ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಬಂಧನ ಸಂಬಂಧ ಬೇರೆ-ಬೇರೆ ಆಯಾಮ ಪಡೆದುಕೊಳ್ಳುತ್ತಿದೆ. ಒಂದೆಡೆ ಸ್ವಾಮೀಜಿಗಳು ಬ್ಯಾಟಿಂಗ್ ಮಾಡುತ್ತಿದ್ರೆ, ಮತ್ತೊಂದೆಡೆ ಪಕ್ಷ ವಿನಯ್ ಪರ ನಿಂತಿದೆ.
ಧಾರವಾಡ(ನವೆಂಬರ್. 08): ಸಿಬಿಐನಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನವು ಮೇಲ್ನೋಟಕ್ಕೆ ರಾಜಕೀಯ ಪ್ರೇರಿತದಂತೆ ಕಾಣುತ್ತದೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಇಂದು (ಭಾನುವಾರ) ಧಾರವಾಡದ ವಿನಯ್ ಕುಲಕರ್ಣಿ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿದ ಬಳಿಕ ಮಾತನಾಡಿದ ಅವರು, ರಾಜಕೀಯ ಷಡ್ಯಂತ್ರವಂತೂ ಇದ್ದೇ ಇದೆ. ಕಾನೂನು ಎಲ್ಲರಿಗಿಂತ ದೊಡ್ಡದು. ಹೀಗಾಗಿ ಕಾನೂನಿನ ಮೂಲಕವೇ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ. ಈ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಅವರೊಂದಿಗೆ ಇದೆ ಎಂದು ಸ್ಪಷ್ಟಪಡಿಸಿದರು.
undefined
ವಿನಯ್ ಕುಲಕರ್ಣಿ ಕೇಸ್‌ಗೆ ಜಾತಿ ರಾಜಕಾರಣದ ತಿರುವು..!
ಇದು ಕರ್ನಾಟಕ ಮಾತ್ರವಲ್ಲ. ಇಡೀ ದೇಶದಲ್ಲಿ ಇಂತಹ ಪ್ರಕರಣಗಳು ಆಗುತ್ತಿವೆ. ಯಾರನ್ನೂ ನಾನು ವೈಯಕ್ತಿಕವಾಗಿ ನಿಂದಿಸುವುದಿಲ್ಲ. ಎಲ್ಲ ಇಲಾಖೆಗಳನ್ನು ರಾಜಕೀಯ ಬಳಕೆ ಮಾಡುತ್ತಿದ್ದಾರೆ ಕಿಡಿಕಾರಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಇಡೀ ದೇಶದಲ್ಲಿ ಸಿಬಿಐ, ಇಡಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಹುಲ್ ಗಾಂಧಿ ಅವರನ್ನೂ ಸಹ ನೂಕು ನುಗ್ಗಾಟ ಮಾಡಿದ್ದರು. ಅತ್ಯಾಚಾರ ಸಂತ್ರಸ್ಥೆ ಕುಟುಂಬ ಭೇಟಿಯಾಗದಂತೆ ಮಾಡಿದ್ದಾರೆ. ಎಲ್ಲವನ್ನೂ ಜನ ನೋಡುತ್ತಿದ್ದಾರೆ ಎಂದರು.
ಬಿಜೆಪಿ ಪಕ್ಷದ ಕೆಲವರು ಅಧಿಕಾರ ಶಾಶ್ವತವಾಗಿ ಇರುವುದಾಗಿ ತಿಳಿದಿದ್ದಾರೆ. ಆದರೆ, ಅಧಿಕಾರ ಎಂದಿಗೂ ಶಾಶ್ವತವಲ್ಲ. ಈ ಸತ್ಯ ಬಿಜೆಪಿಯ ಕೆಲವರಿಗೆ ಇನ್ನೂ ತಿಳಿದಂತಿಲ್ಲ. ಈಗಂತೂ ಏನು ಮಾಡುವುದು ನಾವೀಗ ಕೆಟ್ಟ ಕಾಲದಲ್ಲಿ ಇದ್ದೇವೆ. ಈ ಸಮಯ ಮುಂದೆ ಕಳೆದು ಹೋಗಿ ನಮಗೂ ಒಳ್ಳೆಯ ಕಾಲ ಬರುತ್ತದೆ ಎಂದರು.