ರಮೇಶ್ ಕುಮಾರ್ ಶಕುನಿ: ಹೈಕಮಾಂಡ್‌ಗೆ ಒಂದು ತಿಂಗಳ ಗಡುವು ನೀಡಿದ ಕೆ.ಎಚ್.ಮುನಿಯಪ್ಪ

By Govindaraj S  |  First Published Jul 6, 2022, 12:32 AM IST

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ.ಎಚ್ ಮುನಿಯಪ್ಪ ಕಾಂಗ್ರೆಸ್‌ನಿಂದ ದೂರ ಉಳಿಯುವ ಸಾಧ್ಯತೆ ಇದೆ. ಇನ್ನೊಂದು ತಿಂಗಳು ಕಾದು ನೋಡುತ್ತೇನೆ ಎಂದು ಹೈಕಮಾಂಡ್‌ಗೆ ಗಡುವು ನೀಡಿದ್ದು, ಮಾಜಿ ಸ್ಪೀಕರ್ ರಮೇಶ್ ಕುಮಾರ್‌ರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.


ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಜು.06): ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ.ಎಚ್ ಮುನಿಯಪ್ಪ ಕಾಂಗ್ರೆಸ್‌ನಿಂದ ದೂರ ಉಳಿಯುವ ಸಾಧ್ಯತೆ ಇದೆ. ಇನ್ನೊಂದು ತಿಂಗಳು ಕಾದು ನೋಡುತ್ತೇನೆ ಎಂದು ಹೈಕಮಾಂಡ್‌ಗೆ ಗಡುವು ನೀಡಿದ್ದು, ಮಾಜಿ ಸ್ಪೀಕರ್ ರಮೇಶ್ ಕುಮಾರ್‌ರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಅದ್ಯಾಕೆ ಅನ್ನೋ ಕುತೂಹಲಕ್ಕೆ ಈ ಸ್ಟೋರಿ ನೋಡಿ. ಹೌದು! ಕೋಲಾರ ಜಿಲ್ಲೆಯಲ್ಲಿ ಇದೀಗ ಕಾಂಗ್ರೆಸ್‌ನ ಮನೆ ಛಿದ್ರ ಛಿದ್ರಗೊಂಡಿದೆ. ನಾನೇ ಎಲ್ಲಾ, ನನ್ನಿಂದಲೇ ಎಲ್ಲಾ ಅಂತ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರತಿಷ್ಠೆಗಾಗಿ ತೆಗೆದುಕೊಂಡಿದ್ದು ಕಾಂಗ್ರೆಸ್ ಒಡೆದ ಮನೆಯಾಗಿದೆ.

Latest Videos

undefined

2019ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಂಸದ ಕೆ.ಎಚ್ ಮುನಿಯಪ್ಪರನ್ನು ಸೋಲಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಂಡ್ ಟೀಂನವರು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದು, ಮುನಿಯಪ್ಪನವರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು! ಮೊನ್ನೆ ತಾನೆ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಭಾಗಿಯಾಗಿದ್ರು.

ಮುನಿಯಪ್ಪ ಕಾಂಗ್ರೆಸ್‌ ತೊರೆದು ಜೆಡಿಎಸ್‌ಗೆ: ದೇವೇಗೌಡ ಜೊತೆ ಮಾತುಕತೆ?

ಆದ್ರೆ ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳೆಸಿ, 28 ವರ್ಷಗಳ ಕಾಲ ಸಂಸದರಾಗಿಯೂ ಕೆಲಸ ಮಾಡಿರುವ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕ ಕೆ.ಎಚ್ ಮುನಿಯಪ್ಪರನ್ನು ಒಂದೂ ಮಾತನ್ನು ಕೇಳದೆ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ. ಇನ್ನು ಹಾಲಿ ಜೆಡಿಎಸ್ ಪಕ್ಷದ ಶಾಸಕ ಶ್ರೀನಿವಾಸಗೌಡ ಸೇರಿದಂತೆ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿರುವ ಮಾಜಿ ಶಾಸಕರುಗಳು ಹಾಗೂ ರಮೇಶ್ ಕುಮಾರ್ ಮುನಿಯಪ್ಪ ಸೋಲಿಗೆ ಕಾರಣಕರ್ತರು. ಈ ಬಗ್ಗೆ ರಮೇಶ್ ಕುಮಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೈಕಮಾಂಡ್ ಹಾಗೂ ರಾಜ್ಯದ ನಾಯಕರಿಗೆ ಕೆ.ಎಚ್ ಮುನಿಯಪ್ಪ ಪತ್ರ ಬರೆದು 3 ವರ್ಷ ಕಳೆದಿದೆ.

ಆದ್ರೆ ಇದುವರೆಗೂ ಯಾರ ವಿರುದ್ಧ ಕ್ರಮ ಕೈಗೊಂಡಿಲ್ಲ,ಅನ್ನೋದು ಕೆ.ಎಚ್ ಮುನಿಯಪ್ಪನವರಿಗೆ ಹೈಕಮಾಂಡ್ ವಿರುದ್ಧ ಬೇಸರವಿತ್ತು.ಇದರ ನಡುವೆ ಇದೀಗ ಹೈಕಮಾಂಡ್ ಹಾಗೂ ರಾಜ್ಯದ ನಾಯಕರು ಕೆ.ಎಚ್ ಮುನಿಯಪ್ಪ ವಿರೋಧಿ ಬಣಕ್ಕೆ ರೆಡ್ ಕಾರ್ಪೆಟ್ ಹಾಕಿ ವೇಲ್ಕಮ್ ಮಾಡಿದ್ದು ಮೂಲ ಕಾಂಗ್ರೆಸಿಗರು ಹಾಗೂ ಕೆ.ಎಚ್ ಮುನಿಯಪ್ಪ ಬಣದವರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ಕೆ.ಎಚ್ ಮುನಿಯಪ್ಪ ದುಡಿದಿದ್ದಾರೆ. ಗಾಂಧಿ ಕುಟುಂಬದ ಜೊತೆ ಉತ್ತಮ ಭಾಂಧವ್ಯ ಹೊಂದಿದ್ದಾರೆ,  ಹೀಗಿದ್ರು ಸಹ ಕೆ.ಎಚ್ ಮುನಿಯಪ್ಪನವರಿಗೆ ಈ ವಿಚಾರದಲ್ಲಿ ಭಾರಿ ಹಿನ್ನೆಡೆಯಾಗಿದ್ದು, ಇದನ್ನು ಪ್ರತಿಷ್ಠೆಯಾಗಿ ಸ್ವೀಕಾರ ಮಾಡಿದ್ದಾರೆ.

ಇವೆಲ್ಲಾ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುತ್ತಾರೆ ಅನ್ನೋ ಮಾತುಗಳು ಸಹ ಕೇಳಿಬಂದಿದ್ದು, ಇದಕ್ಕೆ ಪೂರಕವಾಗಿ ಇಂದು ಕೋಲಾರದ ತಮ್ಮ ಗೃಹ ಕಚೇರಿಯಲ್ಲಿ ತಮ್ಮ ಬೆಂಬಲಿಗರೊಟ್ಟಿಗೆ ಬಹಿರಂಗ ಸಭೆ ಕರೆದಿದ್ರು. ಬಹಿರಂಗ ಸಭೆಯಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದು,ನಾವು ಕೆ.ಎಚ್ ಮುನಿಯಪ್ಪ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಅಂತ ತಿಳಿಸಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ, ಮಾಲೂರು ಶಾಸಕ ನಂಜೇಗೌಡ,ಪರಿಷತ್ ಸದಸ್ಯ ನಜೀರ್ ಮತ್ತು ಅನಿಲ್ ಕುಮಾರ್ ಸೇರಿದಂತೆ ಹಲವರ ವಿರುದ್ಧ ಆಕ್ರೋಶ ಭರಿತ ಭಾಷಣ ಮಾಡಿದ್ರು. 

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆ.ಎಚ್ ಮುನಿಯಪ್ಪ,ನಾನು ಒಂದು ತಿಂಗಳವರೆಗೂ ಕಾಯುತ್ತೇನೆ ಅಷ್ಟೇ, ರಾಜಿ ಆಗೋದಕ್ಕೆ ನಾನು ಒಪ್ಪಿಗೆ ನೀಡಿದ್ರು ಸಹ ನನ್ನನ್ನು ಕಡೆಗಣಿಸಿ ಪಕ್ಷಕ್ಕೆ ಮೋಸ ಮಾಡಿರುವವರ ಮಾತನ್ನು ರಾಜ್ಯದ ನಾಯಕರ ನಂಬಿ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯನ್ನು ನಂಬಿಸಿದ್ದಾರೆ.ಕೆಲವೇ ದಿನಗಳಲ್ಲಿ ಇವರ ನಾಟಕ ಏನು ಅಂತ ಹೈಕಮಾಂಡ್ ಗೆ ತಿಳಿಯಲಿದೆ,  ಹಾಗಾಗಿ ನಾನು ಹೈಕಮಾಂಡ್ ಬಗ್ಗೆ ಮಾತನಾಡುವುದಿಲ್ಲ ಅಂತ ಹೇಳಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ರಮೇಶ್ ಕುಮಾರ್ ಓರ್ವ ಶಕುನಿ ಇದ್ದಂತೆ,ಎಲ್ಲರನ್ನೂ ಒಗ್ಗೂಡಿಸಿಕೊಂಡು ಶಕುನಿ ಪಾತ್ರ ಮಾಡ್ತಿದ್ದಾನೆ. ನನ್ನ ಪ್ರಾಣ ಪಣಕ್ಕಿಟ್ಟು, ಹಣ ಕೊಟ್ಟು ಗೆಲ್ಲಿಸಿರೋರನ್ನ ಮಾಯಾ ಮಂತ್ರದಲ್ಲಿ ಬಂಧಿಸಿದ್ದಾನೆ.

ಈ ಬಾರಿಯ ಚುನಾವಣೆಯಲ್ಲಿ ಸೋಲುತ್ತೇನೆ ಎಂದು ರಮೇಶ್ ಕುಮಾರ್ ಶಕುನಿ ಪಾತ್ರ ಮಾಡ್ತಿದ್ದಾನೆ.ಅವರ ಗುಂಪಿನಲ್ಲಿರುವ ಎಲ್ಲರನ್ನೂ ಸೋಲಿಸಲು ಮಾಟ ಮಂತ್ರ ಮಾಡಿಸಿದ್ದಾನೆ. ಬುದ್ದಿ ಇಲ್ಲದೆ ಕೆಲವರು ಇವನ ಗುಂಪಿಗೆ ಸೇರಿಕೊಂಡಿದ್ದಾರೆ. ರಾಹುಲ್ ಗಾಂಧಿ ಬಂದು ಪ್ರಚಾರ ಮಾಡಿದ್ರು ಈ ಬಾರಿ ರಮೇಶ್ ಕುಮಾರ್ ಸೊತ್ತೋಗುತ್ತಾನೆ. ಮಹಾಭಾರತದ ಮಹಾಯುದ್ಧ ಮುಕ್ಕಾಲು ಭಾಗ ಮುಗಿದು ಕಾಲು ಭಾಗಮಾತ್ರ ಉಳಿದಿದೆ. ವನವಾಸ ಮುಗಿಸಿ ಪಾಂಡವರಾಗಿದ್ದೇವೆ,ಇನ್ಮುಂದೆ ಯುದ್ಧ ಶುರುವಾಗುತ್ತೆ. ಶಕುನಿ,ದುರ್ಯೋಧನ, ದುಶ್ಯಾಸನ, ದ್ರೋಣಾಚಾರ್ಯ, ಅಶ್ವತ್ಥಾಮ ಯಾವ ರೀತಿ ಹತವಾಗುತ್ತಾರೆ ಎಂದು ನೋಡ್ತಿರ. ಆ ಕಾಲ ಬರುವ ಸಮಯ ಸನಿಹದಲ್ಲಿದೆ. ಹಾಗಾಗಿ ಎಲ್ಲರನ್ನೂ ಕರೆದುಕೊಂಡು ಹೋಗಿ ರಮೇಶ್ ಕುಮಾರ್ ಬಲಿ ಕೊಡ್ತಿದ್ದಾನೆ.

ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ, ಪಕ್ಷ ತೊರೆಯುವ ಸುಳಿವು ಕೊಟ್ಟ ಮತ್ತೋರ್ವ ಹಿರಿಯ ನಾಯಕ

ರಮೇಶ್ ಕುಮಾರ್ ಎಲ್ಲಾ ರೀತಿಯ ಏಕಪಾತ್ರಾಭಿನಯ ಮಾಡ್ತಿದ್ದಾನೆ. ನಾನು ರಾಜಿ ಮಾಡಿಕೊಳ್ಳಲು ಒಪ್ಪಿಕೊಂಡಿದೆ, ಆದ್ರೆ ನನ್ನ ಗಮನಕ್ಕೆ ತರದೆ ಕೆಲವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ನಾನು ನಡೆದ ಧರ್ಮದ ದಾರಿಯ ಮೂಲಕ ಶ್ರೀಕೃಷ್ಣ ಪರಮಾತ್ಮ ನಿಮಗೆ ಪಾಠ ಕಲಿಸುತ್ತಾನೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ರಾಹುಲ್ ಬಳಿ ಏನು ಹೇಳಿದಿರಿ ಗೊತ್ತಿಲ್ಲ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ಈ ಬಗ್ಗೆ ನಿಧಾನವಾಗಿ ಅರ್ಥವಾಗುತ್ತೆ. ಬೇರೆ ಪಕ್ಷ ಸೇರುವ ಬಗ್ಗೆ ಪ್ರಚಾರ ಮಾಡೋದು ಬೇಡ, ಕಾರ್ಯಕರ್ತರು ತೀರ್ಮಾನ ಮಾಡ್ತಾರೆ.ಹೈಕಮಾಂಡ್ ತೆಗೆದುಕೊಂಡ ನಿರ್ಧಾರದ ಬಗ್ಗೆ ನನ್ನ ಬಳಿ ಉತ್ತರವಿಲ್ಲ.

ನಾಯಕರಿಗೆ ಇನ್ನೊಂದು ತಿಂಗಳು ಕಾಲಾವಕಾಶ ನೀಡುತ್ತೇನೆ, ಬಳಿಕ ಹೊಸ ಅಧ್ಯಾಯ ಪ್ರಾರಂಭವಾಗುತ್ತೆ ಅಂತ ಪರೋಕ್ಷವಾಗಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್‌ಗೆ ಎಚ್ಚರಿಕೆ ನೀಡಿದರು. ಒಟ್ಟಾರೆ ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕ, ಕಟ್ಟಾಳು ಆಗಿರುವ ಕೆ.ಎಚ್ ಮುನಿಯಪ್ಪ ಕಾಂಗ್ರೆಸ್ ಪಕ್ಷದ ನಡೆಯ ವಿರುದ್ಧ ಬೇಸರ ಹೊಂದಿರುವುದು ಸುಳ್ಳಲ್ಲ. 50 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಇರುವ ಕೆ.ಎಚ್ ಮುನಿಯಪ್ಪ ಒಂದೂ ತಿಂಗಳ ಬಳಿಕ ಜೆಡಿಎಸ್ ಪಕ್ಷಕ್ಕೆ ಸೇರಿಕೊಳ್ತಾರ ಅಥವಾ ಕಾಂಗ್ರೆಸ್ ನಲ್ಲೇ ಉಳಿದುಕೊಂಡು ವಿರೋಧಿ ಬಣದ ಅಭ್ಯರ್ಥಿಗಳ ಸೋಲಿಗೆ ಶ್ರಮವಹಿಸುತ್ತಾರ ಅನ್ನೋದನ್ನ ಕಾದು ನೋಡಬೇಕಿದೆ.

click me!