ಕಾಂಗ್ರೆಸ್ ಭಿನ್ನರಿಗೆ ಸೋನಿಯಾ ಪರೋಕ್ಷ ಸಂದೇಶ ರವಾನೆ

By Suvarna News  |  First Published Aug 28, 2020, 9:48 AM IST

ಕಲಾಪದ ಸಂದರ್ಭದಲ್ಲಿ ಎದುರಾಗುವ ವಿಷಯಗಳನ್ನು ಇತ್ಯರ್ಥಗೊಳಿಸಿಕೊಳ್ಳಲು ರಾಜ್ಯಸಭೆಗೆ ಐವರು ಸದಸ್ಯರ ಸಮಿತಿಯನ್ನು ಸೋನಿಯಾ ರಚನೆ ಮಾಡಿದ್ದಾರೆ. ತಮ್ಮ ನಂಬಿಕಸ್ಥ ಬಂಟರಂತಿರುವ ಅಹಮದ್‌ ಪಟೇಲ್‌, ಕೆ.ಸಿ. ವೇಣುಗೋಪಾಲ್‌ ಅವರಿಗೆ ಸ್ಥಾನ ನೀಡಿದ್ದಾರೆ. ಕರ್ನಾಟಕ ಮೂಲದ ಕಾಂಗ್ರೆಸ್ಸಿಗ ಜೈರಾಂ ರಮೇಶ್‌ ಅವರಿಗೆ ರಾಜ್ಯಸಭೆಯ ಮುಖ್ಯ ಸಚೇತಕ ಪಟ್ಟವನ್ನು ನೀಡಲಾಗಿದೆ. ಇದರೊಂದಿಗೆ ಬಂಡಾಯ ನಾಯಕರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ನವದೆಹಲಿ: ಪಕ್ಷದ ನಾಯಕತ್ವಕ್ಕೆ ಸಡ್ಡು ಹೊಡೆದು ಪತ್ರ ಬರೆದಿದ್ದ 23 ನಾಯಕರನ್ನು ಕಡೆಗಣಿಸುವ ಪ್ರಕ್ರಿಯೆ ಕಾಂಗ್ರೆಸ್ಸಿನಲ್ಲಿ ಆರಂಭವಾದಂತಿದೆ. ರಾಜ್ಯಸಭೆ ಹಾಗೂ ಲೋಕಸಭೆ ಕಲಾಪ ಸಂಬಂಧ ತಲಾ ಐವರು ಸದಸ್ಯರ ಸಮಿತಿಯನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ರಚಿಸಿದ್ದು, ಅದರಲ್ಲಿ ಬಂಡಾಯದ ಪತ್ರಕ್ಕೆ ಸಹಿ ಹಾಕಿದ್ದ ಪ್ರಮುಖ ನಾಯಕರನ್ನು ನಿರ್ಲಕ್ಷಿಸಲಾಗಿದೆ. ಬದಲಿಗೆ ತಮ್ಮ ನಾಯಕತ್ವಕ್ಕೆ ನಿಷ್ಠರಾಗಿರುವ ಮುಖಂಡರಿಗೆ ಸೋನಿಯಾ ಅವರು ಮಣೆ ಹಾಕಿದ್ದಾರೆ.

ಕಲಾಪದ ಸಂದರ್ಭದಲ್ಲಿ ಎದುರಾಗುವ ವಿಷಯಗಳನ್ನು ಇತ್ಯರ್ಥಗೊಳಿಸಿಕೊಳ್ಳಲು ರಾಜ್ಯಸಭೆಗೆ ಐವರು ಸದಸ್ಯರ ಸಮಿತಿಯನ್ನು ಸೋನಿಯಾ ರಚನೆ ಮಾಡಿದ್ದಾರೆ. ತಮ್ಮ ನಂಬಿಕಸ್ಥ ಬಂಟರಂತಿರುವ ಅಹಮದ್‌ ಪಟೇಲ್‌, ಕೆ.ಸಿ. ವೇಣುಗೋಪಾಲ್‌ ಅವರಿಗೆ ಸ್ಥಾನ ನೀಡಿದ್ದಾರೆ. ಕರ್ನಾಟಕ ಮೂಲದ ಕಾಂಗ್ರೆಸ್ಸಿಗ ಜೈರಾಂ ರಮೇಶ್‌ ಅವರಿಗೆ ರಾಜ್ಯಸಭೆಯ ಮುಖ್ಯ ಸಚೇತಕ ಪಟ್ಟವನ್ನು ನೀಡಲಾಗಿದೆ. ರಾಜ್ಯಸಭೆಯ ಪ್ರತಿಪಕ್ಷ ನಾಯಕ, ಉಪನಾಯಕರಾಗಿರುವ ಕಾರಣಕ್ಕೆ ಗುಲಾಂ ನಬಿ ಆಜಾದ್‌ ಹಾಗೂ ಆನಂದ ಶರ್ಮಾ ಅವರನ್ನು ಮುಂದುವರಿಸಲಾಗಿದೆ. ಈ ಇಬ್ಬರೂ ಪತ್ರಕ್ಕೆ ಸಹಿ ಹಾಕಿದ್ದವರಾಗಿದ್ದರೂ ತಕ್ಷಣಕ್ಕೆ ಯಾವುದೇ ಕ್ರಮ ಜರುಗಿಸಿಲ್ಲ. ಆದರೆ ಮತ್ತೊಬ್ಬ ನಾಯಕ ಕಪಿಲ್‌ ಸಿಬಲ್‌ಗೆ ಯಾವುದೇ ಹುದ್ದೆಯನ್ನೂ ನೀಡಿಲ್ಲದಿರುವುದು ಗಮನಾರ್ಹವಾಗಿದೆ. ಮೂಲಗಳ ಪ್ರಕಾರ, ಮುಂಗಾರು ಅಧಿವೇಶನದ ಬಳಿಕ ಆಜಾದ್‌ ಹಾಗೂ ಶರ್ಮಾ ಹುದ್ದೆಗೂ ಕುತ್ತು ಬರಬಹುದು ಎನ್ನಲಾಗಿದೆ.

Tap to resize

Latest Videos

ಕಾಂಗ್ರೆಸ್‌ ವಿರುದ್ಧ ಮತ್ತೆ ಗುಲಾಂ ನಬಿ ಆಜಾದ್ ಗುಡುಗು

ಮತ್ತೊಂದೆಡೆ ಲೋಕಸಭೆಯ ಉಪನಾಯಕ ಸ್ಥಾನಕ್ಕೆ ಅಸ್ಸಾಂನ ಮಾಜಿ ಮುಖ್ಯಮಂತ್ರಿ, ನೆಹರು- ಗಾಂಧಿ ಕುಟುಂಬದ ನಿಷ್ಠರಾಗಿರುವ ತರುಣ್‌ ಗೊಗೊಯ್‌ ಪುತ್ರ ಗೌರವ್‌ ಗೊಗೊಯ್‌ ಅವರನ್ನು ನೇಮಕ ಮಾಡಲಾಗಿದೆ. ಸಚೇತಕರನ್ನಾಗಿ ಪಂಜಾಬ್‌ನ ಸಂಸದ ರವನೀತ್‌ ಬಿಟ್ಟು ಅವರನ್ನು ಸೋನಿಯಾ ನೇಮಕ ಮಾಡಿದ್ದಾರೆ. ಪತ್ರಕ್ಕೆ ಸಹಿ ಹಾಕಿದ್ದ ಹಿರಿಯ ಸಂಸದರಾದ ಮನೀಶ್‌ ತಿವಾರಿ, ಶಶಿ ತರೂರ್‌ ಅವರನ್ನು ಉಪೇಕ್ಷಿಸಲಾಗಿದೆ. ಇಬ್ಬರೂ ಉತ್ತಮ ವಾಗ್ಮಿಗಳಾಗಿದ್ದು, ಹುದ್ದೆಯ ನಿರೀಕ್ಷೆಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
 

click me!