿ ಕ್ಷೇತ್ರದಲ್ಲಿ ಪ್ರಿಯಾಂಕಾ ಸತೀಶ್ ಜಾರಕಿಹೊಳಿ. ಸವದತ್ತಿ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ. ಶಿರಾ ಕ್ಷೇತ್ರದಲ್ಲಿ ಟಿ.ಬಿ.ಜಯಚಂದ್ರ. ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸಂತೋಷ ಜಯಚಂದ್ರ. ಈ ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಿದರೆ ಎರಡೂ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತೇವೆ ಎಂಬ ಭರವಸೆಯನ್ನು ಆಕಾಂಕ್ಷಿಗಳು ಕೊಟ್ಟಿದ್ದಾರೆ. 

ನನ್ನ ಜೊತೆ ಮಗನಿಗೂ ಟಿಕೆಟ್​ ನೀಡುವಂತೆ ಕೋಳಿವಾಡ ಕೂಡ ಮನವಿ ಮಾಡಿದ್ದಾರೆ. ಪುತ್ರ ಭೀಮಸೇನ್‌ಗೆ ಟಿಕೆಟ್ ನೀಡಲು ಚಿಮ್ಮನಕಟ್ಟಿ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದಾರೆ. 

ಟಿಕೆಟ್ ಬಯಸಿರುವ ಅಪ್ಪ ಮಕ್ಕಳ ವಿರುದ್ಧ ಕಾಂಗ್ರೆಸ್ ವರಿಷ್ಠರು ಅಸಮಾಧಾನಗೊಂಡಿದ್ದಾರೆ. ಲಾಭಿಗೆ ಮಣಿದು ಟಿಕೆಟ್ ಕೊಟ್ಟರೆ ಲಾಭಕ್ಕಿಂದ ನಷ್ಟವೇ ಹೆಚ್ಚು ಆಗಲಿದೆ ಎಂಬುದು ಪಕ್ಷದ ಅಭಿಪ್ರಾಯ. ಕಳೆದ ಬಾರಿ ಚುನಾವಣೆಯಲ್ಲಿ ಎರಡು ಕ್ಷೇತ್ರ ಸೋತಿರುವ ಉದಾಹರಣೆ ನಮ್ಮ ಮುಂದಿದೆ. ಇಂತಹ ದುಸ್ಸಾಹಸ ಮಾಡುವ ಬದಲು ಬೇರೆಯವರ ಕ್ಷೇತ್ರ ಗೆಲ್ಲಿಸಲು ಪ್ರಯತ್ನ ಪಡಬೇಕು ಎಂದು ದೇಶಪಾಂಡೆ ಮತ್ತು ಸತೀಶ್ ಜಾರಕಿಹೊಳಿ ಅವರಿಗೆ ಪಕ್ಷ ತಿಳಿಸಿದೆ ಎನ್ನಲಾಗಿದೆ. 

ಇದನ್ನೂ ಓದಿ: ಮತ್ತೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ: ಸಿದ್ದರಾಮಯ್ಯ

ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದುಕೊಂಡಿರುವ ಕ್ಷೇತ್ರ ಪಡೆಯಲು ದೇಶಪಾಂಡೆ ಮುಂದಾಗಬೇಕು. ಬೆಳಗಾವಿಯಲ್ಲಿ ಹೆಚ್ಚು ಸ್ಥಾನ ಪಡೆಯಲು ಸತೀಶ್ ಜಾರಕಿಹೊಳಿ ಪ್ಲಾನ್ ಮಾಡಬೇಕು. ಹೆಚ್ಚು ಸ್ಥಾನ ಗಳಿಸಲು ನೀವು ಪ್ರಯತ್ನ ಪಡಬೇಕಿದ್ದು, ನಿಮ್ಮ ಕುಟುಂಬ ಪರ ನಿಲ್ಲಬೇಡಿ ಎಂದು ಅಪ್ಪ - ಮಕ್ಕಳಿಗೂ ಟಿಕೆಟ್ ನೀಡಿ ಅಂತ ಹೇಳಿದವರಿಗೆ ಖಡಕ್ ಆಗಿಯೇ ಸೂಚನೆ ನೀಡಲಾಗಿದೆ. ವರಿಷ್ಠರ ಸೂಚನೆಗೆ ಬೇಸರ ವ್ಯಕ್ತಪಡಿಸಿರುವ ಆಕಾಂಕ್ಷಿಗಳು, ಸಿದ್ಧರಾಮಯ್ಯ, ರಾಮಲಿಂಗಾರೆಡ್ಡಿ, ಎಂ.ಕೃಷ್ಣಪ್ಪ ಅವರಿಗೆ ಈ ಪದ್ದತಿ ಅನ್ವಯವಾಗಲ್ವೇ...? ಎಂದು ಪ್ರಶ್ನಿಸುತ್ತಿದ್ದಾರೆ. ಈಗಾಗಲೇ ಅಪ್ಪ ಮಕ್ಕಳು ಕಾಂಗ್ರೆಸ್ ಶಾಸಕರಾಗಿಲ್ವೇ ಎಂದು  ಪ್ರಶ್ನಿಸಿರುವ ಆಕಾಂಕ್ಷಿಗಳು.

ಈಗಾಗಲೇ ಶಾಸಕರಾಗಿರುವವರಿಗೆ ಟಿಕೆಟ್ ಕೊಡಲು ತಿರ್ಮಾನಿಸಲಾಗಿದೆ. ಹೊಸದಾಗಿ ಅಪ್ಪ - ಮಕ್ಕಳಿಗೆ ಟಿಕೆಟ್ ಕೊಡುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಲಾಭಿ - ಒತ್ತಡಕ್ಕೆ ಮಣಿದು ಕ್ಷೇತ್ರ ಕಳೆದುಕೊಳ್ಳಲ್ಲ ಅಂತ ಖಡಕ್ಕಾಗಿ ತಿರುಗೇಟು ನೀಡಲಾಗಿದೆ. ವರಿಷ್ಠರ ಮಾತಿನಿಂದ ಎರಡೆರಡು ಕ್ಷೇತ್ರದ ಮೇಲೆ ಕಣ್ಣಿಟ್ಟ ಅಪ್ಪ - ಮಕ್ಕಳಿಗೆ ಭಾರೀ ನಿರಾಸೆಯಾಗಿದೆ.

ಇದನ್ನೂ ಓದಿ: SC, ST ಮೀಸಲಾತಿ ಹೆಚ್ಚಳ ಅಸ್ತ್ರ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಇದುವೇ ಶಸ್ತ್ರ.?!

ಬಿಜೆಪಿ - ಜೆಡಿಎಸ್‌ನಲ್ಲೂ ಇದೇ ಬೇಡಿಕೆ:

ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವಂತೆಯೇ ಬಿಜೆಪಿ ಮತ್ತು ಜೆಡಿಎಸ್‌ನಲ್ಲೂ ಇದೇ ರೀತಿಯ ಲಾಬಿ ನಡೆಯುತ್ತಿದೆ. ಸಿದ್ದರಾಮಯ್ಯ - ಯತೀಂದ್ರ, ಎಂ ಕೃಷ್ಣಪ್ಪ - ಪ್ರಿಯಾಕೃಷ್ಣ, ರಾಮಲಿಂಗಾರೆಡ್ಡಿ - ಸೌಮ್ಯಾ ರೆಡ್ಡಿ ಈಗಾಗಲೇ ಟಿಕೆಟ್‌ ಪಡೆದು ಶಾಸಕರಾಗಿದ್ದಾರೆ. ಇವರಿಗೆ ಮತ್ತೆ ಟಿಕೆಟ್‌ ಸಿಗಲಿದೆ. ಜತೆಗೆ ಬಿಜೆಪಿಯಲ್ಲಿ ಬಿಎಸ್‌ ಯಡಿಯೂರಪ್ಪ ಶಿಕಾರಿಪುರದಿಂದ ಬಿವೈ ವಿಜಯೇಂದ್ರ ಅವರಿಗೆ ಟಿಕೆಟ್‌ ನೀಡುವಂತೆ ಕೋರಿದ್ದಾರೆ. ಜೆಡಿಎಸ್‌ನಲ್ಲಿ ಜಿಟಿ ದೇವೇಗೌಡ ಮಗ ಹರೀಶ್‌ ಗೌಡ ಅವರಿಗೆ ಹುಣಸೂರಿನಿಂದ ಈಗಾಗಲೇ ಟಿಕೆಟ್‌ ನೀಡಲಾಗಿದೆ. ನಿಖಿಲ್‌ ಕುಮಾರಸ್ವಾಮಿ ಕೂಡ ಈ ಬಾರಿ ಚುನಾವಣೆಗೆ ನಿಲ್ಲುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಕುಟುಂಬ ರಾಜಕಾರಣ ಭಾರತದ ರಾಜಕೀಯ ವ್ಯವಸ್ಥೆಯ ಭಾಗವಾಗಿದೆ. ಇದರಿಂದ ರಾಜಕೀಯ ಪಕ್ಷಗಳು ಸಂಪೂರ್ಣವಾಗಿ ಆಚೆ ಬರುವುದು ಅಸಾಧ್ಯ. 

click me!