ರಾಜ್ಯದಲ್ಲಿ ಕೋವಿಡ್ ಸೋಂಕಿನ ಅಬ್ಬರ ಜೋರಾಗಿದ್ದು, ಬೆಡ್ ಹಾಗೂ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಆದ್ರೆ, ರಾಜ್ಯದ ಜಿಂದಾಲ್ ಸಂಸ್ಥೆ ಉತ್ಪಾದಿಸುವ ಅರ್ಧ ಆಕ್ಸಿಜನ್ ಮಹಾರಾಷ್ಟ್ರ ರಾಜ್ಯಕ್ಕೆ ಕಳುಹಿಸಲಾಗುತ್ತಿದೆ ಎನ್ನಲಾಗುತ್ತಿದ್ದು, ಇದಕ್ಕೆ ಮಾಜಿ ಸಚಿವ ಎಂ.ಬಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರ, (ಏ.22): ರಾಜ್ಯದ ರೋಗಿಗಳಿಗೆ ಆಕ್ಸಿಜನ್ ಕೊರತೆ ಇದೆ. ಇಂಥ ಸ್ಥಿತಿಯಲ್ಲಿ ರಾಜ್ಯದ ಜಿಂದಾಲ್ ಸಂಸ್ಥೆ ಉತ್ಪಾದಿಸುವ ಅರ್ಧ ಆಕ್ಸಿಜನ್ ಮಹಾರಾಷ್ಟ್ರ ರಾಜ್ಯಕ್ಕೆ ಕಳುಹಿಸಲಾಗುತ್ತಿದೆ. ರಾಜ್ಯದಲ್ಲೇ ಕೊರತೆ ಇರುವಾಗ ಅನ್ಯರಿಗೆ ಕಳಿಸುವ ಸರ್ಕಾರದ ನಿರ್ಧಾರ ಸರಿಯಲ್ಲ. ಕೂಡಲೇ ಈ ಕುರಿತು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಮಾಜಿ ಸಚಿವ, ಬಬಲೇಶ್ವರ ಶಾಸಕ ಡಾ.ಎಂ.ಬಿ. ಪಾಟೀಲ ಹೇಳಿದರು
ಇಂದು (ಗುರುವಾರ) ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ರಾಜ್ಯಕ್ಕೆ ಆಕ್ಸಿಜನ್ ನೆರವು ನೀಡುವುದಕ್ಕೆ ನನ್ನ ವಿರೋಧ ಇಲ್ಲ. ಆದರೆ ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ಆದರೂ ರಾಜ್ಯದಲ್ಲೇ ಕೊರತೆ ಇದ್ದು, ನಮಗೆ ಸರಿದೂಗಿದ ಬಳಿಕ ಅನ್ಯರ ನೆರವಿಗೆ ನಿಲ್ಲಬೇಕು ಎಂದರು.
undefined
ಆಕ್ಸಿಜನ್ ಕೊರತೆ ನಿವಾರಣೆಗೆ ಕರ್ನಾಟಕದಲ್ಲಿ ಎಮರ್ಜನ್ಸಿ ಸೂತ್ರ
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಸಿಗೆ ಸಿಗುತ್ತಿಲ್ಲ, ರೆಮಿಡಿಸಿವಿರ್ ಸೇರಿ ಪ್ರಮುಖ ಔಷಧ ಕೊರತೆ ಇದೆ. ಆಕ್ಸಿಜನ್ ಕೊರತೆ, ವೆಂಟಿಲೇಟರ್ ಕೊರತೆ ಹೀಗೆ ಹಲವು ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ. ಹೀಗಾಗಿ ಕೂಡಲೇ ಈ ಸಮಸ್ಯೆ ಬಗೆ ಹರಿಸಲು ಸರ್ಕಾರ ಆದ್ಯತೆ ನೀಡಬೇಕು ಎಂದು ಅಗ್ರಹಿಸಿದರು.