ದೇಶಕ್ಕೆ ಕತ್ತಲ ರಾತ್ರಿಯ ರಾಜಕಾರಣವನ್ನು ಪರಿಚಯ ಮಾಡಿಕೊಟ್ಟು, ಕರಗತ ಮಾಡಿರುವುದೇ ಕಾಂಗ್ರೆಸ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ (ಅ.30): ದೇಶಕ್ಕೆ ಕತ್ತಲ ರಾತ್ರಿಯ ರಾಜಕಾರಣವನ್ನು ಪರಿಚಯ ಮಾಡಿಕೊಟ್ಟು, ಕರಗತ ಮಾಡಿರುವುದೇ ಕಾಂಗ್ರೆಸ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಶಿಗ್ಗಾಂವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಚಿವರು ಉಪ ಚುನಾವಣೆಯಲ್ಲಿ ಅಕ್ರಮ ತಡೆಯಲು ಬರುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರ ಈ ಹೇಳಿಕೆ ಹಾಸ್ಯಾಸ್ಪದವಾಗಿದೆ. ಚುನಾವಣಾ ಅಕ್ರಮ ತಡೆಯಲು ಎಲೆಕ್ಷನ್ ಕಮಿಷನ್ ಇದೆ. ವಿಜಿಲೆನ್ಸ್ ಇದೆ. ಅವರು ಅವರ ಕಾರ್ಯವನ್ನು ಮಾಡುತ್ತಿದ್ದಾರೆ.
ಆಡಳಿತ ಮಾಡುವ ಸಚಿವರು ಕೆಲಸ ಬಿಟ್ಟು ಬರುತ್ತಿರುವುದು ಹಾಸ್ಯಾಸ್ಪದ. ಅವರು ಹಣದ ಥೈಲಿ ತೆಗೆದುಕೊಂಡು ಬರುತ್ತಿರುವುದೇ ಜನರಿಗೆ ಹಂಚಲು, ಇಡೀ ದೇಶಕ್ಕೆ ಕತ್ತಲ ರಾತ್ರಿ ರಾಜಕಾರಣ ಪರಿಚಯಿಸಿದವರೇ ಕಾಂಗ್ರೆಸ್‌ನವರು ಎಂದು ಹೇಳಿದರು. ವಕ್ಫ್ ಆಸ್ತಿ ವಿಚಾರದಲ್ಲಿ ವಿರೋಧ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತದೆ. ಸಾಧನೆ ಸರ್ಕಾರದ್ದು ಇರುತ್ತದೆ. ವಿರೋಧ ಪಕ್ಷ ತನ್ನ ಕೆಲಸ ಮಾಡುತ್ತದೆ. ರೈತರಿಗೆ ಯಾರು ನೊಟೀಸ್ ಕೊಟ್ಟರು? 2024ರಲ್ಲಿ ರೈತರ ಪಹಣಿಯಲ್ಲಿ ದಾಖಲೆ ಕುಂತಿದೆ. ಅದನ್ನು ಯಾವ ಸರ್ಕಾರ ಮಾಡಿದೆ ಎನ್ನುವುದು ಗೊತ್ತಾಗಿದೆ.
ತಾವು ಮಾಡಿದ ತಪ್ಪು ಅವ್ಯವಹಾರ, ತಾವು ಮಾಡುವ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಹಾಕುವ ಪ್ರವೃತ್ತಿ ಈ ಸರ್ಕಾರ ಮಾಡುತ್ತಿದೆ. ಎಲ್ಲವೂ ಸ್ಪಷ್ಟವಾಗಿದೆ. ತುಷ್ಟೀಕರಣ ರಾಜಕಾರಣ ಜನರಿಗೆ ಗೊತ್ತಿದೆ ಎಂದು ಹೇಳಿದರು. ವಕ್ಫ್ ವಿಚಾರ ಉಪ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ರಾಜ್ಯದ ಜನರು ಈ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ಇನ್ನು ಶಿಗ್ಗಾಂವಿ ಕ್ಷೇತ್ರಕ್ಕೆ ನೂರು ಕೋಟಿ ಅನುದಾನ ಬಿಡುಗಡೆಯ ದಾಖಲೆ ಇದೆ ಎಂದು ಹೇಳಿರುವ ಸಚಿವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ದೇಶದಲ್ಲಿ ಒಂದೇ ವರ್ಷ 2 ಲಕ್ಷ ಕಿರಾಣಿ ಅಂಗಡಿ ಬಂದ್: ಅಧ್ಯಯನದಲ್ಲಿ ಬೆಳಕಿಗೆ!
ಶಿಗ್ಗಾಂವಿ ಕ್ಷೇತ್ರಕ್ಕೆ ನೂರು ಕೋಟಿ ಕೊಟ್ಟಿರುವ ದಾಖಲೆ ಕೊಡಲಿ, ಯಾವಾ ಯಾವ ಇಲಾಖೆಯಲ್ಲಿ ಎಷ್ಟು ವಿಶೇಷ ಅನುದಾನ ಕೊಟ್ಟಿದ್ದಾರೆ ದಾಖಲೆ ಕೊಡಲಿ. ಜನರು ಕೇಳುತ್ತಿದ್ದಾರೆ. ಯಾಕೆ ಮುಚ್ಚಿಡುತ್ತಾರೆ? ಬಜೆಟ್‌ನಲ್ಲಿ ಘೋಷಣೆ ಮಾಡಿರುವುದನ್ನು ಹೇಳುವುದಲ್ಲ. ನೂರು ಕೋಟಿ ವಿಶೇಷ ಅನುದಾನ ಕೊಟ್ಟಿರುವ ದಾಖಲೆ ನೀಡಲಿ ಎಂದು ಸವಾಲು ಹಾಕಿದರು. ಕ್ಷೇತ್ರದಲ್ಲಿ ಜನರ ಪ್ರತಿಕ್ರಿಯೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ದಿನ ಜನರ ವಿಶ್ವಾಸ, ಪ್ರೀತಿ ಹೆಚ್ಚಾಗುತ್ತಿದೆ. ಮುಂದೆ ಹೋಗುತ್ತ ಜನಸಾಗರವೇ ಸೇರಿ ಕ್ಷೇತ್ರದಲ್ಲಿ ಗೆಲುವಿನ ಯಾತ್ರೆ ಮುಂದುವರಿಯಲಿದೆ ಎಂದು ಹೇಳಿದರು.