Karnataka Congress: ನಾನಿಲ್ಲದೆ ಮೈಸೂರಲ್ಲಿ ಸಭೆ ಮಾಡಬೇಡ: ಡಿಕೆಶಿಗೆ ಸಿದ್ದು

Kannadaprabha News   | Asianet News
Published : Dec 21, 2021, 08:06 AM ISTUpdated : Dec 21, 2021, 09:34 AM IST
Karnataka Congress:  ನಾನಿಲ್ಲದೆ ಮೈಸೂರಲ್ಲಿ ಸಭೆ ಮಾಡಬೇಡ: ಡಿಕೆಶಿಗೆ ಸಿದ್ದು

ಸಾರಾಂಶ

   ನಾನಿಲ್ಲದೆ ಮೈಸೂರಲ್ಲಿ ಸಭೆ ಮಾಡಬೇಡ: ಡಿಕೆಶಿಗೆ ಸಿದ್ದು  ಒಟ್ಟಿಗಿಲ್ಲದಿದ್ದರೆ ತಪ್ಪು ಸಂದೇಶ ಹೋಗುತ್ತೆ  ಬೇಕಿದ್ದರೆ ಕೊಡಗು ಜಿಲ್ಲೆಯಲ್ಲಿ ಮಾಡಿ ಎಂದ ಸಿದ್ದರಾಮಯ್ಯ  

ಸುವರ್ಣಸೌಧ (ಡಿ.21):  ‘ಮೈಸೂರು ಹಾಗೂ ಚಾಮರಾಜನಗರದಲ್ಲಿ (Chamarajanagar)  ನನ್ನ ಅನುಪಸ್ಥಿತಿಯಲ್ಲಿ ಸಭೆ ಮಾಡಬೇಡಿ. ನಾವಿಬ್ಬರೂ ಒಟ್ಟಿಗೆ ಇಲ್ಲದಿದ್ದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರಿಗೆ ಬಹಿರಂಗವಾಗಿಯೇ ಸಲಹೆ ನೀಡಿದ್ದಾರೆ.

ಮೇಕೆದಾಟು ಪಾದಯಾತ್ರೆ ಕುರಿತು ಶಿವಕುಮಾರ್‌ ಅವರು ಅಧಿವೇಶನದ ಅವಧಿಯಲ್ಲೇ ಮೈಸೂರು (Mysuru) ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂಬ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ವಿಧಾನಸಭೆ ಮೊಗಸಾಲೆಯಲ್ಲಿ ಶಿವಕುಮಾರ್‌ (Shivakumar) ಆಗಮಿಸಿದ ವೇಳೆ, ‘ಏ ಅಧ್ಯಕ್ಷ ಬಾರಯ್ಯ. ಕುಳಿತುಕೋ. ಮೈಸೂರಿನಲ್ಲಿ ನೀನು ಸಭೆ ನಡೆಸಬೇಡ. ಎಲ್ಲರೂ ಅಧಿವೇಶನದಲ್ಲಿ ಇರುತ್ತಾರೆ. ಇಂತಹ ಸಂದರ್ಭದಲ್ಲಿ ನೀನು ಹೋಗಿ ಕಾಂಗ್ರೆಸ್ ಸಭೆ ನಡೆಸಿದರೆ ತಪ್ಪು ಸಂದೇಶ ಹೋಗುತ್ತದೆ’ ಎಂದು ಸಿದ್ದರಾಮಯ್ಯ ಹೇಳಿದರು.

ಇದಕ್ಕೆ ಶಿವಕುಮಾರ್‌, ಇಲ್ಲ ಸರ್‌ ಸಭೆ ಮಾಡುತ್ತಿಲ್ಲ. ಸುದ್ದಿಗೋಷ್ಠಿಯಷ್ಟೇ ಎಂದು ಸಮಜಾಯಿಷಿ ನೀಡಿದರು. ಅದೂ ಅಷ್ಟೇ. ಬೇಕಿದ್ದರೆ ಕೊಡಗು ಜಿಲ್ಲೆಯಲ್ಲಿ ಮಾಡಿ ಎಂದರು. ಇದಕ್ಕೆ ಡಿ.ಕೆ. ಶಿವಕುಮಾರ್‌ ತಲೆಯಾಡಿಸಿದರು.

ಡಬಲ್ ಸಂಭ್ರಮದಲ್ಲಿ ಕಾಂಗ್ರೆಸ್ :   ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ(Karnataka MLC Election) ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ರಾಜ್ಯ ಕಾಂಗ್ರೆಸ್ಸಿಗರಿಗೆ(Congress) ಮಾತ್ರವಲ್ಲ ಹೈಕಮಾಂಡ್‌ಗೂ ಉತ್ಸಾಹ ಮೂಡಿಸಿದೆ. ಇದಕ್ಕೆ ಮುಖ್ಯ ಕಾರಣ ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್‌ ಮಾತ್ರವಲ್ಲದೆ, ಮೇಲ್ವರ್ಗವೂ ಕಾಂಗ್ರೆಸ್‌ ಪರ ಒಲವು ತೋರಿರುವುದನ್ನು ಫಲಿತಾಂಶ(Election Result) ಸ್ಪಷ್ಟವಾಗಿ ನಿರೂಪಿಸಿರುವುದು.

ಪರಿಷತ್‌ ಚುನಾವಣೆಗಳಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ವಿಜಯ ಸಾಧಿಸಿದೆ. ಅದರಲ್ಲೂ ವಿಶೇಷವಾಗಿ ಹಳೆ ಮೈಸೂರಿನಲ್ಲಿ ಜೆಡಿಎಸ್‌ನ(JDS) ಪ್ರಬಲ ಕ್ಷೇತ್ರಗಳನ್ನು ಕಬಳಿಸಿರುವುದು ಪಕ್ಷಕ್ಕೆ ಖುಷಿ ನೀಡಿದೆ. ಇದರ ಜತೆಗೆ, ಮುಖ್ಯಮಂತ್ರಿ, ಕೇಂದ್ರದ ಪ್ರಭಾವಿ ಸಚಿವ, ಬಿಜೆಪಿ ಶಾಸಕರೇ ಹೆಚ್ಚಿರುವ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳು ಅತಿ ಹೆಚ್ಚು ಮತಗಳಿಂದ ಗೆದ್ದು, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯನ್ನು(BJP) ಹಿಂದಿಕ್ಕಿದ್ದಾರೆ. ಈ ಎರಡು ಅಂಶಗಳ ಜತೆಗೆ ಯುವಕರಿಗೆ ಟಿಕೆಟ್‌ ನೀಡುವ ರಿಸ್ಕ್‌ ತೆಗೆದುಕೊಂಡ ಕಾಂಗ್ರೆಸ್‌ ನಾಯಕತ್ವದ ನಡೆ ಯಶ ತಂದಿರುವುದು ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಒಕ್ಕಲಿಗ ಡಿಕೆಶಿ ಎಫೆಕ್ಟ್:
ಒಕ್ಕಲಿಗ ಬೆಲ್ಟ್‌ನಲ್ಲಿ ಪಕ್ಷದ ಬೇರು ಮತ್ತಷ್ಟುಗಟ್ಟಿಯಾಗಿವೆ ಎಂಬುದನ್ನು ಈ ಫಲಿತಾಂಶ ನಿರೂಪಿಸುತ್ತಿದೆ. ಜೆಡಿಎಸ್‌ನ ಭದ್ರಕೋಟೆಯೆನಿಸಿದ ಮಂಡ್ಯ, ತುಮಕೂರು, ಕೋಲಾರ ಕ್ಷೇತ್ರಗಳನ್ನು ಪಕ್ಷ ವಶಕ್ಕೆ ತೆಗೆದುಕೊಂಡಿದೆ. ಜತೆಗೆ, ಬೆಂಗಳೂರು ಗ್ರಾಮಾಂತರ, ಮೈಸೂರು ಕ್ಷೇತ್ರಗಳಲ್ಲೂ ಜಯಗಳಿಸಿದೆ. ಇದನ್ನು ಒಕ್ಕಲಿಗ ಮತಗಳು ಈ ಬಾರಿ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್‌ನತ್ತ ವಾಲಿರುವುದರ ಸೂಚಕ ಎಂದೇ ವಿಶ್ಲೇಷಿಸಲಾಗುತ್ತಿದೆ. ಜೆಡಿಎಸ್‌ ಪರ ಗಟ್ಟಿಯಾಗಿ ನಿಲ್ಲಿತ್ತಿದ್ದ ಒಕ್ಕಲಿಗ ಸಮುದಾಯ ಕಾಂಗ್ರೆಸ್‌ನತ್ತ ವಾಲಿರುವುದರ ಹಿಂದೆ ಸಹಜವಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಪ್ರಭಾವ ಕಾಣಲಾಗುತ್ತಿದೆ.

ಕಮಲದೊಳಗೆ ಅರಳಿದ ಕೈ:
ಇನ್ನು ಲಿಂಗಾಯತ ಮತಗಳು ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಅತಿ ಹೆಚ್ಚು ಮತ ಗಳಿಸಿರುವುದು ಕಾಂಗ್ರೆಸ್ಸಿಗರ ಸಂತೋಷವನ್ನು ದ್ವಿಗುಣಗೊಳಿಸಿದೆ. ಮುಖ್ಯಮಂತ್ರಿ, ಪ್ರಭಾವಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಇದ್ದ ಕ್ಷೇತ್ರವಾದ ಧಾರವಾಡದಲ್ಲಿ ಕಾಂಗ್ರೆಸ್‌ನ ಸಲೀಂ ಅಹ್ಮದ್‌ ಅವರು 3334 ಮತಗಳನ್ನು ಗಳಿಸಿ ಪ್ರಥಮ ಪ್ರಾಶಸ್ತ್ಯದ ಮತಗಳ ಮೂಲಕವೇ ವಿಧಾನಪರಿಷತ್ತು ಪ್ರವೇಶಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಿಂತ 834 ಮತಗಳಿಂದ ಮುಂದಿದ್ದಾರೆ. ಈ ಟ್ರೆಂಡ್‌ ಕೇವಲ ಧಾರವಾಡ ಮಾತ್ರವಲ್ಲ, ಲಿಂಗಾಯತ ಮತಗಳು ಹೆಚ್ಚಿರುವ ವಿಜಯಪುರ, ಬೆಳಗಾವಿ, ರಾಯಚೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಿಜೆಪಿಗಿಂತ ಹೆಚ್ಚು ಮತಗಳನ್ನು ಗಳಿಸಿದೆ.

ಯುವ ಅಭ್ಯರ್ಥಿಗಳ ಸಾಧನೆ:
ಯುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುವ ರಿಸ್ಕ್‌ ತೆಗೆದುಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಾರ್ಯತಂತ್ರ ಕೂಡ ಪಕ್ಷದ ಕೈ ಹಿಡಿದಿದೆ. ಮಂಡ್ಯದಲ್ಲಿ ದಿನೇಶ್‌ ಗೂಳಿಗೌಡ, ಬೆಳಗಾವಿಯಲ್ಲಿ ಚೆನ್ನರಾಜ ಹಟ್ಟಿಹೊಳಿ, ತುಮಕೂರಿನಲ್ಲಿ ರಾಜೇಂದ್ರ, ಕೋಲಾರದಲ್ಲಿ ಅನಿಲ್‌ಕುಮಾರ್‌ ಗೆದ್ದಿದ್ದರೆ, ಕಾಂಗ್ರೆಸ್‌ ಮತಗಳು ಅತ್ಯಂತ ಕಡಿಮೆಯಿದ್ದ ಕೊಡಗಿನಲ್ಲಿ ಮಂಥರ್‌ ಗೌಡ ಸೋತಿದ್ದರೂ 603 ಮತ ಪಡೆದಿರುವುದು ಕಡಿಮೆ ಸಾಧನೆಯೇನಲ್ಲ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಮೇಲ್ವರ್ಗದವರು ಶಿಫ್ಟ್‌:
ಈ ಚುನಾವಣೆಯಲ್ಲಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಕಾಂಗ್ರೆಸ್‌ ಶೇ.48ರಷ್ಟುಮತ ಗಳಿಸಿದ್ದರೆ, ಬಿಜೆಪಿ ಶೇ.41ರಷ್ಟುಹಾಗೂ ಜೆಡಿಎಸ್‌ ಶೇ.11ರಷ್ಟುಮತ ಗಳಿಸಿವೆ. ಪ್ರತಿಪಕ್ಷದ ಸ್ಥಾನದಲ್ಲಿರುವ ಪಕ್ಷವು ಗ್ರಾ.ಪಂ. ಸದಸ್ಯರು ಮತದಾರರಾಗಿರುವ ಈ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕಿಂತ ಹೆಚ್ಚು ಮತ ಗಳಿಸಿರುವುದು ಗಮನಿಸಬೇಕಾದ ಅಂಶ. ಈ ಫಲಿತಾಂಶ ರಾಜ್ಯದ ಮೇಲ್ವರ್ಗ ಕಾಂಗ್ರೆಸ್‌ನತ್ತ ಶಿಫ್ಟ್‌ ಆಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಬದಲಾವಣೆಗೆ ಮುಖ್ಯ ಕಾರಣ ಕಾಂಗ್ರೆಸ್‌ ಪಕ್ಷದ ಧೋರಣೆಯಲ್ಲಿ ಉಂಟಾಗಿರುವ ವ್ಯತ್ಯಾಸ. ಆಡಳಿತ ಪಕ್ಷದ ವಿರುದ್ಧ ಸಂಪೂರ್ಣ ಬೇಸತ್ತು ಅನಿವಾರ್ಯ ಆಯ್ಕೆಯಾಗಿ ಮತದಾರರು ಕಾಂಗ್ರೆಸ್‌ನತ್ತ ಮುಖ ಮಾಡಲಿ ಎಂಬ ಸೋಮಾರಿತನವನ್ನು ಬಿಟ್ಟು ಆಡಳಿತಾರೂಢ ಬಿಜೆಪಿಯ ವೈಫಲ್ಯಗಳನ್ನು ಜನರ ಮುಂದಿಡುವ ಕಾರ್ಯಕ್ಕೆ ಕಾಂಗ್ರೆಸ್‌ ಮುಂದಾಗಿತ್ತು. ವಿಧಾನಮಂಡಲ ಅಧಿವೇಶನದ ವೇಳೆ ಕಾಂಗ್ರೆಸ್‌ ನಡೆಸುತ್ತಿದ್ದ ಹೋರಾಟಗಳೇ ಇದಕ್ಕೆ ಉದಾಹರಣೆ. ಇದರ ಜತೆಗೆ ಆಂತರಿಕ ಭಿನ್ನಾಭಿಪ್ರಾಯವನ್ನು ಪಕ್ಕಕ್ಕಿಟ್ಟು ಚುನಾವಣೆ ನಡೆಸಿದ ಕಾಂಗ್ರೆಸ್‌ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದು ಸಹ ಫಲ ನೀಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ