Latest Videos

ಕೋಮು ವಿಷಯಗಳಲ್ಲಿ ಕಾಂಗ್ರೆಸ್‌ ಇನ್ನು ಗಪ್‌ಚುಪ್‌?

By Kannadaprabha NewsFirst Published Aug 17, 2022, 5:00 AM IST
Highlights
  • ಕೋಮು ವಿಷಯಗಳಲ್ಲಿ ಕಾಂಗ್ರೆಸ್‌ ಇನ್ನೂ ಮೌನವಾಗಿದೆ.
  • - ತಾಳ್ಮೆ ಕಳೆದುಕೊಂಡರೆ ಬಿಜೆಪಿಗೆ ಲಾಭ
  • 40% ಕಮಿಷನ್‌ ವಿಷಯವನ್ನೇ ಪ್ರಸ್ತಾಪಿಸಿ: ಕಾಂಗ್ರೆಸ್‌ಗೆ ಚುನಾವಣಾ ತಂತ್ರಗಾರನ ಸಲಹೆ

ಬೆಂಗಳೂರು (ಆ.17):ಕೋಮು ವಿಚಾರ ಬಂದಾಗ ಸಂಯಮದಿಂದ ಹೇಳಿಕೆ ನೀಡಿ. ಏಕೆಂದರೆ, ಇಂತಹ ವಿಚಾರವಿಟ್ಟುಕೊಂಡು ಚಕಮಕಿ ನಡೆಸಿದಾಗಲೆಲ್ಲ ಬಿಜೆಪಿಗೆ ಲಾಭವಾಗಿದೆ. ಹಾಲಿ ಬಿಜೆಪಿ ಸರ್ಕಾರ ಭ್ರಷ್ಟಗೊಂಡಿದೆ ಎಂಬುದು ಜನ ಮಾನಸದಲ್ಲಿದೆ. ಅದನ್ನು ಚುನಾವಣೆವರೆಗೂ ಕಾಯ್ದಿಟ್ಟುಕೊಳ್ಳಲು ಕಾರ್ಯತಂತ್ರ ರೂಪಿಸಿ. ಬಿಜೆಪಿ ಸಚಿವರ ನಡುವೆಯೇ ಮಾತಿನ ಚಕಮಕಿ ನಡೆಯುತ್ತಿದೆ. ಇದು ಹೆಚ್ಚಾಗಿ ಜನರನ್ನು ತಲುಪುವಂತೆ ಮಾಡಿ. ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದ ಮಹಿಳೆಯರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಗ್ಗೆ ಅಸಹನೆಗೊಂಡಿದ್ದಾರೆ. ಅದಕ್ಕೆ ಇನ್ನಷ್ಟುಇಂಬು ಕೊಡಿ...

IndiaGate: ಸಿದ್ದರಾಮೋತ್ಸವ, ಸಿದ್ದು ಜೊತೆ ಹಿರಿಯ ನಾಯಕರು, ಮುಲಾಜಿಗೆ ಬಿದ್ರಾ ಡಿಕೆಶಿ..?

ಇದು ರಾಜ್ಯ ಉಸ್ತುವಾರಿ ಸುರ್ಜೇವಾಲಾ(Randeep Surjewala) ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರಾಜ್ಯ ನಾಯಕರ ಮುಂದೆ ರಾಜಕೀಯ ತಂತ್ರಜ್ಞ ಸುನೀಲ್‌ ಕನುಗೋಳು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಲು ಅನುಸರಿಸಬೇಕಾದ ಕಾರ್ಯತಂತ್ರ ಕುರಿತಂತೆ ನೀಡಿರುವ ಸಲಹೆಗಳಿವು.

ಕೋಮು ಸಂಘರ್ಷ ಹಾಗೂ ಕೋಮು ವಿಚಾರಗಳಲ್ಲಿ ಮಾತಿನ ಚಕಮಕಿ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರು ಅತಿ ಹೆಚ್ಚು ಸಂಯಮ ವಹಿಸಬೇಕು ಎಂದು ಕನುಗೋಳು ಸಲಹೆ ನೀಡಿದ್ದಾರೆ. ಕೋಮು ಸಂಘರ್ಷ ಹಾಗೂ ಅಂತಹ ವಿಚಾರಗಳನ್ನು ಇಟ್ಟುಕೊಂಡು ಚಕಮಕಿ ನಡೆಸಿದಾಗಲೆಲ್ಲ ಜನಾಭಿಪ್ರಾಯ ಹೇಗೆ ಬಿಜೆಪಿ ಪರವಾಗಿ ರೂಪುಗೊಂಡಿತು ಎಂಬುದನ್ನು ದಾಖಲೆಗಳ ಸಹಿತ ನಾಯಕರಿಗೆ ವಿವರಿಸಿ ಈ ಸಲಹೆ ನೀಡಿದ್ದಾರೆ.

ಬಿಜೆಪಿ ಸರ್ಕಾರ(Bjp Govt)ದಲ್ಲಿ ಶೇ. 40ರಷ್ಟುಕಮಿಷನ್‌ ಭ್ರಷ್ಟಾಚಾರವಿದೆ ಎಂಬುದು ಜನ ಮಾಸನದಲ್ಲಿ ಬೇರು ಬಿಟ್ಟಿದೆ. ಇದು ಚುನಾವಣೆವರೆಗೂ ಉಳಿದುಕೊಳ್ಳುವಂತೆ ಕಾರ್ಯತಂತ್ರ ರೂಪಿಸಬೇಕು. ಬಿಜೆಪಿ ಸಚಿವರು ತಮ್ಮ ತಮ್ಮಲ್ಲೇ ಮಾತಿನ ಚಕಮಕಿ ನಡೆಸುತ್ತಿದ್ದು, ಇದನ್ನು ಕಾಂಗ್ರೆಸ್‌ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Congress Politics: 1 ವರ್ಷ ಕರ್ನಾಟಕದಲ್ಲೇ ಸುರ್ಜೇವಾಲಾ ಠಿಕಾಣಿ!

ಇದಲ್ಲದೆ, ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಹಿಳೆಯರಲ್ಲಿ ಭಾರಿ ಅಸಮಾಧಾನವಿದೆ. ಬೆಲೆ ಏರಿಕೆ, ಮಹಿಳೆಯರಿಗೆ ನೀಡುತ್ತಿದ್ದ ಸೌಲಭ್ಯಗಳನ್ನು ಹಿಂಪಡೆದಿರುವುದು ಸೇರಿದಂತೆ ಹಲವು ಕಾರಣಕ್ಕೆ ಇಂತಹದೊಂದು ಮನೋಭಾವ ಮಹಿಳಾ ವರ್ಗದಲ್ಲಿ ಮೂಡಿದೆ. ಇದನ್ನು ಮತ್ತಷ್ಟುಪ್ರೇರೇಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಕಾಂಗ್ರೆಸ್‌ ಮಹಿಳೆ ಪರ ನಿಲುವು ಹೊಂದಿದೆ ಎಂಬುದನ್ನು ಮನದಟ್ಟು ಮಾಡಿಸಬೇಕು ಎಂದು ಸಲಹೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಇತ್ತೀಚಿನ ಪ್ರವಾಹ ಪರಿಸ್ಥಿತಿಯನ್ನು ರಾಜ್ಯ ನಿಭಾಯಿಸಿದ ರೀತಿ ಬಗ್ಗೆ ಜನರಲ್ಲಿ ಅಸಮಾಧಾನವಿದೆ. ಅದರಲ್ಲೂ ವಿಶೇಷವಾಗಿ ಪ್ರವಾಹ ಪೀಡಿತವಾದ ಪ್ರದೇಶ ಬಿಜೆಪಿಯ ಭದ್ರಕೋಟೆ. ಇಂತಹ ಪ್ರದೇಶದಲ್ಲಿ ಮೂಡಿರುವ ಅಸಮಾಧಾನವನ್ನು ಕಾಂಗ್ರೆಸ್‌ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ನಿರುದ್ಯೋಗ ಸಮಸ್ಯೆ ಬಗ್ಗೆ ರಾಜ್ಯದ ಯುವ ಸಮೂಹದಲ್ಲಿ ಹೆಚ್ಚಿನ ಮಾಹಿತಿ ಇಲ್ಲ. ಈ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ರಾಜ್ಯ ಕಾಂಗ್ರೆಸ್‌ ವಾರ್‌ ರೂಂ ಉಸ್ತುವಾರಿ ಸೆಂಥಿಲ್‌ ಅವರೊಂದಿಗೂ ಸಭೆ ನಡೆಸಿದ ಸುರ್ಜೇವಾಲಾ, ಚುನಾವಣಾ ಕಾರ್ಯತಂತ್ರಗಳ ಕುರಿತು ವಿಸ್ತೃತವಾಗಿ ಚರ್ಚಿಸಿದರು. ರಾಜ್ಯ ನಾಯಕರೂ ಈ ಸಂದರ್ಭದಲ್ಲಿ ಹಾಜರಿದ್ದರು.

ಕರ್ನಾಟಕದ ಭೂಪಟವನ್ನು ಪ್ರದರ್ಶಿಸಿ ವಿಭಾಗವಾರು ಚರ್ಚೆ ನಡೆಸಿ, ಪ್ರತಿಯೊಬ್ಬರೂ ಮುಕ್ತವಾಗಿ ಅಭಿಪ್ರಾಯ ನೀಡಿ ಎಂದು ಸಭೆಯಲ್ಲಿ ಮನವಿ ಮಾಡಲಾಗಿದೆ. ಯಾವ್ಯಾವ ಭಾಗದಲ್ಲಿ ಪ್ರಚಾರ ನಡೆಸುವಾಗ ಯಾವ್ಯಾವ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಬೇಕು, ಆ.19 ರಿಂದ ಪ್ರಚಾರ ಸಮಿತಿ ಅಧ್ಯಕ್ಷರು ಯಾವ್ಯಾವ ಜಿಲ್ಲೆಗಳಲ್ಲಿ ಪ್ರವಾಸ ಮಾಡಬೇಕು ಎಂದು ವಿವರಿಸಲಾಗಿದೆ.

5 ವಲಯವಾಗಿ ವಿಂಗಡಣೆ:

ರಾಜ್ಯವನ್ನು ಒಟ್ಟು ಐದು ವಲಯವಾಗಿ ವಿಂಗಡಣೆ ಮಾಡಿಕೊಂಡು ಪ್ರಚಾರ ಕಾರ್ಯ ಕೈಗೊಳ್ಳಬೇಕು. ಕೆಪಿಸಿಸಿ ಅಧ್ಯಕ್ಷರು, ವಿಧಾನಸಭೆ ಪ್ರತಿಪಕ್ಷ ನಾಯಕರು, ಪ್ರಚಾರ ಸಮಿತಿ ಅಧ್ಯಕ್ಷರು ಸೇರಿದಂತೆ ಐದು ತಂಡಗಳನ್ನು ರಚಿಸಿಕೊಂಡು ಅಖಾಡಕ್ಕಿಳಿಯಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರಗಳು ನೀಡಿದ್ದ ಜನಪರ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಜಿಲ್ಲಾ ಪ್ರವಾಸದಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಹೆಚ್ಚು ಪ್ರಸ್ತಾಪಿಸಬೇಕು ಎಂದು ಸಲಹೆ ನೀಡಲಾಗಿದೆ.

click me!