ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು: ಪ್ರಿಯಾಂಕ್‌ ಚಾಟಿ

By Govindaraj SFirst Published Jul 26, 2022, 5:00 AM IST
Highlights

‘ನಿಮ್ಮ ಅಭಿಪ್ರಾಯಗಳಿದ್ದರೆ ಹೈಕಮಾಂಡ್‌ ಅಥವಾ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ವ್ಯಕ್ತಪಡಿಸಿ. ಸಾರ್ವಜನಿಕವಾಗಿ ಮಾತನಾಡಿ ಪಕ್ಷಕ್ಕೆ ಮುಜುಗರ ಮಾಡುವುದು ಬೇಡ’ ಎಂದು ಮುಂದಿನ ಮುಖ್ಯಮಂತ್ರಿ ಕುರಿತು ಹೇಳಿಕೆ ನೀಡುತ್ತಿರುವವರ ವಿರುದ್ಧ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜು.26): ‘ನಿಮ್ಮ ಅಭಿಪ್ರಾಯಗಳಿದ್ದರೆ ಹೈಕಮಾಂಡ್‌ ಅಥವಾ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ವ್ಯಕ್ತಪಡಿಸಿ. ಸಾರ್ವಜನಿಕವಾಗಿ ಮಾತನಾಡಿ ಪಕ್ಷಕ್ಕೆ ಮುಜುಗರ ಮಾಡುವುದು ಬೇಡ’ ಎಂದು ಮುಂದಿನ ಮುಖ್ಯಮಂತ್ರಿ ಕುರಿತು ಹೇಳಿಕೆ ನೀಡುತ್ತಿರುವವರ ವಿರುದ್ಧ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಗಾದೆ ಮಾತಿದೆ. ನನ್ನ ಅಭಿಪ್ರಾಯದಿಂದ ಯಾರಿಗೂ ನೋವಾಗಬಾರದಲ್ಲ. ಹೀಗಾಗಿ ಗಾದೆ ಮಾತಿನ ಮೂಲಕ ನನ್ನ ಅಭಿಪ್ರಾಯ ಹೇಳುತ್ತಿದ್ದೇನೆ ಎಂದರು.

ಪ್ರತಿಯೊಬ್ಬರೂ ನಿಮ್ಮ ಮಾತು, ಅಭಿಪ್ರಾಯ ಎಲ್ಲಿ ವ್ಯಕ್ತಪಡಿಸಬೇಕು ಎಂಬುದನ್ನು ಅರಿಯಬೇಕು. ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹೈಕಮಾಂಡ್‌ ಅಥವಾ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಇದೆ. ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರೆ ಪಕ್ಷಕ್ಕೆ ಮುಜುಗರವಾಗಲಿದೆ ಎಂದರು. ಮುಖ್ಯಮಂತ್ರಿ ರೇಸ್‌ನಲ್ಲಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಕುರಿತ ಪ್ರಶ್ನೆಗೆ, ‘ಅವರ ಬಗ್ಗೆ ಹೇಳುವಷ್ಟುದೊಡ್ಡವನಲ್ಲ. ಸಹಜವಾಗಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಲ್‌ಪಿ ನಾಯಕರಿಗೆ ಗೌರವ ಸ್ಥಾನ ಸಿಗುತ್ತದೆ. ಆದರೆ ಈಗಲೇ ಮುಖ್ಯಮಂತ್ರಿ ವಿಚಾರವಾಗಿ ಮಾತನಾಡುವುದು ಸರಿಯಲ್ಲ’ ಎಂದಷ್ಟೇ ಹೇಳಿದರು.

ಪಿಎಸ್‌ಐ ಹಗರಣ ಕಲಬುರಗಿಗೆ ಸೀಮಿತವಲ್ಲ: ಪ್ರಿಯಾಂಕ್‌ ಖರ್ಗೆ

ಸಮಯ ಬಂದಾಗ ಕೈ ದಲಿತ ಸಿಎಂ: ದಲಿತ ಮುಖ್ಯಮಂತ್ರಿ ವಿಚಾರವಾಗಿ ಬಿಜೆಪಿಯಿಂದ ನಾವು ಪಾಠ ಕಲಿಯಬೇಕಿಲ್ಲ. ಸಮಯ ಬಂದಾಗ ಕಾಂಗ್ರೆಸ್‌ನಿಂದ ದಲಿತ ಮುಖ್ಯಮಂತ್ರಿ ಆಗುತ್ತಾರೆ ಎಂದು ಇದೇ ವೇಳೆ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದರು. ಕಾಂಗ್ರೆಸ್‌ನಲ್ಲಿ ದಲಿತ ಮುಖ್ಯಮಂತ್ರಿಗೆ ಅವಕಾಶವಿಲ್ಲ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಗೋವಿಂದ ಕಾರಜೋಳರನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು. ವಿಧಾನಪರಿಷತ್‌ ಸದಸ್ಯ ಚಲುವಾದಿ ನಾರಾಯಣಸ್ವಾಮಿ ಅವರಿಂದ ತಲೆ ಮೇಲೆ ಚಡ್ಡಿ ಹೊರೆಸಿದರು. 

ಚೆಡ್ಡಿ ಹೊರುವುದನ್ನು ಬಿಜೆಪಿಯ ಅಧಿಕೃತ ಕಾರ್ಯಕ್ರಮವನ್ನಾಗಿ ಮಾಡದೆ ದಲಿತರಿಂದ ಯಾಕೆ ಹೊರಿಸಿದರು. ಇವರಿಂದ ನಾವು ಪಾಠ ಕಲಿಯಬೇಕೇ ಎಂದು ತರಾಟೆಗೆ ತೆಗೆದುಕೊಂಡರು. ಇನ್ನು ಕಾಂಗ್ರೆಸ್‌ನಿಂದ ಸಮಯ ಬಂದಾಗ ದಲಿತ ಮುಖ್ಯಮಂತ್ರಿ ಆಗುತ್ತಾರೆ. ಕಾಲಕಾಲಕ್ಕೆ ದಲಿತರಿಗೆ ಕಾಂಗ್ರೆಸ್‌ನಲ್ಲಿ ಸ್ಥಾನಮಾನ ಸಿಕ್ಕಿದೆ. ಮುಂದೆ ಕೂಡ ದಲಿತ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಿಯಾಂಕ್‌ ಖರ್ಗೆ ವಿರುದ್ಧ ಸಿಎಂಗೆ ಮಠಾಧೀಶರ ದೂರು: ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಶಾಸಕ ಪ್ರಿಯಾಂಕ್‌ ಖರ್ಗೆ ಚಿತಾವಣೆಯಿಂದ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 50ಕ್ಕೂ ಹೆಚ್ಚಿನ ವಿವಿಧ ಮಠಾಧಿಪತಿಗಳು ದೂರು ನೀಡಿದ್ದಾರೆ. ಪ್ರಿಯಾಂಕ್‌ ಖರ್ಗೆ ಹೇಳಿದ ಹಾಗೆ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್‌ ಕುಮಾರ್‌ ಕೇಳುತ್ತಾರೆ. ಹಿಂದೂ ಕಾರ್ಯಕರ್ತರ ಮೇಲೆ ನಿರಂತರವಾಗಿ ಸುಳ್ಳು ಪ್ರಕರಣ ದಾಖಲಿಸಲಾಗುತ್ತದೆ. 

PSI Scam: ರಾಜ್ಯ ಸರ್ಕಾರಕ್ಕೆ 6 ಪ್ರಶ್ನೆ ಕೇಳಿದ ಪ್ರಿಯಾಂಕ್ ಖರ್ಗೆ

ಹಿಂದೂ ಕಾರ್ಯಕರ್ತರ ವಿರುದ್ಧ ಶಾಸಕ ಪ್ರಿಯಾಂಕ್‌ ಖರ್ಗೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕೂಡಲೇ ಶ್ರೀರಾಮ ಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌ ಸೇರಿದಂತೆ ಹಿಂದೂ ಕಾರ್ಯಕರ್ತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ರಾಜ್ಯ ಸರ್ಕಾರವು ಹಿಂಪಡೆಯಬೇಕು ಎಂದು ಮಠಾಧೀಶರು ಆಗ್ರಹಿಸಿದ್ದಾರೆ. ಈ ನಿಯೋಗದಲ್ಲಿ ಲಿಂಗಾಯಿತ ಹಾಗೂ ಬಂಜಾರ ಸಮುದಾಯದ ಶ್ರೀಗಳು ಇದ್ದರು.

click me!