ಪ್ರಧಾನಿ ಮೋದಿಗೆ ಐದು ಪ್ರಶ್ನೆ: ವಿಷಯಾಂತರ ಮಾಡದೇ ನೇರವಾಗಿ ಉತ್ತರಿಸಿ ಎಂದ ಕಾಂಗ್ರೆಸ್‌

By Girish Goudar  |  First Published Apr 28, 2022, 10:45 AM IST

*  2014ರಲ್ಲಿ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್‌ ಬೆಲೆ 414 ರು. ಇತ್ತು
*  ಇದನ್ನು ನೀವು ಸಾವಿರ ರುಪಾಯಿಗೆ ಏರಿಸಿದ್ದೀರಿ
*  ಸಬ್ಸಿಡಿ ರೂಪದಲ್ಲಿ ಹಿಂದಿರುಗಿಸಿ: ಖರ್ಗೆ ಒತ್ತಾಯ


ಬೆಂಗಳೂರು(ಏ.28):  ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡುವಂತೆ ಸಲಹೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಐದು ಪ್ರಶ್ನೆ ಕೇಳಿರುವ ಕಾಂಗ್ರೆಸ್‌(Congress), ವಿಷಯಾಂತರ ಮಾಡದೆ ನೇರ ಉತ್ತರ ನೀಡಿ ಎಂದು ಆಗ್ರಹಿಸಿದೆ.

ಕೆಪಿಸಿಸಿ(KPCC) ನೂತನ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ(Randeep Surjewala) ಅವರು, ಪ್ರಧಾನಿ ಮೋದಿ ಅವರಿಗೆ ನಾವು ಸರಳವಾಗಿರುವ ಐದು ಪ್ರಶ್ನೆ ಕೇಳುತ್ತಿದ್ದು ನೇರವಾಗಿ ಸತ್ಯ ಹೇಳಲಿ ಎಂದು ಒತ್ತಾಯಿಸಿದರು.

Tap to resize

Latest Videos

ಸಂತೋಷ್‌ ಆತ್ಮಹತ್ಯೆ ಪ್ರಕರಣ: ಸಿಎಂ ಕಂಡಲ್ಲೆಲ್ಲಾ ಘೇರಾವ್‌ ಹಾಕ್ತೀವಿ, ಸುರ್ಜೇವಾಲಾ

1. ಕಾಂಗ್ರೆಸ್‌ ಅವಧಿಯಲ್ಲಿ ಪೆಟ್ರೋಲ್‌ನ(Petrol) ಅಬಕಾರಿ ಸುಂಕ 9.48 ರು. ಇತ್ತು. ಅದನ್ನು ನೀವು 28 ರುಪಾಯಿಗೆ ಏರಿಕೆ ಮಾಡಿದ್ದೀರಿ. ಹಳೆಯ ಪ್ರಮಾಣಕ್ಕೆ ಯಾವಾಗ ಇಳಿಸುತ್ತೀರಿ. ಡೀಸೆಲ್‌ನ(Diesel) ಅಬಕಾರಿ ಸುಂಕ 3.56 ರು. ಇತ್ತು. ಮೋದಿ ಅವರೇ, ಇದನ್ನು 21.80 ರುಪಾಯಿಗೆ ಏರಿಕೆ ಮಾಡಿದ್ದೀರಿ. ಯಾವಾಗ ಹಿಂಪಡೆಯುತ್ತೀರಿ ?

2. ಕಳೆದ 8 ವರ್ಷದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕದಿಂದ 27 ಲಕ್ಷ ಕೋಟಿ ರು. ಸಂಗ್ರಹಿಸಿದೆ. ಈ ಹಣವನ್ನು ದೇಶದ ಜನ ಸಾಮಾನ್ಯರಿಗೆ ಪರಿಹಾರವಾಗಿ ಯಾವಾಗ ಹಿಂತಿರುಗಿಸುತ್ತೀರಿ?

3. 2014ರಲ್ಲಿ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್‌ ಬೆಲೆ(Cylinder Price) 414 ರು. ಇತ್ತು. ಇದನ್ನು ನೀವು ಸಾವಿರ ರುಪಾಯಿಗೆ ಏರಿಸಿದ್ದೀರಿ. ಇದನ್ನು ಯಾವಾಗ ಹಿಂಪಡೆಯುತ್ತೀರಿ, ಜನರ ಹೊರೆ ಇಳಿಸುತ್ತೀರಿ?

4. ಮನಮೋಹನ್‌ ಸಿಂಗ್‌(Manmohan Singh) ಸರ್ಕಾರ ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲಕ್ಕೆ ವಾರ್ಷಿಕವಾಗಿ 1.50 ಲಕ್ಷ ಕೋಟಿ ರು. ಸಬ್ಸಿಡಿ ನೀಡುತ್ತಿತ್ತು. ಈ ಸಬ್ಸಿಡಿ ರದ್ದು ಮಾಡಿದ್ದು, ಅದನ್ನು ಮತ್ತೆ ಯಾವಾಗ ನೀಡುತ್ತೀರಿ?

5. ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಹಿಮಾಚಲ, ಅಸ್ಸಾಂ, ಉತ್ತರಾಖಂಡ ರಾಜ್ಯಗಳಲ್ಲಿ ರಾಜ್ಯ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಯಾವಾಗ ಸೂಚನೆ ನೀಡುತ್ತೀರಿ?

ಸಬ್ಸಿಡಿ ರೂಪದಲ್ಲಿ ಹಿಂದಿರುಗಿಸಿ: ಖರ್ಗೆ ಒತ್ತಾಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲದ ಮೇಲೆ ಸಾಕಷ್ಟುಅಬಕಾರಿ ಸುಂಕ ವಿಧಿಸಿದ್ದು, ಕಳೆದ 8 ವರ್ಷದಲ್ಲಿ 27 ಲಕ್ಷ ಕೋಟಿ ರು. ಸಂಪಾದಿಸಿದ್ದಾರೆ. ಆ ಹಣದಲ್ಲಿ ಅರ್ಧದಷ್ಟನ್ನು ಜನರಿಗೆ ಸಬ್ಸಿಡಿ ರೂಪದಲ್ಲಿ ನೀಡಬೇಕು ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಆಗ್ರಹಿಸಿದರು. 

ಕರ್ನಾಟಕ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮೊದಲು ಇಂಧನ ತೈಲದ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿ ನಂತರ ಬೇರೆ ರಾಜ್ಯಗಳಿಗೆ ಹೇಳಲಿ. ಎಲ್ಲರೂ ಸೇರಿ ದೇಶ ಕಟ್ಟುವ ಕೆಲಸ ಮಾಡಬೇಕೇ ಹೊರತು ಬಡವರು, ರೈತರ ಮೇಲೆ ಹೊರೆ ಹಾಕಬಾರದು. ಇಲ್ಲದಿದ್ದರೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ದೌರ್ಭಾಗ್ಯಗಳ ಸರ್ಕಾರ: ಸಿದ್ದು ಆಕ್ರೋಶ

ಬೆಂಗಳೂರು: ಕೇಂದ್ರ ಸರ್ಕಾರ(Central Government) ಬೆಲೆ ಏರಿಕೆ ತಡೆಗಟ್ಟುವಲ್ಲಿ ವಿಫಲವಾಗಿದೆ. ರೈತರಿಂದ ಯದ್ವಾತದ್ವ ತೆರಿಗೆ ವಸೂಲಿ ಮಾಡುತ್ತಿದೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ನಮ್ಮದು ಭಾಗ್ಯಗಳ ಸರ್ಕಾರವಾಗಿತ್ತು. ಆದರೆ ಇಂದು ದೌರ್ಭಾಗ್ಯಗಳ ಸರ್ಕಾರ ಅಧಿಕಾರದಲ್ಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಆಕ್ರೋಶ ವ್ಯಕ್ತಪಡಿಸಿದರು.

Congress Padayatre: ಮೇಕೆದಾಟು ಜಾರಿ ಇಚ್ಛಾಶಕ್ತಿ ಬಿಜೆಪಿಗಿಲ್ಲ: ಸುರ್ಜೇವಾಲಾ

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗುತ್ತಿಗೆದಾರರ ಸಂಘದವರು ಶೇ.40 ರಷ್ಟುಕಮೀಷನ್‌ ಕೇಳುತ್ತಿರುವ ಬಗ್ಗೆ ಪ್ರಧಾನಮಂತ್ರಿಗೆ ಪತ್ರಬರೆದು ದೂರು ನೀಡಿದ್ದಾರೆ. 10 ತಿಂಗಳಾದರೂ ಪ್ರಧಾನಿ ಕ್ರಮ ಕೈಗೊಂಡಿಲ್ಲ. ನಾನು ತಿನ್ನಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂದು ಪ್ರಧಾನಿ ಈ ಹಿಂದೆ ಹೇಳಿದ್ದರು. ಈಗ ಮೌನವಾಗಿರುವುದು ನೋಡಿದರೆ ಭ್ರಷ್ಟಾಚಾರಕ್ಕೆ ಕೇಂದ್ರದ ಕುಮ್ಮಕ್ಕು ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ತಲೆಮರೆಸಿಕೊಂಡು 15 ದಿನವಾದರೂ ಬಂಧಿಸಿಲ್ಲ. ಅವರಿಗೆ ಸರ್ಕಾರವೇ ರಕ್ಷಣೆ ನೀಡುತ್ತಿದೆ. ಅಷ್ಟೇ ಅಲ್ಲ ಸಮಾಜದಲ್ಲಿ ಶಾಂತಿ ಕದಡಿ ಕೋಮು ಸಾಮರಸ್ಯ ಹಾಳು ಮಾಡಿದವರನ್ನೂ ರಕ್ಷಣೆ ಮಾಡುತ್ತಿದೆ ಎಂದು ಟೀಕಿಸಿದರು.
 

click me!