ಔರಾದ್ ಬಿಜೆಪಿಯ ಶಾಸಕನಾಗಿರುವ ನನ್ನ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅಡ್ಡಗಾಲು ಹಾಕ್ತಿದೆ. ಕಾರಂಜಾದಿಂದ ಔರಾದ್ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯ 84 ಕೋಟಿ ರು. ಯೋಜನೆ ಟೆಂಡರ್ ಆಗಿ ಎರಡು ವರ್ಷವಾದರೂ ಕಾಮಗಾರಿ ಆರಂಭವಾಗಿಲ್ಲ.
ಬೀದರ್ (ಜ.12): ಔರಾದ್ ಬಿಜೆಪಿಯ ಶಾಸಕನಾಗಿರುವ ನನ್ನ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅಡ್ಡಗಾಲು ಹಾಕ್ತಿದೆ. ಕಾರಂಜಾದಿಂದ ಔರಾದ್ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯ 84 ಕೋಟಿ ರು. ಯೋಜನೆ ಟೆಂಡರ್ ಆಗಿ ಎರಡು ವರ್ಷವಾದರೂ ಕಾಮಗಾರಿ ಆರಂಭವಾಗಿಲ್ಲ. ಕೆರೆ ತುಂಬಿಸುವ 560 ಕೋಟಿ ರು. ಕಾಮಗಾರಿ ಮರು ಟೆಂಡರ್ ಮಾಡಲಾಗಿದೆ ಅನಗತ್ಯ ವಿಳಂಬವನ್ನು ಇನ್ಮುಂದೆ ಸಹಿಸಲ್ಲ ಎಂದು ಶಾಸಕ ಪ್ರಭು ಚವ್ಹಾಣ್ ಆಕ್ರೋಶ ವ್ಯಕ್ತಪಡಿಸಿದರು. ಅವರು ಕಾರಂಜಾ ಜಲಾಶಯದಿಂದ ಔರಾದ್ ಪಟ್ಟಣ ಹಾಗೂ ಮತ್ತಿತರ ಗ್ರಾಮಗಳಿಗೆ ನೀರು ಪೂರೈಸುವ ಕಾಮಗಾರಿಯ ಕುರಿತಂತೆ ಭಾಲ್ಕಿ ತಾಲೂಕಿನ ಹಲಬರ್ಗಾ ಸಮೀಪದ ತೇಗಂಪೂರ ಗ್ರಾಮದ ಸ್ಥಳ ಪರಿಶೀಲನೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಸಮಧಾನ ಹೊರಹಾಕಿದರು.
ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಕಾರಂಜಾ ಜಲಾಶಯದಿಂದ ಪೈಪ್ ಲೈನ್ ಮೂಲಕ ಔರಾದ್ ಹಾಗೂ ಕಮಲನಗರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವುದು ಅಲ್ಲದೆ ಈ ನಡುವೆ ಬರುವ 6 ಗ್ರಾಮಗಳಿಗೂ ಕುಡಿಯುವ ನೀರು ಪೋರೈಸಲು ಅಮೃತ ಯೋಜನೆಯ 2.0 ಅಡಿಯಲ್ಲಿ ಸರ್ಕಾರ ಒಟ್ಟು 84.82 ಕೋಟಿ ರು. ವೆಚ್ಚದ ಯೋಜನೆಯನ್ನು 2022 ರಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಮಂಜೂರಾತಿ ಪಡೆದು ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಆದರೆ ಗುತ್ತಿಗೆದಾರ ಇಲ್ಲಿಯವರೆಗೆ ಕಾಮಗಾರಿ ಆರಂಭಿಸುವುದನ್ನು ಬಿಟ್ಟು ಅನಗತ್ಯ ವಿಳಂಬ ಮಾಡ್ತಿರುವುದು ಕಾಂಗ್ರೆಸ್ಸಿಗರ ಹಸ್ತಕ್ಷೇಪದ ಅನುಮಾನ ಹುಟ್ಟಿಸುತ್ತಿದೆ ಎಂದು ಶಾಸಕ ಪ್ರಭು ಚವ್ಹಾಣ್ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದುಗೆ ವಯಸ್ಸಾಗಿದೆ, ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡಲಿ: ಶಾಸಕ ಪ್ರಭು ಚವ್ಹಾಣ್
ಬೇಸಿಗೆಯಲ್ಲಿ ಜನರಿಗೆ ನೀರಿನ ಸಮಸ್ಯೆ ಆಗ್ತದೆ. ತಕ್ಷಣ ಭೂ ಸ್ವಾಧೀನ ಕಾರ್ಯ ಮಾಡುವುದು, ಅಲ್ಲಲ್ಲಿ ಬರುವ ಅರಣ್ಯ ಇಲಾಖೆಯ ಅನುಮತಿಗಾಗಿ ಅನಗತ್ಯ ವಿಳಂಬ ಮಾಡಲಾಗ್ತಿದೆ. ಇದೇ ರೀತಿ ವಿಳಂಬ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ್ರೆ ಮುಂಬರುವ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಶಾಸಕ ಪ್ರಭು ಚವ್ಹಾಣ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಗಮನಕ್ಕೂ ಸಾಕಷ್ಟು ಬಾರಿ ತರಲಾಗಿದೆ ಆದರೆ ಅದಕ್ಕೆ ಯಾವುದೇ ಪ್ರತಿಫಲ ಸಿಕ್ಕಿಲ್ಲ. ಬಿಜೆಪಿಯ ಶಾಸಕರ ಕ್ಷೇತ್ರಗಳಿಗೆ ಅನ್ಯಾಯವಾಗ್ತಿದೆ. ಇನ್ನು ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು ಕಾಮಗಾರಿ ಆರಂಭಕ್ಕೆ ಬಿಡುತ್ತಿಲ್ಲವೇ ಎಂಬ ಅನುಮಾನ ಮೂಡುತ್ತಿದೆ ಎಂದು ಪ್ರಭು ಚವ್ಹಾಣ್ ಆರೋಪಿಸಿದರು.
ಮದ್ಯ ಮಾರಾಟ ನಿಲ್ಲಿಸಲು ಆಗ್ರಹ: ಅಕ್ರಮ ಮದ್ಯದಂಗಡಿಗಳು ತಲೆ ಎತ್ತಿದ್ದು, ಇದರಿಂದ ಪತಿ, ಮಕ್ಕಳು ಸೇರಿದಂತೆ ಬಹುತೇಕರು ಕುಡಿತಕ್ಕೆ ದಾಸರಾಗುತ್ತಿದ್ದು, ತಕ್ಷಣವೇ ಮದ್ಯದಂಗಡಿಗಳನ್ನು ಬಂದ್ ಮಾಡಿಸುವಂತೆ ಶಾಸಕ ಪ್ರಭು ಚವ್ಹಾಣ್ ಎದುರು ಮಹಿಳೆಯರ ಗುಂಪು ಅಂಗಲಾಚಿತು. ತಾಲೂಕಿನ ಹಕ್ಯಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಪ್ರಭು ಚವ್ಹಾಣ್ ಅವರು ಸೋಮವಾರ ಗ್ರಾಮ ಸಂಚಾರ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 15ಕ್ಕೂ ಅಧಿಕ ಮಹಿಳೆಯರು ಗ್ರಾಮದಲ್ಲಿ ಮದ್ಯದ ಹಾವಳಿ ತಡೆಯುವಂತೆ ಮನವಿ ಮಾಡಿದರು.
ಹಕ್ಯಾಳ ಗ್ರಾಮದ ನಾಲ್ಕು ಅಂಗಡಿಗಳಲ್ಲಿ ಕಿರಾಣಿ ವಸ್ತುಗಳು ಮಾರಾಟ ಮಾಡುವ ರೀತಿಯಲ್ಲಿ ಮದ್ಯದ ಬಾಟಲ್‌ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡ್ತಿ ದ್ದಾರೆ. ನಮ್ಮ ಯಜಮಾನರು ದಿನವಿಡೀ ಕೂಲಿ ಮಾಡಿ ತಂದ ಹಣ ಸುಲಭವಾಗಿ ಸಿಗುವ ಮದ್ಯದ ಆಮಲಿಗೆ ಬಲಿಯಾಗಿ ಕಂಠಪೂರ್ತಿ ಕುಡಿದು ಮನೆಗೆ ಬಂದು ಹೆಂಡ್ತಿ ಮಕ್ಕಳೊಂದಿಗೆ ಜಗಳ ಅಡ್ತಿದ್ದಾರೆ. ಇದರಿಂದ ನಮ್ಮ ಸಂಸಾರ ಬೀದಿಗೆ ಬಂದಿದೆ ನಮಗೆ ರಕ್ಷಣೆ ನೀಡಿ ಅಂತ ಗ್ರಾಮದ ಲಕ್ಷ್ಮಿಬಾಯಿ ಕಾಂಬಳೆ ಕೇಳಿಕೊಂಡರು. ಗ್ರಾಮದಲ್ಲಿ ಮಧ್ಯ ಮಾರಾಟ ಸಾಮಾನ್ಯವಾಗಿದೆ.
ಖೂಬಾಗೆ ಟಿಕೆಟ್ ಘೋಷಣೆಯಿಂದ ಪ್ರಭು ಚವ್ಹಾಣ್‌ಗೆ ಶಾಕ್, ಆರೋಗ್ಯ ಏರುಪೇರಾಗಿ ಆಸ್ಪತ್ರೆ ದಾಖಲು!
ಹದಿ ಹರೆಯದ ಅದೆಷ್ಟೋ ಮಕ್ಕಳು ಒಬ್ಬರಿಂದ ಮತ್ತೊಬ್ಬರು ಎನ್ನುವಂತೆ ಕುಡಿತದ ಚಟಕ್ಕೆ ಸುಲಭವಾಗಿ ದಾಸರಾಗಿ, ಭವಿಷ್ಯ ಅತಂತ್ರವಾಗಿ ಬದುಕು ಕಟ್ಟಿಕೊಳ್ಳುವ ಮುನ್ನವೇ ಹಾಳಾಗಿ ಆಗಿ ಹೋಗಿದ್ದಾರೆ. ಇದಕ್ಕೆಲ್ಲಾ ಸುಲಭವಾಗಿ ಸಿಗುವ ಮದ್ಯದ ಅಂಗಡಿಗಳೇ ಕಾರಣ ಎಂದು ವಿಮಲಾಬಾಯಿ ದೂರಿದರು. ವಾರದೊಳಗಾಗಿ ಮಧ್ಯದಂಗಡಿಗಳು ಬಂದ್ ಮಾಡಿಸದಿದ್ದರೆ ಪೊಲೀಸ್ ಠಾಣೆ ಎದುರಲ್ಲಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಮಹಿಳೆಯರು ಎಚ್ಚರಿಕೆ ನೀಡಿದಾಗ ಶಾಸಕ ಪ್ರಭು ಚವ್ಹಾಣ್ ಅಕ್ರಮ ಮದ್ಯದಂಗಡಿಗಳನ್ನು ಮುಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.