ಬೆಂಗಳೂರು (ಸೆ.30): ಹಾನಗಲ್ (Hanagal) ಕ್ಷೇತ್ರದಿಂದ ಈ ಬಾರಿ ನನಗೆ ಟಿಕೆಟ್ ನೀಡಬೇಕು. ಒಂದು ವೇಳೆ ಕೊಡದಿದ್ದರೆ ಸ್ಥಳೀಯರಿಗೆ ನೀಡಬೇಕು. ಏಕೆ ನಮ್ಮ ಕ್ಷೇತ್ರದಲ್ಲಿ ಇರುವವರು ಗಂಡಸರು ಅಲ್ಲವೇ? ಎಂದು ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ (Manohar Tahasildar) ಪ್ರಶ್ನಿಸಿದ್ದಾರೆ.
undefined
ಬುಧವಾರ ಸಿದ್ದರಾಮಯ್ಯ ಅವರ ನಿವಾಸದ ಬಳಿ ಸಿದ್ದರಾಮಯ್ಯ ಭೇಟಿಗೆ ವಿಫಲ ಯತ್ನ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕ್ಷೇತ್ರದ ಯಾರಿಗೇ ಟಿಕೆಟ್ ಕೊಟ್ಟರೂ ಓಕೆ. ಆದರೆ ಹೊರಗಿನ ಶ್ರೀನಿವಾಸ್ ಮಾನೆಗೆ (Shrinivas Mane) ಟಿಕೆಟ್ ಕೊಟ್ಟರೆ ಮಾತ್ರ ಸುಮ್ಮನಿರುವುದಿಲ್ಲ. ಏಕೆ ನಮ್ಮ ಕ್ಷೇತ್ರದಲ್ಲಿರುವ ನಾವು ಗಂಡಸರಲ್ವಾ ಎಂದು ಪ್ರಶ್ನಿಸಿದರು.
ಸಿಂಧಗಿ, ಹಾನಗಲ್ ಉಪಕದನ: 2 ಅಖಾಡ, 3 ಸಿಪಾಯಿ, ಮುಂದಿದೆ ಅಗ್ನಿ ಪರೀಕ್ಷೆ!
ಹಾನಗಲ್ ಕ್ಷೇತ್ರದಲ್ಲಿ ನನಗೇ ಟಿಕೆಟ್ ಕೊಡಬೇಕು. ಅಕಸ್ಮಾತ್ ಕೊಡದಿದ್ದರೆ ಸ್ಥಳೀಯರಿಗೆ ಯಾರಿಗಾದರೂ ಕೊಡಲಿ. ಹೊರಗಿನವರಿಗೆ ಟಿಕೆಟ್ ನೀಡಿದರೆ ನಾವು ಕೆಲಸ ಮಾಡಲ್ಲ. ನಮ್ಮ ಮನೆಯನ್ನು ನಮ್ಮ ಹಿರಿಯರು ನಡೆಸಬೇಕು. ಹೊರಗಿನವರಿಗೆ ನಮ್ಮ ಮನೆ ನಡೆಸಲು ನಾವೇಕೆ ಬಿಡಬೇಕು ಎಂದು ಹಿರಿಯ ನಾಯಕರನ್ನು ಪ್ರಶ್ನಿಸಿದರು.
ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ
ಉಪ ಚುನಾವಣೆ (By Election) ಘೋಷಣೆಯಾಗಿರುವ ಎರಡು ಕ್ಷೇತ್ರಗಳ ಪೈಕಿ ಕಾಂಗ್ರೆಸ್ (Congress) ಪಾಲಿಗೆ ಸಿಂದಗಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸುಲಲಿತವಾಗಿದ್ದರೆ, ಹಾನಗಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಇದಕ್ಕೆ ಮುಖ್ಯ ಕಾರಣ ತಮ್ಮ ಹಿಂಬಾಲಕರಿಗೆ ಟಿಕೆಟ್ ಕೊಡಿಸಬೇಕು ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ )DK Shivakumar) ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಪಟ್ಟು ಹಿಡಿದಿರುವುದು.
ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ದಿ.ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಅವರಿಗೆ ಟಿಕೆಟ್ ಲಭಿಸುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್‌ನಿಂದ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಅಶೋಕ್ ಮನಗೂಳಿ ಅವರು ಈಗಾಗಲೇ ಚುನಾವಣಾ ಪ್ರಚಾರ ಪ್ರಕ್ರಿಯೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಆದರೆ, ಸಮಸ್ಯೆಯಾಗಿರುವುದು ಹಾನಗಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ. ಈ ಕ್ಷೇತ್ರದಲ್ಲಿ ಆಕಾಂಕ್ಷಿಯಾಗಿರುವ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆಗೆ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ (Siddaramaiah) ಮುಂದಾಗಿದ್ದರೆ, 2018ರಲ್ಲಿ ಟಿಕೆಟ್ ತಪ್ಪಿಸಿಕೊಂಡಿದ್ದ ಮನೋಹರ್ ತಹಶೀಲ್ದಾರ್ ಅವರಿಗೆ ಟಿಕೆಟ್ ದೊರಕಿಸಿಕೊಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಈ ಜಟಾಪಟಿಯಿಂದಾಗಿ ಹಾನಗಲ್ ಕ್ಷೇತ್ರದ ಟಿಕೆಟ್ ಯಾರಿಗೆ ಎಂಬುದನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ.
ಹೀಗಾಗಿ ಗುರುವಾರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಕಾಂಕ್ಷಿಗಳೊಂದಿಗೆ ಸಭೆಯೊಂದನ್ನು ನಡೆಸಲಿದ್ದಾರೆ. ಮೂಲಗಳ ಪ್ರಕಾರ, ಮುಂದಿನ ಒಂದೆರಡು ದಿನ ಈ ಕುರಿತು ಸರಣಿ ಸಭೆ ನಡೆಯಲಿದ್ದು, ಒಮ್ಮತ ಮೂಡುವುದೇ ಎಂದು ಕಾದು ನೋಡಲಾಗುವುದು. ಸಾಧ್ಯವಾಗದಿದ್ದರೆ ಈ ಕ್ಷೇತ್ರಕ್ಕೆ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್ ನಿರ್ಧಾರಕ್ಕೆ ಕಳುಹಿಸಿಕೊಡುವ ಸಾಧ್ಯತೆಯಿದೆ ಎನ್ನಲಾಗಿದೆ.