ಪಕ್ಷದ ಸಾಮೃರ್ಥ್ಯ ಹೆಚ್ಚಿಸುವ ಸಲುವಾಗಿ ಕಾರ್ಯಪ್ರವೃತ್ತರಾಗಲಾಗುವುದು. ಕಾರ್ಯಕರ್ತರಿಗೆ ಸೂಕ್ತ ರೀತಿಯ ತರಬೇತಿ ಸಹ ನೀಡಲಾಗುವುದು ಎಂದು ಕಾಂಗ್ರೆಸ್ ಮುಖಂಡರೋರ್ವರು ಹೇಳಿದ್ದಾರೆ.
ಬೆಂಗಳೂರು (ಸೆ.10): ಬಿಜೆಪಿಯ ಮೋಸ ಬಯಲು ಮಾಡಲು ಹಾಗೂ ಪಕ್ಷ ಸಂಘಟನೆ ಮಾಡಲು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರತ್ಯೇಕ ತರಬೇತಿ ನೀಡಲಾಗುವುದು. ಜತೆಗೆ ಪ್ರತಿ ಬೂತ್‌ಗೆ ಐದು ಮಂದಿ ವಿಶೇಷ ಯುವಕರನ್ನು ಆಯ್ಕೆ ಮಾಡಲು ‘ಈಚ್ ಬೂತ್ ಫೈವ್ ಯೂತ್’ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹೇಳಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಆ್ಯಂಡ್ರಾಯ್ಡ್ ಆ್ಯಪ್ ಮೂಲಕ ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮಾಡುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸುಭದ್ರ ರಾಷ್ಟ್ರ ಹಾಗೂ ಜ್ಯಾತ್ಯತೀತ ಸಮಾಜ ನಿರ್ಮಾಣ ಯುವಕರಿಂದ ಮಾತ್ರ ಸಾಧ್ಯ. 60 ವರ್ಷಗಳ ಇತಿಹಾಸವಿರುವ ಯುವ ಕಾಂಗ್ರೆಸ್ ಪ್ರಪಂಚದ ಅತಿದೊಡ್ಡ ಬಲಿಷ್ಠ ಯುವ ಸಂಘಟನೆಯಾಗಿದೆ. ಎನ್.ಡಿ. ತಿವಾರಿ, ಎ.ಕೆ. ಆಂಟೋನಿ, ಕಮಲ್‌ನಾಥ್, ದಿಗ್ವಿಜಯ್ ಸಿಂಗ್, ಅಶೋಕ್ ಗೆಹ್ಲೋಟ್, ಕೆ.ಸಿ. ವೇಣುಗೋಪಾಲ್, ಡಿ.ಕೆ. ಶಿವಕುಮಾರ್‌ರಂತಹ ನಾಯಕರು ಯುವ ಕಾಂಗ್ರೆಸ್‌ನಿಂದ ಬಂದವರು. ಹೀಗಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರತ್ಯೇಕ ತರಬೇತಿ ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಸುಳ್ಳಿನ ಸರದಾರರಾಗಿದ್ದು, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಜನರನ್ನು ವಂಚಿಸಿದ್ದಾರೆ. ಕಳೆದ 6 ವರ್ಷದಲ್ಲಿ 12 ಕೋಟಿ ಉದ್ಯೋಗ ಸೃಷ್ಟಿಸಬೇಕಾಗಿದ್ದ ಅವರು 12 ಲಕ್ಷ ಉದ್ಯೋಗವನ್ನೂ ಸೃಷ್ಟಿಸಿಲ್ಲ. ಬದಲಿಗೆ ಯುವಕರೆಲ್ಲರೂ ಉದ್ಯೋಗ ಕಳೆದುಕೊಳ್ಳುವ ಸ್ಥಿತಿಗೆ ದೇಶವನ್ನು ತಂದು ನಿಲ್ಲಿಸಿದ್ದಾರೆ. ಯುವಕರಿಗೆ ಮೋದಿ ಮಾಡಿದ ಮೋಸವನ್ನು ತಲುಪಿಸಬೇಕಾಗಿದೆ ಎಂದು ಕರೆ ನೀಡಿದರು.