
ಬೆಂಗಳೂರು (ಜು.03): ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರವಾಗುವಂತೆ ಪದೇಪದೇ ಹೇಳಿಕೆ ನೀಡುತ್ತಿರುವ ಆಳಂದ ಶಾಸಕ ಬಿ.ಆರ್.ಪಾಟೀಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಬಹಿರಂಗ ಹೇಳಿಕೆಗಳನ್ನು ನಿಲ್ಲಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬಿ.ಆರ್.ಪಾಟೀಲ್ ಅವರಿಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ. ವಸತಿ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬಿ.ಆರ್. ಪಾಟೀಲ್ ಹೇಳಿಕೆ ನೀಡಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳಿಗೆ ಅಸ್ತ್ರವನ್ನು ನೀಡಿದ್ದರು.
ಅದರ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಲಕ್ಕಿ ಲಾಟರಿ ಸಿಎಂ ಎಂದು ಸ್ನೇಹಿತರೊಬ್ಬರ ಬಳಿ ಮಾತನಾಡುತ್ತಿರುವ ವೀಡಿಯೋ ಬಹಿರಂಗವಾಗಿ, ಪಕ್ಷಕ್ಕೆ ಮತ್ತೆ ಮುಜುಗರವನ್ನುಂಟು ಮಾಡಿದ್ದರು. ಈ ಎರಡೂ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ರಣದೀಪ್ ಸಿಂಗ್ ಸುರ್ಜೆವಾಲಾ, ಬುಧವಾರ ಬಿ.ಆರ್. ಪಾಟೀಲ್ ಅವರಿಗೆ ಕರೆ ಮಾಡಿ ಪದೇಪದೇ ವಿವಾದಾತ್ಮಕ ಮಾತನ್ನಾಡುವುದು, ಪಕ್ಷ ಮತ್ತು ಸರ್ಕಾರದ ವಿರುದ್ಧದ ಹೇಳಿಕೆ ನೀಡುವುದನ್ನು ಕೂಡಲೇ ನಿಲ್ಲಿಸಬೇಕು. ಮತ್ತೊಮ್ಮೆ ಈ ರೀತಿ ಹೇಳಿಕೆಗಳನ್ನು ನೀಡಿದರೆ ನೋಟಿಸ್ ನೀಡಲಾಗುವುದು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಜಾಲತಾಣದಲ್ಲಿ ನನ್ನತೇಜೋವಧೆ: ಬಿಆರ್ಪಿಈ ನಡುವೆ, ಬುಧವಾರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಬಿ.ಆರ್. ಪಾಟೀಲ್, ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹೇಳಿಕೆಯನ್ನು ತಿರುಚಿ ತೇಜೋವಧೆ ಮಾಡುವ ಕೆಲಸವಾಗುತ್ತಿದೆ. ಸ್ನೇಹಿತನೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡುವಾಗ ಕೆಲವೊಂದು ವಿಚಾರ ಹೇಳಿದ್ದೆ. ಆದರೆ, ಅದನ್ನು ತಿರುಚಲಾಗಿದೆ. ಸೋನಿಯಾ ಗಾಂಧಿ ಅವರನ್ನು ಸಿದ್ದರಾಮಯ್ಯ ಅವರಿಗೆ ನಾನು ಭೇಟಿ ಮಾಡಿಸಿಲ್ಲ. ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಹೋದಾಗ ನಾನೂ ಅವರೊಂದಿಗಿದ್ದೆ. ಇನ್ನು, ಸಿದ್ದರಾಮಯ್ಯ ಅವರಿಗಿದ್ದ ಜನ ಬೆಂಬಲವನ್ನು ನೋಡಿ ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿತು. ನಾವು ಹೇಳಿದ್ದರಿಂದ ಅವರನ್ನು ಮುಖ್ಯಮಂತ್ರಿ ಮಾಡಿಲ್ಲ. ಇವೆಲ್ಲವೂ ನನ್ನ ಮತ್ತು ಸಿದ್ದರಾಮಯ್ಯ ನಡುವಿನ ಸಂಬಂಧ ಹಾಳು ಮಾಡಲು ಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನನ್ನ ಆರೋಪಕ್ಕೆ ನಾ ಬದ್ಧ: ‘ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಕುರಿತು ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಜೊತೆಗೆ ದೂರವಾಣಿ ಮೂಲಕ ನಾನು ಹೇಳಿದ್ದೆಲ್ಲವೂ ಸತ್ಯ. ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆಗಳ ಹಂಚಿಕೆ ವಿಚಾರವಾಗಿ ಒಂದು ಮನವಿಗಾಗಿ ನಾನು ಅವರಿಗೆ ಕರೆ ಮಾಡಿದ್ದೆ. ಆಡಿಯೋದಲ್ಲಿರುವ ಧ್ವನಿ ನನ್ನದೆ, ನನ್ನ ಆರೋಪಕ್ಕೆ ನಾನು ಈಗಲೂ ಬದ್ಧ. ಆದರೆ, ಈ ಆಡಿಯೋ ಲೀಕ್ ಆಗಿದ್ದು ಹೇಗೆ ಎಂಬುದು ಗೊತ್ತಿಲ್ಲಎಂದು ಆಳಂದ ಶಾಸಕ ಬಿ.ಆರ್.ಪಾಟೀಲ್ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, ‘ನನ್ನ ಫೋನ್‌ನಿಂದಲೇ ಸರ್ಫರಾಜ್ ಜೊತೆಗೆ ಮಾತನಾಡಿದ್ದೇನೆ.
ಈ ಹಿಂದೆ ಹಲವು ಬಾರಿ ಹೇಳಿದರೂ ಮನೆಗಳು ಮಂಜೂರು ಆಗಿರಲಿಲ್ಲ, ಅದಕ್ಕೆ ಫೋನ್ ಮಾಡಿ ಮಾತಾಡಿದ್ದೆ. ನನ್ನ ಆಡಿಯೋ ವಿಚಾರ ಯಾಕೆ ಇಷ್ಟು ಸಿರಿಯಸ್ ಆಗುತ್ತಿದೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ನಾನು ಬ್ಲ್ಯಾಕ್ ಮೇಲ್ ಮಾಡಿ ಮಂತ್ರಿ ಆಗುವವನಲ್ಲ ಎಂದರು. ಯಾರೋಬ್ಬ ವ್ಯಕ್ತಿಯ ಹೆಸರನ್ನೂ ತೆಗೆದುಕೊಂಡು ನಾನು ಮಾತನಾಡಿಲ್ಲ. ನಾನು ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡು ಮಾತಾಡಿದ್ದೇನೆ. ನಾನು ನಿಗಮಕ್ಕೆ ನಾಲ್ಕು ಪತ್ರಗಳನ್ನು ನೀಡಿದ್ದೆ. ಆದರೆ, ಯಾವುದೇ ಮನೆಗಳು ಮಂಜೂರು ಆಗಲಿಲ್ಲ. ಇದೇ ವಿಚಾರಕ್ಕಾಗಿ ನಾನು ಸರ್ಫರಾಜ್ ಅವರಿಗೆ ಫೋನ್ ಮಾಡಿ ಮಾತಾಡಿದ್ದೇನೆ, ಗ್ರಾಮಸಭೆಯಲ್ಲಿ ಫಲಾನುಭವಿಗಳ ಆಯ್ಕೆ ಆಗಬೇಕು, ಅದೂ ಆಗಿಲ್ಲ. ಈ ಬಗ್ಗೆ ತನಿಖೆ ಮಾಡುವುದಾದರೆ ಮಾಡಲಿ ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.