
ವಿಜಯಪುರ (ನ.25): ರಾಜ್ಯದಲ್ಲಿ ಆಡಳಿತ ಕುಸಿದು ಹೋಗಿದೆ. ಕುರ್ಚಿ ಕಾದಾಟಕ್ಕೆ ಕಾಂಗ್ರೆಸ್‌ನಲ್ಲಿ ಮೂರು ಗುಂಪಾಗಿ ಹೋರಾಟ ಮಾಡುತ್ತಿವೆ ಎಂದು ಸಂಸದ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕಾಗಿ ಪೈಪೋಟಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್‌ನಲ್ಲಿ ಮೂರು ಗುಂಪುಗಳಾಗಿವೆ. ಸಿದ್ದರಾಮಯ್ಯ ಒಂದು ಗುಂಪು, ಡಿಕೆ ಗುಂಪು, ಲಿಂಗಾಯತರ ಗುಂಪು. ದಲಿತರು ಈಗ ಲೆಕ್ಕಕ್ಕಿಲ್ಲ. ಕಾಂಗ್ರೆಸ್ ಹೈಕಮಾಂಡ್ ಸರ್ಕಾರವನ್ನು ಹರಾಜಿಗೆ ಇಟ್ಟಿದೆ. ಹರಾಜಿನಲ್ಲಿ ಬಿಡ್ ಜಾಸ್ತಿ ಯಾರದ್ದು ಆಗತ್ತೋ ಅವರಿಗೆ ಅಧಿಕಾರ ಎಂದು ಲೇವಡಿ ಮಾಡಿದರು.
ಕುರ್ಚಿಗಾಗಿ ಕಾಂಗ್ರೆಸ್‌ನವರು ಪ್ರತಿನಿತ್ಯ ಹೋರಾಟ ಮಾಡುತ್ತಿದ್ದಾರೆ. ಸಿಎಂ ಸ್ಥಾನಕ್ಕಾಗಿ ಕುದುರೆ ವ್ಯಾಪಾರ ಜೋರಾಗಿದೆ. ಶಾಸಕರಿಗೆ ₹50 ಕೋಟಿ ಆಫರ್ ನೀಡಲಾಗಿದ್ದು, ನಿನ್ನೆ ₹70 ಕೋಟಿ ಆಫರ್ ನಡೆದಿದೆ. ಈ ವಾರದಲ್ಲಿ ನೂರು ಕೋಟಿ ತಲುಪಲಿದೆ ಎಂದು ಬಾಂಬ್ ಸಿಡಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸಹಾಯಕರಾಗಿದ್ದಾರೆ. ತಾವೇ ಅಸಹಾಯಕತೆ ತೋಡಿಕೊಂಡಿದ್ದಾರೆ. ಕಾಂಗ್ರೆಸ್ ದಲಿತರನ್ನು ಯಾವ ರೀತಿ ನಡೆಸಿಕೊಳ್ತಿದ್ದಾರೆ ಗೊತ್ತಾಗ್ತಿದೆ. ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ, ರಾಹುಲ್, ಪ್ರಿಯಂಕಾ ಸರ್ವಾಧಿಕಾರಿಯಾಗಿದ್ದಾರೆ. ದಲಿತರು ಕಾಂಗ್ರೆಸ್ ಗುಲಾಮಗಿರಿ ಬಿಡಬೇಕು.
ಅಸ್ಪೃಶ್ಯರನ್ನು ಮನುಷ್ಯರೆಂದು ಕಾಂಗ್ರೆಸ್ ತಿಳಿದುಕೊಂಡಿಲ್ಲ. ವಂಶಪಾರಂಪರ್ಯ ಆಡಳಿತ ದೇಶದ ದಲಿತರನ್ನ ಗೌರವದಿಂದ ಬಾಳುವಂತೆ ಮಾಡಿಲ್ಲ. ಮುನಿಯಪ್ಪ ಆಗಲಿ ಎಂದು ಪರಮೇಶ್ವರ, ಪರಮೇಶ್ವರ ಹೆಸರು ಮುನಿಯಪ್ಪ ಹೇಳುತ್ತಿದ್ದಾರೆ. ಇವರ ಹೆಸರನ್ನೇ ಯಾರು ಹೇಳುತ್ತಿಲ್ಲ. ತಾವು ರೇಸಲ್ಲಿದ್ದೀವಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ದಲಿತರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಪರಮೇಶ್ವರ, ಮುನಿಯಪ್ಪ ದಲಿತರ ಸ್ವಾಭಿಮಾನಕ್ಕೆ ಧಕ್ಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್‌ನವರು ದಲಿತರನ್ನು ಸಿಎಂ ಮಾಡಲ್ಲ. ಬಾಂಡ್ ಮೇಲೆ ಬರೆದು ಕೊಡುತ್ತೇನೆ. ತೂಕ ಜಾಸ್ತಿ ಇದ್ದವರನ್ನು ಸಿಎಂ ಮಾಡುತ್ತಾರೆ.
ತೂಕ ಯಾರದ್ದು ಜಾಸ್ತಿ ಆಗುತ್ತೆ ನೋಡುತ್ತಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಗೊಂದಲ ಬಿಟ್ಟು, ನೇರವಾಗಿ ರೈತರು, ಪ್ರವಾಹದಿಂದ ಹಾನಿಯಾದವರಿಗೆ ಪರಿಹಾರ ನೀಡಲಿ ಎಂದು ಆಗ್ರಹಿಸಿದರು. ಕಾಂಗ್ರೆಸ್‌ನಲ್ಲಿ ಸಿಎಂ ಗದ್ದುಗೆ ಗುದ್ದಾಟದ ನಡುವೆ ಬಿಜೆಪಿ ಸರ್ಕಾರ ರಚನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾವು ಸರ್ಕಾರ ರಚನೆ ಮಾಡಲ್ಲ. ಯಾವುದೇ ಕಾರಣಕ್ಕೆ ಸರ್ಕಾರ ರಚನೆ ಮಾಡಲ್ಲ. ಸರ್ಕಾರ ಮಾಡಲು ನಮ್ಮ ಆಸಕ್ತಿ ಇಲ್ಲ. ಈಗಿರೋದು ಜನ ವಿರೋಧಿ ಸರ್ಕಾರ, ಈ ಸರ್ಕಾರ ಹೋಗಬೇಕು ಎಂದು ಜನರ ಜೊತೆಗೆ ದನಿಗೂಡಿಸುತ್ತೇವೆ. ಡಿಕೆಶಿ ಅಮಿತ್ ಶಾ ಭೇಟಿ ಸುಳ್ಳು, ಭೇಟಿ ಆಗಿಲ್ಲ ಎಂದರು.
ಬಡವರು, ದಲಿತರು ಕಾಂಗ್ರೆಸ್ ಗ್ಯಾರಂಟಿಗೆ ಮೋಸ ಹೋದರು. ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದು ಅಭಿವೃದ್ಧಿಗೆ ಹಣ ಕೊಟ್ಟಿಲ್ಲ. ರಸ್ತೆ ಹದಗೆಟ್ಟು ಹೋಗಿವೆ. ಆಡಳಿತ ನಿಷ್ಕ್ರಿಯವಾಗಿದೆ. ರೈತರು ಕಂಗಾಲಾಗಿದ್ದಾರೆ. ಮೆಕ್ಕೆಜೋಳ ಬೆಳೆದ ರೈತರು ಖರೀದಿ ಕೇಂದ್ರ, ದರ ಸಿಗದೆ ಪರದಾಡುತ್ತಿದ್ದಾರೆ. ಸಿಎಂ ರಾಜಕಾರಣ ಬಿಟ್ಟು ಪ್ರವಾಹ ಸಂತ್ರಸ್ತರ, ರೈತರ ಸಹಾಯಕ್ಕೆ ಬರಲಿ. ಸರ್ಕಾರ ತಕ್ಷಣವೇ ಬೆಳೆ ಪರಿಹಾರ ಕೊಡಲಿ, ಮೆಕ್ಕೆಜೋಳ ಖರೀದಿ ಮಾಡಲಿ ಎಂದು ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.