
ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ- ಮಂಡಳಿ ನೇಮಕಾತಿಯನ್ನು ಬೆಳಗಾವಿ ಅಧಿವೇಶನದ ನಂತರ ಮಾಡಬೇಕೇ ಅಥವಾ ಅದಕ್ಕೂ ಮುನ್ನವೇ ಪೂರ್ಣಗೊಳಿಸಬೇಕೇ ಎಂಬ ಜಿಜ್ಞಾಸೆ ಕಾಂಗ್ರೆಸ್ ನಾಯಕರನ್ನು ಕಾಡಿದೆ. ಆದರೆ ಯಾವುದೇ ನಿರ್ಣಯ ಕೈಗೊಳ್ಳದೇ ಸಭೆ ಬರ್ಖಾಸ್ತಾಗಿದೆ.
ಸಂಪುಟ ವಿಸ್ತರಣೆ ಯಾವಾಗ ನಡೆಸಬೇಕು ಎಂಬ ಬಗ್ಗೆ ನಿರ್ಧರಿಸಲು ಶಾಸಕಾಂಗ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಶುಕ್ರವಾರ ತಡರಾತ್ರಿವರೆಗೂ ಸಭೆ ನಡೆಸಿದರು.
ಉಪ ಚುನಾವಣೆ ನಂತರ ಸಂಪುಟ ವಿಸ್ತರಣೆ ನಡೆಸುವ ಭರವಸೆ ನೀಡಿರುವುದರಿಂದ ಈ ಮಾಸಾಂತ್ಯದೊಳಗೆ ಸಂಪುಟ ವಿಸ್ತರಣೆ ನಡೆಸುವುದು ಸೂಕ್ತ ಎಂದು ಕೆಲ ನಾಯಕರು ಸಭೆಯಲ್ಲಿ ಅಭಿಪ್ರಾಯ ಮಂಡಿಸಿದರು ಎನ್ನಲಾಗಿದೆ. ಆದರೆ, ಸಂಪುಟ ವಿಸ್ತರಣೆಯನ್ನು ಮಾಡಿದರೆ, ಅಸಮಾಧಾನಗೊಂಡವರು ತಮ್ಮ ಅತೃಪ್ತಿ ಹೊರ ಹಾಕಲು ಡಿಸೆಂಬರ್ ಎರಡನೇ ವಾರದಲ್ಲಿ ನಡೆಯಲಿರುವ ಬೆಳಗಾವಿ ಅಧಿವೇಶನವನ್ನು ವೇದಿಕೆಯಾಗಿ ಬಳಸಿಕೊಂಡು ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡಬಹುದು. ಹೀಗಾಗಿ, ಬೆಳಗಾವಿ ಅಧಿವೇಶನದ ನಂತರವೇ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳುವುದು ಉತ್ತಮ ಎಂದು ಮತ್ತೆ ಕೆಲ ನಾಯಕರು ವಾದಿಸಿದರು ಎನ್ನಲಾಗಿದೆ.
ಸುದೀರ್ಘ ಚರ್ಚೆಯ ನಂತರವೂ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪಕ್ಷದ ಇತರ ಎಲ್ಲಾ ಹಿರಿಯ ನಾಯಕರ ಅಭಿಪ್ರಾಯ ಪಡೆದು ಈ ಬಗ್ಗೆ ತೀರ್ಮಾನ ಕೈಗೊಳ್ಳೋಣ ಎಂದು ನಿರ್ಧರಿಸಿ ಸಭೆ ಬರ್ಖಾಸ್‌್ತ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.