ಕಾಂಗ್ರೆಸ್‌-ಬಿಜೆಪಿಗೆ ಪೈಪೋಟಿ ಒಡ್ಡಿ ಜೆಡಿಎಸ್‌ ಗಟ್ಟಿತನಕ್ಕೆ ಪ್ರಯತ್ನ..!

By Kannadaprabha NewsFirst Published Sep 30, 2022, 9:00 PM IST
Highlights

ಕಳೆದ ಚುನಾವಣೆಯಲ್ಲಿ ರಾಯಚೂರು ಜಿಲ್ಲೆ ಏಳು ಕ್ಷೇತ್ರಗಳ ಪೈಕಿ 2ರಲ್ಲಿ ಜೆಡಿಎಸ್‌ ಗೆದ್ದಿತ್ತು, ಮುಂದಿನ ಚುನಾವಣೆಯಲ್ಲಿ ಮಾನ್ವಿ, ಸಿಂಧನೂರು ಜೊತೆಗೆ ದೇವದುರ್ಗ, ಲಿಂಗಸುಗೂರು ಇತರೆಡೆ ಗಟ್ಟಿ ಪೈಪೋಟಿ

ರಾಮಕೃಷ್ಣ ದಾಸರಿ

ರಾಯಚೂರು(ಸೆ.30): ವೈಯಕ್ತಿಕ ವರ್ಚಸ್ಸು, ಮತದಾರರ ಮನೋಭಾವನೆ ಬದಲಾವಣೆ, ಮೂರರಿಂದ ಮೊದಲನೇ ಸ್ಥಾನದ ಆದ್ಯತೆ ಆಧಾರದಡಿ ಸದಾ ಗೆಲುವಿನ ಬಾವುಟ ಹಾರಿಸುವ ಜೆಡಿಎಸ್‌ ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನಗಳು ಜಿಲ್ಲೆಯಲ್ಲಿ ಸಾಗಿದ್ದು, ಆ ನಿಟ್ಟಿನಲ್ಲಿ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿ ಹಿರಿಯ ಮುಖಂಡರು ಜಿಲ್ಲೆಯ ಮೇಲೆ ಹೆಚ್ಚಿನ ಆಸಕ್ತಿ ವಹಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಗೊಂಡಿದ್ದಾರೆ.

ಕಳೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ (ಸಿಂಧನೂರು-ಮಾನ್ವಿ)ಎರಡರಲ್ಲಿ ಗೆಲವು ಕಂಡಿತ್ತು. ರಾಜಕೀಯ ತಪ್ಪು ಲೆಕ್ಕಾಚಾರದಿಂದಾಗಿ ದೇವದುರ್ಗ ಕ್ಷೇತ್ರ ಮತ್ತು ದುರಾದೃಷ್ಠದಿಂದಾಗಿ ಲಿಂಗಸುಗೂರು ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಸೋತಿದ್ದರು. ಇದೀಗ ಮತ್ತೆ ಅದೇ ರೀತಿಯ ಯಡವಟ್ಟುಗಳಾಗದಂತೆ ಪಕ್ಷದ ವರಿಷ್ಠರು ಮುನ್ನೆಚ್ಚರಿಕೆಯನ್ನು ವಹಿಸಿದ್ದು, ಅದಕ್ಕಾಗಿ ಜಿಲ್ಲೆಯ ಹಾಲಿ ಜೊತೆಗೆ ಕೈತಪ್ಪಿದ ಕ್ಷೇತ್ರಗಳಲ್ಲಿ ತೆನೆಹೊತ್ತ ಮಹಿಳೆಯ ಬಾವುಟವನ್ನು ಎಗರಿಸುವುದಕ್ಕಾಗಿ ಕಂಕಣಕಟ್ಟಿಕೊಂಡು, ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಈಗಿನಿಂದಲೆಯೇ ಶ್ರಮಿಸುತ್ತಿದ್ದಾರೆ.

ಲಿಂಗಸುಗೂರಲ್ಲಿ ರಾಜಕೀಯ ಕಾರ್ಖಾನೆ ಬಲಾಬಲ ಪ್ರದರ್ಶನ: ಚುನಾವಣೆ ಪೂರ್ವದಲ್ಲೇ ಜಿದ್ದಾಜಿದ್ದಿ..!

ಸುಲಭದ ಕಾರ್ಯವಲ್ಲ:

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌-ಬಿಜೆಪಿಗೆ ಗಟ್ಟಿಯಾದ ಪೈಪೋಟಿಯನ್ನು ಒಡ್ಡು ಕ್ಷೇತ್ರವನ್ನು ದಕ್ಕಿಸಿಕೊಳ್ಳುವುದು ಅಷ್ಟೊಂದು ಸುಲಭದ ಕಾರ್ಯವಲ್ಲ ಆದರೆ ಕ್ಷೇತ್ರದಲ್ಲಿ ಪಕ್ಷದ ನಾಯಕರ ವೈಯಕ್ತಿಕ ವರ್ಚಸ್ಸು, ಮತದಾರರನ್ನು ತಮ್ಮತ್ತ ಎಳೆಯಲು ಅಗತ್ಯವಾದಂತಹ ಹಣ ಬಲ, ತೋಳ್‌ ಬಲ ಹಾಗೂ ಜಾತಿವಾರು ಮತಗಳನ್ನು ಗಿಟ್ಟಿಸಿಕೊಳ್ಳುವ ಸಾಮರ್ಥ್ಯ, ಮತದಾರರ ಆದ್ಯತೆ ಪಟ್ಟಿಯಲ್ಲಿ ಸದಾ ಮೂರನೇ ಸ್ಥಾನದಲ್ಲಿರುವವರು ಮೊದಲ ಸ್ಥಾನಕ್ಕೇರುವುದಕ್ಕಾಗಿ ಬೇಕಾದಂತಹ ರಾಜಕೀಯ ತಂತ್ರಗಾರಿಗಳನ್ನು ಚುನಾವಣೆ ಸಮಯದಲ್ಲಿ ಪ್ರಯೋಗ ಮಾಡುವಂತಹ ಅಭ್ಯರ್ಥಿಗಳು ಅಗತ್ಯವಾಗಿದ್ದಾರೆ. ಅದಕ್ಕೆ ತಕ್ಕಂತೆ ಸಕಾಲದಲ್ಲಿ ಪಕ್ಷವು ಸಹ ಅಭ್ಯರ್ಥಿಗಳ ಪರವಾಗಿ ಬ್ಯಾಟಿಂಗ್‌ ಮಾಡುವ ರೂಢಿಯಲ್ಲಿ ಸಿದ್ಧಿಸಿಕೊಂಡಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸೋಲಿನ ಭೂರಿಭೋಜನವನ್ನು ಉಣಪಡಿಸುವುದು ದೊಡ್ಡದ್ದೇನ್ನಲ್ಲ. ಇಂತಹ ವಾತಾವರಣವು ಜೆಡಿಎಸ್‌ಗೆ ರಾಯಚೂರು ಜಿಲ್ಲೆಯಲ್ಲಿದ್ದು ಅದರ ಸದ್ಬಳಕೆಯ ಕೆಲಸವನ್ನು ಪಕ್ಷದ ಮುಖಂಡರು ಮಾಡುತ್ತಿದ್ದಾರೆ.

ದಿಟ್ಟ ಅಭ್ಯರ್ಥಿ ಆಯ್ಕೆ ಮುಖ್ಯ:

ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಸಿಂಧನೂರಿನಲ್ಲಿ ಜೆಡಿಎಸ್‌ ಶಾಸಕ ವೆಂಕಟರಾವ್‌ ನಾಡಗೌಡ, ಮಾನ್ವಿಯಲ್ಲಿ ರಾಜಾ ವೆಂಕಟ್ಟಪ್ಪ ನಾಯಕ ಶಾಸಕರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಲಿಂಗಸುಗೂರಿನಲ್ಲಿ ಜೆಡಿಎಸ್‌ ಅಭ್ಯರ್ಥಿ ಸಿದ್ದು ವೈ.ಬಂಡಿ ಅಲ್ಪ ಮತಗಳಲ್ಲಿ ಸೋಲನ್ನು ಕಂಡಿದ್ದರು. ಕೊನೆಘಳಿಗೆಯಲ್ಲಿ ದೇವದುರ್ಗದಲ್ಲಿ ಕರೆಮ್ಮ ನಾಯಕ ಅವರಿಗೆ ಟಿಕೆಟ್‌ ನೀಡದೇ ವೆಂಕಟೇಶ ಪೂಜಾರಿಗೆ ನೀಡಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕರೆಮ್ಮ ಗಟ್ಟಿಯಾದ ಪೈಪೋಟಿಯನ್ನು ನೀಡಿ ಸೋಲುಂಡಿದ್ದರು. ರಾಯಚೂರು ನಗರ ಮತ್ತು ಗ್ರಾಮೀಣ ಭಾಗದಲ್ಲಿ ದಿಟ್ಟ, ಸಮರ್ಥ ಅಭ್ಯರ್ಥಿಗಳ ಕೊರತೆಯಿಂದಾಗಿ ನಾಮ್‌ಕೆವಾಸ್ತೆ ಸ್ಪರ್ಧೆಯನ್ನು ನಡೆಸಿತ್ತು. ಮಸ್ಕಿ ಕ್ಷೇತ್ರದಲ್ಲಿ ಜೆಡಿಎಸ್‌ ಖಾತೆ ಆರಂಭಿಸದ ಕಾರಣಕ್ಕೆ ಅಲ್ಲಿಯೂ ಸಮರ್ಥರಿಗೆ ಟಿಕೆಟ್‌ ನೀಡಿದ್ದಲ್ಲಿ ಫಲಿತಾಂಶ ಅಚ್ಚರಿಗೊಳ್ಳುವುದು ಖಚಿತ. ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಜೆಡಿಎಸ್‌ ಸಾರ್ವತ್ರಿಕ ಚುನಾವಣೆಯ ಪೂರ್ವ ಸಿದ್ಧತೆಯನ್ನು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಮುಂಚಿತವಾಗಿಯೇ ಆರಂಭಿಸಿರುವುದು ಪಕ್ಷದ ಕಾರ್ಯಕರ್ತರಲ್ಲಿ ಚುನಾವಣಾ ಉತ್ಸಾಹ ವೃದ್ಧಿಗೊಳ್ಳುವಂತೆ ಮಾಡಿದೆ.

ಬಿಜೆಪಿ ನಡೆಸುತ್ತಿರುವ ದುರಾಡಳಿತದ ವಿರುದ್ಧ ರಾಹುಲ್‌ ಹೋರಾಟ: ಈಶ್ವರ ಖಂಡ್ರೆ

ಗಿಲ್ಲೆಸುಗೂರಿನಲ್ಲಿ ಜೆಡಿಎಸ್‌ ಸಮಾವೇಶ ಇಂದು

ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಯಚೂರು ತಾಲೂಕಿನ ಗಿಲ್ಲೆಸುಗೂರು ಗ್ರಾಮದಲ್ಲಿ ಶುಕ್ರವಾರ ಜೆಡಿಎಸ್‌ ಸಮಾವೇಶವನ್ನು ಹಮ್ಮಿಕೊಂಡಿದ್ದು, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಯಿಂ, ಎಂಎಲ್ಸಿ ಟಿ.ಎ.ಶರವಣ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರು ಗ್ರಾಮೀಣ ಭಾಗದಲ್ಲಿ ಜೆಡಿಎಸ್‌ ಪಕ್ಷ ಸಂಘಟನೆ ಜೊತೆಗೆ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಯನ್ನು ಘೋಷಣೆ ಮಾಡಲಿದ್ದು, ಜಿಲ್ಲೆಯ ಎಲ್ಲ ಕ್ಷೇತ್ರಗಳ ಆಕಾಂಕ್ಷಿಗಳು, ಶಾಸಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧಕ್ಷ ಎಂ.ವಿರೂಪಾಕ್ಷಿ ತಿಳಿಸಿದ್ದಾರೆ.
 

click me!