
ಬೆಂಗಳೂರು (ಸೆ.10): ರಾಜ್ಯದ ಜನತೆ ಸಾಲು-ಸಾಲು ಸಂಕಷ್ಟಗಳಿಂದ ಹೆಣಗುತ್ತಿದ್ದರೂ ರಾಜ್ಯ ಸರ್ಕಾರವು ಎಂಟು ದಿನಗಳ ಕಾಲ ನಾಮ್‌ಕೆವಾಸ್ತೆ ವಿಧಾನಮಂಡಲ ಅಧಿವೇಶನ ನಡೆಸುತ್ತಿರುವುದು ಜನದ್ರೋಹಿ ಹಾಗೂ ದುಷ್ಟತನದ ಪರಮಾವಧಿ. ಸರ್ಕಾರ ಕೂಡಲೇ ಅಸಾಂವಿಧಾನಿಕವಾಗಿ ನಡೆದುಕೊಳ್ಳುವುದನ್ನು ಬಿಟ್ಟು ಅಧಿವೇಶನವನ್ನು ಹದಿನೈದು ದಿನಗಳ ಕಾಲ ವಿಸ್ತರಿಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿರುವ ಅವರು ಮುಂಗಾರು ಅಧಿವೇಶನವನ್ನು ಸೆ.21 ರಿಂದ ಸೆ.30ರವರೆಗೆ 10 ದಿನಗಳ ಕಾಲ ಮಾತ್ರ ಸೀಮಿತಗೊಳಿಸಲಾಗಿದೆ. ಕನಿಷ್ಠ ಅ.15ರವರೆಗೂ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಜನರನ್ನು ಸಂಕಷ್ಟಕ್ಕೆ ದೂಡಿರುವ ಕೊರೋನಾ ಹಾಗೂ ನೆರೆ ನಿರ್ವಹಣೆ ವೈಫಲ್ಯ, ಕಾನೂನು ಸುವ್ಯವಸ್ಥೆ ವೈಫಲ್ಯ, ಡ್ರಗ್ಸ್ ದಂಧೆ, ಸುಗ್ರೀವಾಜ್ಞೆ ಮೂಲಕ ತಂದಿರುವ 20 ಜನ ವಿರೋಧಿ ವಿಧೇಯಕ ಸೇರಿದಂತೆ 35ಕ್ಕೂ ಹೆಚ್ಚು ವಿಧೇಯಕಗಳ ಬಗ್ಗೆ ಚರ್ಚೆಯಾಗಬೇಕಿದೆ. ಹೀಗಾಗಿ ಸೆ.21 ರಿಂದ ಅ.15ರವರೆಗೆ ಕಲಾಪ ಅವಧಿ ವಿಸ್ತರಿಸಬೇಕು. ಇದರಿಂದ ಜನರ ಕಷ್ಟಗಳ ಬಗ್ಗೆ ಚರ್ಚಿಸಲು ಕನಿಷ್ಠ 21 ದಿನಗಳ ಸಮಯ ಸಿಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯದ ಜನತೆ ಹಿಂದೆಂದೂ ಕಂಡರಿಯದ ಸಂಕಷ್ಟಕ್ಕೆ ಸಿಲುಕಿ ನಲುಗಿದ್ದಾರೆ. ಇಂತಹ ವೇಳೆ ಅಧಿವೇಶನಕ್ಕೆ ಈಗ ನಿಗದಿ ಮಾಡಿರುವ ಸಮಯ ಯಾವುದಕ್ಕೂ ಸಾಕಾಗುವುದಿಲ್ಲ. ಜನರ ಮೇಲೆ ಕಾಳಜಿ ಇಲ್ಲದೆ ನೆಪ ಮಾತ್ರಕ್ಕೆ ಅಧಿವೇಶನ ನಡೆಸುತ್ತಿರುವಂತೆ ಕಾಣುತ್ತಿದೆ ಎಂದು ಟೀಕಿಸಿದ್ದಾರೆ.
ನಾಮ್‌ಕೆವಾಸ್ತೆ ಅಧಿವೇಶನ ಬೇಡ:
ಕರ್ನಾಟಕ ರಾಜ್ಯ ವಿಧಾನಮಂಡಲದ ಸರ್ಕಾರಿ ಕಾರ್ಯಕಲಾಪಗಳ ನಿರ್ವಹಣೆ ಅಧಿ ನಿಯಮ-2005ರ ಸೆಕ್ಷನ್ 3ರ ಪ್ರಕಾರ ಕಡ್ಡಾಯವಾಗಿ 60 ದಿನಗಳಿಗೆ ಕಡಿಮೆ ಇಲ್ಲದಂತೆ ಪ್ರತಿ ವರ್ಷ ಅಧಿವೇಶನ ನಡೆಸಬೇಕು. ಸೆಕ್ಷನ್ 4ರ ಪ್ರಕಾರ ಒಟ್ಟು ನಾಲ್ಕು ಅಧಿವೇಶನ ನಡೆಯಬೇಕು. ಜನವರಿಯಲ್ಲಿ 15, ಮಾರ್ಚಲ್ಲಿ 20, ಜುಲೈನಲ್ಲಿ 15, ನವೆಂಬರ್ ತಿಂಗಳಲ್ಲಿ ಕನಿಷ್ಠ 10 ದಿನ ಅಧಿವೇಶನ ನಡೆಯಬೇಕು. ನಾಮ್‌ಕೆವಾಸ್ತೆ ಅಧಿವೇಶನ ನಡೆಸುವುದು ಬೇಡ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.