ಘೊಷಣೆಗೂ ಮುನ್ನವೇ ಮಸ್ಕಿ ಉಪಕದನ ಕಾವು: ಕಾಂಗ್ರೆಸ್‌-ಬಿಜೆಪಿಯಿಂದ ಭರ್ಜರಿ ತಯಾರಿ..!

By Kannadaprabha News  |  First Published Nov 9, 2020, 2:36 PM IST

ಬಿಜೆಪಿಯಿಂದ ಪ್ರತಾಪಗೌಡ, ಕಾಂಗ್ರೆಸ್‌ನಿಂದ ಬಸನಗೌಡ ಸ್ಪರ್ಧಿ ಬಹುತೇಕ ಖಚಿತ| ಅಂದು ಬಿಜೆಪಿಗರು ಪ್ರತಾಪಗೌಡರನ್ನು ಸೆಳೆದರು, ಇಂದು ಕಾಂಗ್ರೆಸ್ಸಿಗರು ಬಸನಗೌಡರನ್ನು ಬರಮಾಡಿಕೊಂಡರು| ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ| 


ರಾಮಕೃಷ್ಣ ದಾಸರಿ

ರಾಯಚೂರು(ನ.09): ರಾಜಕೀಯದಲ್ಲಿ ಯಾವುದೇ ಕ್ಷಣದಲ್ಲಿ ಏನಾದರೂ ಆಗಬಹುದು ಎನ್ನುವುದಕ್ಕೆ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಾದ ಅಚ್ಚರಿಯ ಬದಲಾವಣೆಗಳೇ ಸಾಕ್ಷಿಯಾಗಿ ನಿಲ್ಲುತ್ತವೆ. 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ್‌ ಅವರನ್ನು ಬಿಜೆಪಿಗರು ಸೆಳೆದು ರಾಜಿನಾಮೆ ಕೊಡಿಸಿದ್ದರು. ಇದೀಗ ಉಪ ಚುನಾವಣೆ ಘೋಷಣೆ ಪೂರ್ವದಲ್ಲಿಯೇ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಡಿಮೆ ಮತಗಳಿಂದ ಸೋತಿದ್ದ ಆರ್‌.ಬಸನಗೌಡ ತುರವಿಹಾಳ ಅವರನ್ನು ಕಾಂಗ್ರೆಸ್ಸಿಗರು ಬರಮಾಡಿಕೊಂಡಿದ್ದಾರೆ. ಈ ಉಪ ಚುನಾವಣೆಯಲ್ಲಿ ಪಕ್ಷಗಳು ಮಾತ್ರ ಅದಲು ಬದಲಾಗಿದ್ದು ಅದೇ ವ್ಯಕ್ತಿಗಳ ನಡುವೆ ಪೈಪೋಟಿಗೆ ವೇದಿಕೆ ಒದಗಿಸುತ್ತಿದೆ.

Tap to resize

Latest Videos

ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಆರ್‌.ಬಸನಗೌಡ ಅವರು ಕೇವಲ 213 ಮತಗಳ ಅಂತರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರತಾಪಗೌಡ ಪಾಟೀಲ್‌ ಅವರ ಎದುರು ಸೋತಿದ್ದರು. ಇದೀಗ ಆ ಸೇಡನ್ನು ತೀರಿಸಿಕೊಳ್ಳುವುದಕ್ಕಾಗಿ ಬಿಜೆಪಿಗೆ ಗುಡ್‌ ಬೈ ಹೇಳಿ ಕಾಂಗ್ರೆಸ್‌ ಕೈ ಕುಲಿಕಿದ್ದಾರೆ. ಇದು ಮಸ್ಕಿ ಉಪಕದನ ಘೋಷಣೆಗೂ ಮುನ್ನವೇ ಕಾವು ಪಡೆಯುವಂತೆ ಮಾಡಿದೆ. ಕಾಂಗ್ರೆಸ್‌ ಸೇರಿದ್ದೇ ಆದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ಅಭ್ಯರ್ಥಿಯನ್ನು ಗೆಲ್ಲಿಸುವ ಒಮ್ಮತದ ನಿರ್ಧಾರ ತೆಗೆದುಕೊಂಡು ಪಕ್ಷದ ಮುಖಂಡರ ಮುಂದೆ ಸಮಾಲೋಚನೆ ನಡೆಸಿ ಬಸನಗೌಡ ಅವರನ್ನು ಕರೆದುಕೊಂಡಿದ್ದರಿಂದ ಉಪಕದನ ಕುತೂಹಲವು ತಾರಕಕ್ಕೇರುತ್ತಿದೆ.

ಬಿಜೆಪಿಗೆ ಬಿಗ್‌ ಶಾಕ್‌: ಆಪರೇಷನ್‌ ಹಸ್ತಕ್ಕೆ ಡಿ.ಕೆ. ಶಿವಕುಮಾರ್‌ ಸಿದ್ಧತೆ..!

ತಂತ್ರ-ಪ್ರತಿತಂತ್ರ:

ಕಾಂಗ್ರೆಸ್‌ ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ್‌ ಅವರನ್ನ ಬಿಜೆಪಿಗರು ಸೆಳೆದು ರಾಜೀನಾಮೆ ಕೊಡಿಸಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದ್ದರು. ಬಿಜೆಪಿಗರ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಕಾಂಗ್ರೆಸ್‌ ಇಷ್ಟು ದಿನ ಕಾದುಕುಳಿತಿತ್ತು. ಉಪಕದನದಲ್ಲಿ ಬಿಜೆಪಿಯಿಂದ ಪ್ರತಾಪಗೌಡರು ಸ್ಪರ್ದಿಸುತ್ತಿರುವುದರಿಂದ ಆರ್‌.ಬಸನಗೌಡ ಅವರಿಗೆ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನವನ್ನು ನೀಡಿತ್ತು. ಆದರೂ ಸಹ ಬಸನಗೌಡ ಅವರ ಅಭಿಮಾನುಗಳು ಚುನಾವಣೆಯಲ್ಲಿ ಸ್ಪರ್ಧಿಸಲೇ ಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಬಸನಗೌಡರು ಬಿಜೆಪಿ ತೊರೆದು ಕಾಂಗ್ರೆಸ್‌ ಕೈ ಹಿಡಿದಿದ್ದಾರೆ. ಉಪಚುನಾವಣೆ ಘೋಷಣಾ ಪೂರ್ವದಲ್ಲಿಯೇ ರಾಜಕೀಯ ಕಸರತ್ತು ಜೋರಾಗಿ ಸಾಗಿರುವುದು ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್‌-ಬಿಜೆಪಿಯ ನಡುವೆ ತೀವ್ರ ಪೈಪೋಟಿಯ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುವಂತೆ ಮಾಡಿವೆ.

ಯಡಿಯೂರಪ್ಪ ಮಾತಿಗೂ ಡೋಂಟ್ ಕೇರ್: ಕಾಂಗ್ರೆಸ್ ಸೇರಿದ ಬಿಜೆಪಿ ನಾಯಕ

ಇಷ್ಟರಲ್ಲಿಯೇ ಮಸ್ಕಿ ಉಪ ಚುನಾವಣೆ ಘೊಷಣೆಯಾಗುವ ಸಾಧ್ಯತೆಗಳಿವೆ. ಇಷ್ಟುದಿನ ಪ್ರತಿಸ್ಪರ್ಧಿ ಯಾರಾಗುತ್ತಾರೋ ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆಬಿದಿದ್ದು, ಕಾಂಗ್ರೆಸ್‌ ಪ್ರತಿತಂತ್ರ, ಬಸನಗೌಡರ ನಡೆಯಿಂದಾಗಿ ಕದನದ ಕಾವು ಹೆಚ್ಚಾಗಿದೆ. ಕಾಂಗ್ರೆಸ್‌ನಲ್ಲಿ ಸಮರ್ಥ ಅಭ್ಯರ್ಥಿ ಇಲ್ಲವೆಂದು ನೆಮ್ಮದಿಯಾಗಿದ್ದ ಬಿಜೆಪಿಯ ಪ್ರತಾಪಗೌಡ ಪಾಟೀಲ್‌ ಮತ್ತು ಅವರ ಅಭಿಮಾನಿಗಳು ಬಸನಗೌಡರು ಕೈ ಪಕ್ಷಕ್ಕೆ ಹಾರಿರುವುದು ಅವರನ್ನು ಬಡಿದೆಬ್ಬಿಸಿದೆ. ಮುಂದಿನ ದಿನಗಳಲ್ಲಿ ಉಪಕದನದ ಹೈಹೋಲ್ಟೇಜ್‌ಗೆ ಮಸ್ಕಿ ಕ್ಷೇತ್ರದ ಜೊತೆಗೆ ಇಡೀ ಜಿಲ್ಲೆಯೇ ಕಾತರದಿಂದ ಕಾಯುವಂತೆ ಮಾಡಿದೆ.

ಮಸ್ಕಿ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸಾಂಕೇತಿಕವಾಗಿ ಸೇರ್ಪಡೆಗೊಂಡಿದ್ದೇನೆ. ಈ ಕುರಿತು ಹೆಚ್ಚಿಗೆ ಹೇಳುವುದಿಲ್ಲ. ಮಸ್ಕಿಯಲ್ಲಿ ಅಧಿಕೃತವಾಗಿ ಎಲ್ಲವನ್ನು ತಿಳಿಸಲಾಗುವುದು ಎಂದು ಮಸ್ಕಿ ಕಾಂಗ್ರೆಸ್‌ ಮುಖಂಡ ಆರ್‌.ಬಸನಗೌಡ ತುರವಿಹಾಳ ಹೇಳಿದ್ದಾರೆ.

ಆರ್‌.ಬಸನಗೌಡ ತುರವಿಹಾಳ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಸಾಕಷ್ಟುಪ್ರಯತ್ನ ಮಾಡಿದ್ದೇವೆ. ಆದರೆ, ಅದನ್ನು ಅವರು ಉಳಿಸಿಕೊಳ್ಳಲಿಲ್ಲ. ದೇವರು ಅವರಿಗೆ ಒಳ್ಳೆದನ್ನು ಮಾಡಲಿ ಎಂದು ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ತಿಳಿಸಿದ್ದಾರೆ. 
 

click me!