* ಬಿಜೆಪಿ ಲೀಡರ್ ಬರ್ತಡೇಗೆ ಕಾಂಗ್ರೆಸ್ ಮುಖಂಡನ ಶುಭಾಶಯ
* ಫ್ಲೆಕ್ಸ್ ಹಾಕಿ ಶುಭಾಶಯ ಕೋರಿದ ಕಾಂಗ್ರೆಸ್ ಮುಖಂಡ
* ಕೊಪ್ಪಳ ಜಿಲ್ಲಾ ರಾಜಕಾರಣದಲ್ಲಿ ಸಂಚಲನ
ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ, (ಏ.28): ಅವರವರ ಪಕ್ಷದ ನಾಯಕರುಗಳ ಹುಟ್ಟುಹಬ್ಬಕ್ಕೆ ಅವರವರ ಪಕ್ಷದ ಮುಖಂಡರು, ಕಾರ್ಯಕರ್ತರು ಶುಭಾಶಯ ಕೋರಿ ಫ್ಲೆಕ್ಸ್ ಹಾಕಿಸುವುದು ಕಾಮನ್. ಆದರೆ ಇಲ್ಲೊಂದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡನೊಬ್ಬ ,ಬಿಜೆಪಿ ಪಕ್ಷದ ಮುಖಂಡನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಬ್ಯಾನರ್ ಹಾಕಿಸಿದ್ದು, ಅಚ್ಚರಿಗೆ ಕಾರಣವಾಗಿದೆ.
ಹೌದು... ನಾಳೆ ಅಂದ್ರೆ 29-04-2022 ರಂದು ಕೊಪ್ಪಳ ಜಿಲ್ಲೆಯ ಬಿಜೆಪಿ ಮುಖಂಡ ಹಾಗೂ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್ ಅವರ ಹುಟ್ಟುಹಬ್ಬ ಇದೆ. ಈ ಹಿನ್ನಲೆಯಲ್ಲಿ ಈಗಾಗಲೇ ನಗರದ ಹಲವೆಡೆ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಕಾರ್ಯಕರ್ತರು, ಅಭಿಮಾನಿಗಳು ಫ್ಲೆಕ್ಸ್ ಹಾಕಿದ್ದಾರೆ. ಅದರಂತೆ ಕಾಂಗ್ರೆಸ್ ನ ಯುವಮುಖಂಡ ಸಹ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ ವಿ ಚಂದ್ರಶೇಖರ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ನಗರದ ಪ್ರಮುಖ ವೃತ್ತವಾದ ಅಶೋಕ ವೃತ್ತದಲ್ಲಿ ಫ್ಲೆಕ್ಸ್ ಹಾಕಿಸಿದ್ದಾರೆ.
ಕೊಪ್ಪಳದಿಂದ ಸ್ಪರ್ಧೆ ಮಾಡ್ತಾರಾ ಸಿದ್ದರಾಮಯ್ಯ
ಯಾರು ಆ ಕಾಂಗ್ರೆಸ್ ಯುವ ಮುಖಂಡ?
ಎನ್ ಎಸ್ ಯು ಐ (ದಿ ನ್ಯಾಶನಲ್ ಸ್ಟೂಡೆಂಟ್ಸ್ ಯುನಿಯನ್ ಆಫ್ ಇಂಡಿಯಾ) ಸಂಘಟನೆ ಯಾರಿಗೆ ತಾನೇ ಗೋತ್ತಿಲ್ಲ ಹೇಳಿ.
ಎನ್ ಎಸ್ ಯು ಐ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾಗಿದೆ. ಈ ಘಟಕಕ್ಕೆ ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲಾ ಅಧ್ಯಕ್ಷರು ಇರುವಂತೆ ಕೊಪ್ಪಳದಲ್ಲಿಯೂ ಸಹ ಜಿಲ್ಲಾಧ್ಯಕ್ಷರಿದ್ದಾರೆ. ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ನವೀನಕುಮಾರ್ ಮಾದಿನೂರ್ ಎನ್ನುವರು ಅಧ್ಯಕ್ಷರಿದ್ದಾರೆ. ಈ ನವೀನಕುಮಾರ್ ಮಾದಿನೂರ್ ಇದೀಗ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ ವಿ ಚಂದ್ರಶೇಖರ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಫ್ಲೆಕ್ಸ್ ಹಾಕಿಸಿದ್ದಾರೆ.
ಚರ್ಚೆಗೆ ಗ್ರಾಸವಾದ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷನ ನಡೆ
ಇನ್ನು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ ವಿ ಚಂದ್ರಶೇಖರ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ನವೀನಕುಮಾರ್ ಮಾದಿನೂರ ಫ್ಲೆಕ್ಸ್ ಹಾಕಿಸಿರುವುದು ಇದೀಗ ಕೊಪ್ಪಳ ಜಿಲ್ಲಾ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಮಸವಾಗಿದೆ. ಸಿ ವಿ ಚಂದ್ರಶೇಖರ್ ಹಾಗೂ ನವೀನ ಕುಮಾರ ಮಾದಿನೂರ ಅವರ ನಡುವಿನ ಆತ್ಮೀಯತೆ ಇದ್ದರೆ ಫ್ಲೆಕ್ಸ್ ಹಾಕಿಸಲಿ.ಆದರೆ ಎನ್ ಎಸ್ ಯು ಐ ಸಂಘಟನೆಯ ಜಿಲ್ಲಾಧ್ಯಕ್ಷನೆಂದು ಫ್ಲೆಕ್ಸ್ ಹಾಕಿಸುವ ಅವಶ್ಯಕತೆ ಏನಿತ್ತು ಎಂದು ಬಿಜೆಪಿ-ಕಾಂಗ್ರೆಸ್ ನ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.
ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ನವೀನಕುಮಾರ್ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಬರ್ತಡೇ ಶುಭಾಶಯ ಕೋರಿ ಹಾಕಿರುವ ಫ್ಲೆಕ್ಸ್ ಇದೀಗ ಭಾರೀ ವೈರಲ್ ಆಗುತ್ತಿದೆ. ಇದನ್ನು ಗಮನಿಸಿದ್ದರೂ ಸಹ ಕಾಂಗ್ರೆಸ್ ಮುಖಂಡರು ಸುಮ್ಮನಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.