ದಾವಣಗೆರೆ: ಪಾಲಿಕೆಯಲ್ಲಿ ವಾಮಮಾರ್ಗದಿಂದ ಅಧಿಕಾರ ಹಿಡಿದಿದ್ದ ಬಿಜೆಪಿಗೆ ಮುಖಭಂಗ, ಕಾಂಗ್ರೆಸ್ ವಾಗ್ದಾಳಿ

By Girish Goudar  |  First Published Sep 30, 2022, 10:13 PM IST

ದಾವಣಗೆರೆ ಮಹಾನಗರ ಪಾಲಿಕೆಯ ನಾಲ್ಕನೇ ಅವಧಿಯ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಪಡಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರಕ್ಕೆ ಮುಖಭಂಗ ಆಗಿದೆ.


ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ

ದಾವಣಗೆರೆ(ಸೆ.30): ದಾವಣಗೆರೆ ಮಹಾನಗರ ಪಾಲಿಕೆಯ ನಾಲ್ಕನೇ ಅವಧಿಯ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಪಡಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರಕ್ಕೆ ಮುಖಭಂಗ ಆಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯ ಹೊರಬರುತ್ತದೆ ಎಂಬುದಕ್ಕೆ ಪಾಲಿಕೆ ಮೇಯರ್ ಸ್ಥಾನ ಎಸ್ಟಿ ಮೀಸಲಾತಿ ನೀಡಿರುವುದೇ ಸಾಕ್ಷಿ ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಮಂಜುನಾಥ್ ಗಡಿಗುಡಾಳ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

Latest Videos

undefined

ಇಂದು(ಶುಕ್ರವಾರ) ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಚುನಾವಣೆ ನಡೆದಾಗ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದ್ರೆ ಬಿಜೆಪಿಯವರು ದಾವಣಗೆರೆಯಲ್ಲಿ ವಾಸ ಇಲ್ಲದ ತೇಜಸ್ವಿನಿ ರಮೇಶ್ ಸೇರಿದಂತೆ ವಿಧಾನ ಪರಿಷತ್ ಸದಸ್ಯರ ಹೆಸರು ಸೇರಿಸಿ ಮೋಸದಿಂದ ಅಧಿಕಾರಕ್ಕೇರಿತ್ತು. ಈಗ ಹೈಕೋರ್ಟ್ ಆದೇಶದಿಂದ ರಾಜ್ಯ ಸರ್ಕಾರವು ಈಗ ಪಾಲಿಕೆಯ ನಾಲ್ಕನೇ ಅವಧಿಗೆ ಮೇಯರ್ ಸ್ಥಾನವನ್ನು ಎಸ್ಟಿ ಮೀಸಲಾತಿ ನೀಡಬೇಕು ಎಂದು ಆದೇಶಿಸಿದೆ. ಇದರಿಂದ ನಾಲ್ಕನೇ ಅವಧಿಗೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂಬ ಬಿಜೆಪಿಗೆ ಹಿನ್ನಡೆಯಾಗಿದೆ ಎಂದರು. ಅಧಿಕಾರ ದುರುಪಯೋಗ ಮಾಡಿಕೊಂಡರೆ ಒಂದಲ್ಲಾ ಒಂದು ದಿನ ಸತ್ಯ ಹೊರಬರುತ್ತದೆ. ಹಾಗೆಯೇ ನಮ್ಮ ಹೋರಾಟಕ್ಕೆ ಈಗ ಜಯ ಸಿಕ್ಕಿದೆ ಎಂದು ಹೇಳಿದರು.

ಮಧ್ಯವರ್ತಿಗಳ ಆವಾಸ ಸ್ಥಾನ ದಾವಣಗೆರೆ ತಾಲೂಕು ಕಚೇರಿ!

ರಾಜ್ಯ ಸರ್ಕಾರವು ಕಾನೂನು ಹಾಗೂ ನಿಯಮದ ಪ್ರಕಾರ ಪಾಲಿಕೆ ಮೇಯರ್ ಸ್ಥಾನಕ್ಕೆ ಎಸ್ಟಿ ಮೀಸಲಾತಿ ನೀಡಬೇಕಿತ್ತು. ಎರಡು ಬಾರಿ ಸಾಮಾನ್ಯ ಹಾಗೂ ಮೂರನೇ ಅವಧಿಗೆ ಎಸ್ಸಿ ಮಹಿಳಾ ಮೀಸಲಾತಿ ಆಗಿತ್ತು. ನಾಲ್ಕನೇ‌ ಬಾರಿ ಎಸ್ಟಿಗೆ ಮೀಸಲಾತಿ ಘೋಷಣೆ ಮಾಡಬೇಕಿತ್ತು. ಆದರೆ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಎಂದು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಪಾಲಿಕೆ ಸದಸ್ಯೆ ಸವಿತಾ ಗಣೇಶ್ ಹುಲ್ಲುಮನಿ ಹಾಗೂ ಅವರ ಪತಿ ಗಣೇಶ್ ಹುಲ್ಲುಮನಿ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕಾನೂನಿನ ಪ್ರಕಾರ ಎಸ್ಟಿಗೆ ಮೀಸಲಾತಿ ನಿಗದಿಪಡಿಸಿ ತೀರ್ಪು ನೀಡಿದೆ. ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಈಗ ಅಧಿಸೂಚನೆ ಹೊರಡಿಸಿದ್ದು, ದಾವಣಗೆರೆ ಎಸ್ಟಿಗೆ ಮೇಯರ್ ಸ್ಥಾನ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಬಿಜೆಪಿಯ ಕುತಂತ್ರ ರಾಜಕಾರಣ ಬಟಾಬಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು 2019ರಲ್ಲಿ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 22 ಸ್ಥಾನಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ ಕೇವಲ 17 ಸ್ಥಾನಗಳಲ್ಲಿ ಗೆದ್ದಿತ್ತು. ಪಕ್ಷೇತರರು, ಎಂಎಲ್ ಸಿ, ಶಾಸಕರು, ಸಂಸದರ ಮತ ಚಲಾವಣೆಗೊಂಡು ಪಾಲಿಕೆಯಲ್ಲಿ ಮೇಯರ್ ಆಗಿ ಅಜಯ್ ಕುಮಾರ್ ಆಯ್ಕೆಯಾಗಿದ್ದರು. ಆ ನಂತರ ಎಸ್‌. ಟಿ. ವೀರೇಶ್  ಮೇಯರ್ ಆಗಿ ಒಂದು ವರ್ಷ ಅಧಿಕಾರ ನಡೆಸಿದರು. ಜಯಮ್ಮ ಗೋಪಿನಾಯ್ಕ್  ಮೂರನೇ ಅವಧಿಯ ಮೇಯರ್ ಆಗಿ ಅಧಿಕಾರ ನಡೆಸುತ್ತಿದ್ದಾರೆ. ಈಗ ಹೈಕೋರ್ಟ್ ಆದೇಶ ನೀಡಿರುವ ಕಾರಣ ಸರ್ಕಾರ ತಲೆಬಾಗಲೇಬೇಕಿದೆ. ಜಿಲ್ಲೆಯ ಬಿಜೆಪಿ ನಾಯಕರಿಗೆ ಮುಖಭಂಗವಾಗಿದೆ ಎಂದರು. ಇನ್ನು ಕಾಂಗ್ರೆಸ್ ಸದಸ್ಯರು ಕೈ ಕೊಟ್ಟು ಬಿಜೆಪಿಗೆ ಹಾರಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು ಐದು ವರ್ಷಗಳ ಕಾಲ ಅಧಿಕಾರ ನಡೆಸುವ ಕನಸು ಕಂಡಿತ್ತು. ಆದ್ರೆ ಈಗ ಬಿಜೆಪಿಗೆ ನಿರಾಸೆ ಆಗಿದೆ. 2023-24ರ ಅವಧಿಗೆ ಎಸ್ಟಿ ಮೇಯರ್ ಸ್ಥಾನಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಿರುವುದರಿಂದ ಬಿಜೆಪಿ ಪಾಲಿಕೆಯ ಸದಸ್ಯರು ಭ್ರಮನಿರಸನಗೊಳ್ಳುವಂತೆ ಮಾಡಿದೆ.ಬಿಜೆಪಿ ಸದಸ್ಯರಲ್ಲಿ ಯಾರೊಬ್ಬರು ಎಸ್ಟಿ ಮೀಸಲು ಸದಸ್ಯರಿಲ್ಲದ ಕಾರಣ ಏನೇ ಪ್ರಯತ್ನಮಾಡಿದರು ಅದು ವ್ಯರ್ಥವಾಗುವ ಸಂಭವವಿದೆ.
ವಿಜಯಪುರಕ್ಕೆ ಸಾಮಾನ್ಯ ಮಹಿಳೆ ನಿಗದಿಯಾಗಬೇಕಿತ್ತು. ದಾವಣಗೆರೆಗೆ ಎಸ್ಟಿ ಆಗಬೇಕಿತ್ತು. ಆದರೆ ಸರ್ಕಾರ ಈ ರೀತಿ ಮಾಡಿರಲಿಲ್ಲ. ಹೈಕೋರ್ಟ್ ಆದೇಶದ ಬಳಿಕ ಪಾಲನೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.

Bharat Jodo Yatra: ಗಾಂಧೀಜಿ ಬ್ರಿಟೀ‍‍‍‍ಷರನ್ನು ತೊಲಗಿಸಿದಂತೆ, ರಾಹುಲ್ ಗಾಂಧಿ ಬಿಜೆಪಿಯನ್ನು ದೇಶದಿಂದ ತೊಲಗಿಸುತ್ತಾರೆ

ಈಗ ನಮಗೆ ಸಿಕ್ಕಿರುವುದು ಸತ್ಯಕ್ಕೆ ಸಂದ ಜಯ. ವಾಮ ಮಾರ್ಗದಿಂದ ಅಧಿಕಾರದ ಗದ್ದುಗೆ ಹಿಡಿದಿದ್ದ ಬಿಜೆಪಿಗೆ ಹೈಕೋರ್ಟ್ ಛೀಮಾರಿ ಹಾಕಿದಂತಾಗಿದೆ. ಎಸ್ಟಿಗೆ ಮೇಯರ್ ಸ್ಥಾನ ನಿಗದಿಪಡಿಸಿರುವುದು ಸಂತೋಷದ ವಿಚಾರ. ಅಧಿಕಾರ ಹಿಡಿಯಲು ನಾನಾ ತಂತ್ರ, ಹಣದ ಆಮೀಷ, ಬೆಂಗಳೂರಿನಿಂದ ಇಲ್ಲಿಗೆ ವಿಧಾನ ಪರಿಷತ್ ಸದಸ್ಯರನ್ನು ಕರೆ ತಂದು ಮೋಸದಿಂದ ಅಧಿಕಾರದ ಗದ್ದುಗೆಯನ್ನು 2019ರಲ್ಲಿ ಬಿಜೆಪಿ ಹಿಡಿದಿತ್ತು. ಏನು ಬೇಕಾದರೂ ಮಾಡಬಹುದು ಎಂಬ ಅಹಂಕಾರಕ್ಕೆ ತಕ್ಕ ಉತ್ತರ ಸಿಕ್ಕಿದೆ. ಕಾನೂನು ಎಲ್ಲರಿಗೂ ಒಂದೇ. ಕಾನೂನಿನ ಪ್ರಕಾರ ನಡೆಯಬೇಕು. ಬಿಜೆಪಿಯ ಯಾವ ಪಾಲಿಕೆ ಸದಸ್ಯರು ಎಸ್ಟಿ ಸಮುದಾಯಕ್ಕೆ ಸೇರಿಲ್ಲ. ಯಾರು ಏನೇ ಮಾಡಿರೂ ದೇವರು ಪ್ರಾಮಾಣಿಕತೆ ಪರ ಎಂಬುದಕ್ಕೆ ಈ ತೀರ್ಪೇ ಸಾಕ್ಷಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಚ ಮನ್ ಸಾಬ್,‌ಪಾಮೇನಳ್ಳಿ ನಾಗರಾಜ್, ವಿನಾಯಕ ಪೈಲ್ವಾನ್, ಕಲ್ಲಳ್ಳಿ ನಾಗರಾಜ್, ಜಗದೀಶ್,ರವಿ, ತಿಮ್ಮೇಶ್, ಗಣೇಶ್ ಹುಲ್ಮನಿ, ಸತೀಶ್, ವಿನಯ್ ಹಾಗೂ ಮಂಜುನಾಥ ಇಟ್ಟಿಗುಡಿ ಉಪಸ್ಥಿತರಿದ್ದರು.

click me!