ಸೆ.7ರಿಂದ ಕಾಂಗ್ರೆಸ್‌ ಭಾರತ್‌ ಜೋಡೋ ಬೃಹತ್‌ ಪಾದಯಾತ್ರೆ

By Kannadaprabha NewsFirst Published Aug 10, 2022, 7:32 AM IST
Highlights

ಕನ್ಯಾಕುಮಾರಿಯಿಂದ ಆರಂಭ, ಕಾಶ್ಮೀರದಲ್ಲಿ ಅಂತ್ಯ, 12 ರಾಜ್ಯಗಳು, 3500 ಕಿ.ಮೀ., 150 ದಿನ

ನವದೆಹಲಿ(ಆ.10):  ಕಾಂಗ್ರೆಸ್‌ ಪಕ್ಷದ ಮರುಸಂಘಟನೆ ಗುರಿ ಇರಿಸಿಕೊಂಡು ಆಯೋಜಿಸಲಾಗುತ್ತಿರುವ ‘ಭಾರತ್‌ ಜೋಡೋ’ ಪಾದಯಾತ್ರೆ ಸೆಪ್ಟೆಂಬರ್‌ 7ರಿಂದ ಆರಂಭವಾಗಲಿದೆ ಎಂದು ಘೋಷಿಸಲಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಾಗುವ ಯಾತ್ರೆಯಲ್ಲಿ ಪಕ್ಷದ ನಾಯಕ ರಾಹುಲ್‌ ಗಾಂಧಿ ಪಾಲ್ಗೊಳ್ಳಲಿದ್ದಾರೆ.

ಪಾದಯಾತ್ರೆಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿರುವ ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘80 ವರ್ಷ ಹಿಂದೆ ಮಹಾತ್ಮಾ ಗಾಂಧೀಜಿ ಅವರು ಕ್ವಿಟ್‌ ಇಂಡಿಯಾ ಚಳವಳಿ ಆರಂಭಿಸಿದ್ದರು. ಇದಾದ 5 ವರ್ಷ ನಂತರ ಭಾರತಕ್ಕೆ ಸ್ವಾತಂತ್ರ್ಯ ಬಂತು. ಇಂದು ಕಾಂಗ್ರೆಸ್‌ ಪಕ್ಷವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‌ ಜೋಡೋ ಯಾತ್ರೆ ಘೋಷಣೆ ಮಾಡುತ್ತಿದೆ. ಸೆ.7ರಿಂದ ಯಾತ್ರೆ ಆರಂಭವಾಗಲಿದೆ’ ಎಂದಿದ್ದಾರೆ. ಈ ಮೂಲಕ ಕ್ವಿಟ್‌ ಇಂಡಿಯಾ ಯಶಸ್ಸಿನಂತೆ ಪಾದಯಾತ್ರೆ ಕೂಡ ಯಶಸ್ವಿಯಾಗಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಪರೋಕ್ಷ ಸಂದೇಶವನ್ನು ಅವರು ನೀಡಿದ್ದಾರೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ ‌ಹಿನ್ನೆಲೆ ; ಕಾಂಗ್ರೆಸ್ ‌ನಿಂದ ಪಾದಯಾತ್ರೆ

ಭಾರತ್‌ ಜೋಡೋದಲ್ಲಿ 12 ರಾಜ್ಯಗಳಲ್ಲಿ ಪಾದಯಾತ್ರೆ ಸಾಗಲಿದೆ. 3500 ಕಿ.ಮೀ. ದೂರ ಕ್ರಮಿಸಲಿದೆ. ಯಾತ್ರೆ ಮುಕ್ತಾಯವಾಗಲು 150 ದಿನಗಳು (5 ತಿಂಗಳು) ಹಿಡಿಯಲಿದೆ ಎಂದು ಅವರು ಹೇಳಿದ್ದಾರೆ.

‘ಭಯ, ಧರ್ಮಾಂಧತೆ ಮತ್ತು ಪೂರ್ವಾಗ್ರಹದ ರಾಜಕೀಯಕ್ಕೆ ಪರ್ಯಾಯವಾದ ಶಕ್ತಿ ಇಂದು ಬೇಕಿದೆ. ಜೀವನಾಧಾರ ನಾಶ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಹೆಚ್ಚುತ್ತಿರುವ ಅಸಮಾನತೆಗಳಿಗೆ ಪರ್ಯಾಯವನ್ನು ಒದಗಿಸುವ ದೈತ್ಯ ರಾಷ್ಟ್ರೀಯ ಪ್ರಯತ್ನದ ಭಾಗವಾಗುವ ಅಗತ್ಯವಿದೆ. ಹೀಗೆ ಭಾಗವಾಗಲು ಬಯಸುವ ಎಲ್ಲರೂ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಬೇಕು’ ಎಂದು ಅವರು ಕರೆ ನೀಡಿದ್ದಾರೆ.

ಇನ್ನು ಪ್ರತ್ಯೇಕ ಟ್ವೀಟ್‌ ಮಾಡಿರುವ ರಮೇಶ್‌, ‘ಗಾಂಧೀಜಿ ಕ್ವಿಟ್‌ ಇಂಡಿಯಾ ಚಳವಳಿ ನಡೆಸುವಾಗ ಆರೆಸ್ಸೆಸ್‌ ಏನು ಮಾಡುತ್ತಿತ್ತು? ಶಾಮಪ್ರಸಾದ ಮುಖರ್ಜಿ ಇದರಲ್ಲಿ ಭಾಗಿಯಾಗಲೇ ಇಲ್ಲ. ಗಾಂಧಿ, ನೆಹರು, ಆಜಾದ್‌, ಪಟೇಲ್‌, ಪಂತ್‌ ಮೊದಲಾದವರು ಜೈಲಿಗೆ ಹೋದರು’ ಎಂದು ಸಂಘ ಪರಿವಾರಕ್ಕೆ ಚಾಟಿ ಬೀಸಿದ್ದಾರೆ.
 

click me!