
ದೇಶದ 4 ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ್ದರೂ, ಆರೆಸ್ಸೆಸ್ ಭದ್ರಕೋಟೆ ಎನಿಸಿರುವ ಮಹಾರಾಷ್ಟ್ರದ ನಾಗ್ಪುರ ಕ್ಷೇತ್ರದದಲ್ಲಿನ ಅಭಿಜಿತ್ ವಂಜಾರಿ ಅಚ್ಚರಿಯ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಈ ಗೆಲುವು ಅಚ್ಚರಿ ಮೂಡಿಸಿದ್ದಷ್ಟೇ ಅಲ್ಲ, ಬಿಜೆಪಿ-ಆರೆಸ್ಸೆಸ್ ಮುಖ್ಯಮಂತ್ರಿಗೆ ದೊಡ್ಡ ಹಿನ್ನಡೆಯಾದಂತಾಗಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಅಂದಹಾಗೆ ನಾಗ್ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಪಡೆದಿದ್ದೇಗೆ? ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣಗಳೇನು?
ರಾಜ್ಯ ವಿಧಾನ ಪರಿಷತ್ತಿನ ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಎಲ್ಲೆಡೆ ಗೆದ್ದು ಬೀಗಿದ್ದರೂ ನಾಗ್ಪುರ ಕ್ಷೇತ್ರದಲ್ಲಿನ ಸೋಲು ಆಘಾತ ಮೂಡಿಸಿದೆ. ನಾಗಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಿಜೀತ್ ವಂಜಾರಿ ಅವರು ಬಿಜೆಪಿ ಅಭ್ಯರ್ಥಿ ಸುಧಾಕರ್ ಕೊಹ್ಲೆ ಅವರನ್ನು ಸೋಲಿಸುವ ಮೂಲಕ ಒಂದು ಅರ್ಥದಲ್ಲಿ ಕಾಂಗ್ರೆಸ್ನ ಗೌರವ ಉಳಿಸಿದ್ದಾರೆ. ಏಕೆಂದರೆ ದೇಶದ ನಾಲ್ಕು ರಾಜ್ಯಗಳ ಪೈಕಿ ಒಂದರಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿರಲಿಲ್ಲ. ಅದರಲ್ಲೂ ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆ ನಡೆದರೂ ಹೀನಾಯವಾಗಿ ಸೋಲುಂಡಿದ್ದರೂ. ಆದರೆ ನಾಗ್ಪುರದಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್ ಕೊಹ್ಲೆ ಅವರನ್ನು ಸೋಲಿಸಿದ್ದು ಹೊಸ ಭರವಸೆ ಮೂಡಿಸಿದಂತಾಗಿದೆ. ಇನ್ನು ಅಚ್ಚರಿಪಡಿಸುವ ಸಂಗತಿ ಎಂದರೆ ಬಿಜೆಪಿ ಅಭ್ಯರ್ಥಿ ಗೆಲುವು ಬಿಜೆಪಿ ಆರೆಸ್ಸೆಸ್ಗೆ ಪ್ರತಿಷ್ಠೆಯಾಗಿತ್ತು. ಅವರ ಗೆಲುವಿಗಾಗಿ ಎಲ್ಲ ರೀತಿಯ ತಂತ್ರಗಳು, ವ್ಯಾಪಕವಾಗಿ ಪ್ರಚಾರ ಕಾರ್ಯಗಳನ್ನು ನಡೆಸಲಾಗಿತ್ತು. ಆದರೂ ಸೋಲನುಭವಿಸಿದೆ.
ಮಹಾರಾಷ್ಟ್ರದ ಉಪರಾಜಧಾನಿ ನಾಗ್ಪುರ ಆರೆಸ್ಸೆಸ್ ಮತ್ತು ಬಿಜೆಪಿ ಭದ್ರಕೋಟೆ ಎಂಬುದು ಎಲ್ಲರಿಗೂ ತಿಳಿದಿರುವಂತದ್ದೆ. ಹಿಂದಿನಿಂದಲೂ ಇಲ್ಲಿ ಕಾಂಗ್ರೆಸ್ ಗೆಲುವು ಕಷ್ಟಸಾಧ್ಯ. ಆದರೆ ನಾಗ್ಪುರ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್ ಕೊಹ್ಲೆ ಅವರೇ ಗೆಲ್ಲುವ ಕುದುರೆ ಎನಿಸಿದ್ದರು. ಏಕೆಂದರೆ ಆ ಮಟ್ಟಿಗೆ ಬಿಜೆಪಿ ಆರೆಸ್ಸೆಸ್ ಭರ್ಜರಿ ಪ್ರಚಾರ ನಡೆಸಿತ್ತು. ತಂತ್ರಗಳನ್ನ ಹೂಡಿತ್ತು. ನಾಗ್ಪುರದಲ್ಲಿ ಕಾಂಗ್ರೆಸ್ಗೆ ಸ್ಥಾನ ಸಿಗಬಾರದು ಎಂಬಂತೆ ಬೃಹತ್ ಪ್ರಚಾರ ನಡೆಸಿತ್ತು. ಆದರೆ ಇಂಥ ಪ್ರಚಾರದ ನಡುವೆಯೂ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋತಿದ್ದೇ ಅಚ್ಚರಿ!
ಹೌದು. ಇಲ್ಲಿ ಬಿಜೆಪಿ ಅಭ್ಯರ್ಥಿಗೆ ಬಿಜೆಪಿ ನಾಯಕರೇ ಶತ್ರು. ಅಭ್ಯರ್ಥಿ ಸುಧಾಕರ್ ಅವರನ್ನು ಸೋಲಿಸಲು ಬಿಜೆಪಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಕಂದಾಯ ಸಚಿವ ಚಂದ್ರಶೇಖರ್ ಬವನ್ಕುಲೆ ಅವರೊಂದಿಗೆ ಮುಖ್ಯಮಂತ್ರಿಯೂ ಸೇರಿಕೊಂಡು ಒಳಗೊಳಗೆ ದೊಡ್ಡ ಪಡೆಯನ್ನೇ ಸಜ್ಜುಗೊಳಿಸಿತ್ತು ಎಂದು ಹೇಳಲಾಗುತ್ತಿದೆ. ಆದರೆ ಯಾವಾಗ ಬಿಜೆಪಿ ಅಭ್ಯರ್ಥಿ ಸೋತರೋ ಆಗ ಅಭಿಪ್ರಾಯ ಭೇದಗಳಿಂದಾಗಿ ಪಕ್ಷದಲ್ಲಿ ಒಡಕು ಉಂಟಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇದಲ್ಲದೆ ಬಿಜೆಪಿ ಮನಸ್ಥಿತಿ, ಒಳಗಜಗಳ, ಪದವೀಧರರ ಮೂಲಭೂತ ಸಮಸ್ಯೆಗಳನ್ನು ನಿರ್ಲಕ್ಷಿಸಿದ್ದು ಬಿಜೆಪಿ ಸೋಲಿಗೆ ಪ್ರಮುಖ ಕಾರಣಗಳಾಗಿವೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಅತ್ಯಂತ ಜನಪ್ರಿಯ ಶಿಕ್ಷಕ ಹಾಗೂ ವಿರೋಧ ಪಕ್ಷದ ಅಭ್ಯರ್ಥಿಯಾಗಿದ್ದ ನಿತೇಶ್ ಕರಾಲೆ ಅವರು ಬಿಜೆಪಿ ಸೋಲಿಗೆ ನಿರ್ಣಾಯಕ ಪಾತ್ರ ವಹಿಸಿದ ವ್ಯಕ್ತಿ ಎಂದು ('X-factor') ಹೆಸರಿನ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸಲಾಗಿದೆ. ನಿರುದ್ಯೋಗಿ ಪದವೀಧರ ಯುವಕರ ಪರವಾಗಿ ಪ್ರಶ್ನೆಗಳನ್ನು ಎತ್ತುವ ಮೂಲಕ ಕರಾಲೆ ಹೆಚ್ಚಿನ ಸಂಖ್ಯೆಯ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾದರು ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಖ್ಯವಾಗಿ ಅಭಿಜೀತ್ ವಂಜಾರಿ ಅವರನ್ನು 'ಫೈರ್ಬ್ರಾಂಡ್' ಎಂದು ಕರೆದಿದ್ದು. ಮತಗಳ ವಿಭಜನೆಯಿಂದ ಕಾಂಗ್ರೆಸ್ ಅಭ್ಯರ್ಥಿಗೆ ಲಾಭವಾಗಿದ್ದು.
ಆರ್ಎಸ್ಎಸ್ ಮತ್ತು ಬಿಜೆಪಿಯ ಅಭೇದ್ಯ ಕೋಟೆ ಎಂದೇ ಕರೆಯಲಾಗುವ ನಾಗ್ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಬಿಜೆಪಿ ಪಕ್ಷದ ನಾಯಕರ ನಡುವಿನ ಒಳಜಗಳ, ಬಣ ರಾಜಕೀಯ, ಅಕ್ರಮ ಚಟುವಟಿಕೆಗಳೇ ಕಾರಣ ಎನ್ನಲಾಗಿದೆ. ಒಂದು ಕಡೆ ಬಿಜೆಪಿ ಗೆಲುವಿಗೆ ಎಲ್ಲ ರೀತಿಯ ಪ್ರಚಾರ, ತಂತ್ರಗಳನ್ನು ನಡೆಸಿದ್ರೂ ಇನ್ನೊಂದೆ ಪಕ್ಷದೊಳಗಿನ ಭಿನ್ನಮತ ಬಿಜೆಪಿಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿವೆ. ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರ ನಡುವೆ ಅಸಮಾಧಾನ ಉಂಟಾಗಿತ್ತು. ಇದೂ ಕೂಡ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣಗಳಲ್ಲೊಂದು.
ಏಕೆಂದರೆ ಸುಧಾಕರ್ ಕೋಹ್ಲೆ ಅವರಿಗೆ ಉಮೇದುವಾರಿಕೆ ಸಿಕ್ಕ ನಂತರ ತಮ್ಮ ಆಕ್ರಮಣಕಾರಿ ನೀತಿ, ಒಗ್ಗಟ್ಟಿಗೆ ಹೆಸರಾಗಿದ್ದ ಬಿಜೆಪಿಯ ಸಾಂಪ್ರದಾಯಿಕ ಕಾರ್ಯಕರ್ತರು ಪಕ್ಷದ ವಿರುದ್ಧವೇ ತಿರುಗಿಬಿದ್ದರು! ಇಂತಹ ಆಂತರಿಕ ಭಿನ್ನಾಭಿಪ್ರಾಯಗಳು, ಬಣ ರಾಜಕೀಯದಿಂದಾಗಿ ಮತಗಳು ವಿಭಜನೆಯಾದವು, ಕಾಂಗ್ರೆಸ್ ಗೆಲುವಿಗೆ ಇದು ಪ್ರಮುಖ ಕಾರಣವಾಯ್ತು.
ನಾಗ್ಪುರ ಪದವಿಧರ ಚುನಾವಣೆಯಲ್ಲಿ ಮತಪತ್ರದ ಮೇಲೆ ಆದ್ಯತಾ ಸಂಖ್ಯೆಗಳನ್ನು (1, 2, 3) ನಮೂದಿಸುವುದು ಕಡ್ಡಾಯವಾಗಿರುತ್ತದೆ. ಆದರೆ ಇವುಗಳನ್ನು ಅಸಿಂಧು ಎಂದು ಘೋಷಿಸಲಾಯಿತು. ಸೋಲಿನ ನಂತರ, ಬಿಜೆಪಿ ಅಭ್ಯರ್ಥಿ ಸುಧಾಕರ್ ಕೋಹ್ಲೆ ಅವರು, ಅಸಿಂಧುಗೊಳಿಸಿದ ಮತಗಳ ಪೈಕಿ ಸುಮಾರು 9,000 ಮತಗಳು ಬಿಜೆಪಿಗೆ (ನಮಗೆ) ಬಿದ್ದಿದ್ದವು ಇಂತಹ ಮತಗಳನ್ನೇ ಅಸಿಂಧು ಎಂದು ಘೋಷಿಸಲಾಗಿದೆ ಎಂದು ಹೇಳಿದ್ದಾರೆ. ಇದರೊಂದಿಗೆ ಮತಪತ್ರದಲ್ಲಿ ಸರಿಯಾಗಿ ಮತ ಚಲಾಯಿಸುವುದು ಹೇಗೆ? ಎಂಬ ಬಗ್ಗೆ ಮತದಾರರಿಗೆ ತರಬೇತಿ ನೀಡುವಲ್ಲಿ ಬಿಜೆಪಿ ಸಂಪೂರ್ಣವಾಗಿ ವಿಫಲವಾಗಿದ್ದೂ ಒಂದು ಕಾರಣ. ಒಟ್ಟಾರೆ ಬಿಜೆಪಿ ಲೆಕ್ಕಾಚಾರಗಳು ತಲೆಕೆಳಗಾಗಿವೆ.
ಈ ಕ್ಷೇತ್ರದಲ್ಲಿ ಬಿಜೆಪಿ ದೀರ್ಘಕಾಲದಿಂದ ಪ್ರಾಬಲ್ಯ ಹೊಂದಿತ್ತು. ಹೀಗಾಗಿ ಸುಶಿಕ್ಷಿತ ಯುವಕರು ಮತ್ತು ಮಧ್ಯಮ ವರ್ಗದ ಜನರಲ್ಲಿ ಆಡಳಿತದ ವಿರುದ್ಧ ಅಸಮಾಧಾನ ಉಂಟಾಗಿತ್ತು. ಅದರಲ್ಲೂ ಉದ್ಯೋಗಾವಕಾಶಗಳ ಕೊರತೆ ಹಾಗೂ ಸ್ಥಳೀಯ ಸಮಸ್ಯೆಗಳಿಂದ ಪದವೀಧರರೂ ಅಸಮಾಧಾನಗೊಂಡಿದ್ದರು. ಇಂತಹ ವೇಳೆ ಜನರ ಈ ಅಸಮಾಧಾನವನ್ನು ಗುರುತಿಸಿದ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟವು ಒಗ್ಗಟ್ಟಿನಿಂದ ಬಿರುಸಿನ ಚುನಾವಣಾ ಪ್ರಚಾರ ನಡೆಸಿತು. ಕಾಂಗ್ರೆಸ್ ಅಭ್ಯರ್ಥಿಗೆ ಮೈತ್ರಿಕೂಟದ ಕಾರ್ಯಕರ್ತರಿಂದ ತಳಮಟ್ಟದಲ್ಲಿ ಸಂಪೂರ್ಣ ಬೆಂಬಲ ದೊರೆಯಿತು. ಇದರಿಂದ ವಿರೋಧ ಪಕ್ಷಗಳ ಮತಗಳು ವಿಭಜನೆಯಾಗದೆ ಉಳಿದವು. ಪರಿಣಾಮವಾಗಿ, ಬಿಜೆಪಿಯ ಭದ್ರಕೋಟೆಯಲ್ಲೇ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವಂತಾಯ್ತು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.