ಅಗ್ನಿಪಥ ಹೋರಾಟದ ಹಿಂದೆ ಕಾಂಗ್ರೆಸ್‌: ಸಚಿವ ಶ್ರೀರಾಮುಲು

By Kannadaprabha NewsFirst Published Jun 20, 2022, 4:15 AM IST
Highlights

*   ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ
*  ಅಗ್ನಿಪಥ ಯೋಜನೆ ಜಾರಿಗೊಳಿಸುವ ಮುನ್ನ ಆಳವಾಗಿ ಅಧ್ಯಯನ ನಡೆಸಿ ಪರಾಮರ್ಶಿಸಿ ಜಾರಿ
*  ಇದೊಂದು ಯುವಕರಿಗೆ ಉದ್ಯೋಗ ಒದಗಿಸುವ ಉತ್ತಮ ಯೋಜನೆಯಾಗಿದೆ 

ಗದಗ(ಜೂ.20): ಬಿಜೆಪಿಯು ಅಗ್ನಿಪಥ ಯೋಜನೆಯಿಂದ ಯುವಕರಲ್ಲಿ ದೇಶ ಪ್ರೇಮ ಮೂಡಿಸುತ್ತಿದೆ. ಆದರೆ ಕಾಂಗ್ರೆಸ್‌ ಇದರ ಹಿಂದೆ ನಿಂತು ಅನಗತ್ಯ ಹೋರಾಟ ಮಾಡಿಸುತ್ತಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಆರೋಪಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗ್ನಿಪಥ ಯೋಜನೆ ವಿರುದ್ಧ ನಡೆಯುತ್ತಿರುವ ಹೋರಾಟಗಳ ಹಿಂದೆ ಕಾಂಗ್ರೆಸ್‌ ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎನ್ನುವುದು ದೇಶಕ್ಕೆ ಗೊತ್ತಿದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಅದೆ ರೀತಿ ಅಗ್ನಿಪಥ ಯೋಜನೆ ಜಾರಿಗೊಳಿಸುವ ಮುನ್ನ ಆಳವಾಗಿ ಅಧ್ಯಯನ ನಡೆಸಿ ಪರಾಮರ್ಶಿಸಿ ಜಾರಿಗೊಳಿಸಿದ್ದಾರೆ. ಇದೊಂದು ಯುವಕರಿಗೆ ಉದ್ಯೋಗ ಒದಗಿಸುವ ಉತ್ತಮ ಯೋಜನೆಯಾಗಿದೆ. ಈ ಯೋಜನೆ ಜಾರಿಯಿಂದ ಕಾಂಗ್ರೆಸ್‌ಗೆ ಯಾಕೆ ಉರಿ ಎಂದು ಕಿಡಿ ಕಾರಿದರು.

ಇಡಿ ವಿಚಾರಣೆಯ ನೋವು ಕಾಂಗ್ರೆಸ್‌ನವರಿಗೂ ಗೊತ್ತಾಗಲಿ: ಶ್ರೀರಾಮುಲು

ಅಗ್ನಿಪಥ ಹೋರಾಟದಲ್ಲಿ ವಿದ್ರೋಹ ಶಕ್ತಿಗಳು: ಜೋಶಿ

ಹುಬ್ಬಳ್ಳಿ: ಅಗ್ನಿಪಥ ಯೋಜನೆ ವಿರೋಧಿಸಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯಲ್ಲಿ ವಿದ್ರೋಹ ಶಕ್ತಿಗಳು ಸೇರಿದ್ದು, ಆಯಾ ರಾಜ್ಯಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಅಗ್ನಿಪಥ ಯೋಜನೆಯ ಕುರಿತು ತಪ್ಪು ತಿಳಿವಳಿಕೆಯಿಂದ ಕೆಲವರು ವಿರೋಧಿಸುತ್ತಿದ್ದು ಅದನ್ನು ನಿವಾರಿಸಲು ತಯಾರಿದ್ದೇವೆ ಎಂದರು. 

ಹಲವರು ಟೂಲ್‌ ಕಿಟ್‌ ಮೂಲಕ ಇದರ ವಿರುದ್ಧ ವ್ಯವಸ್ಥಿತವಾಗಿ ಷಡ್ಯಂತ್ರ ಮಾಡುತ್ತಿದ್ದಾರೆ. ವಿಶೇಷವಾಗಿ ಕೆಲವು ರಾಜ್ಯಗಳಲ್ಲಿ ನಡೆದ ಅತಿರೇಕದ ಪ್ರತಿಭಟನೆ ಹಿಂದಿನ ಹುನ್ನಾರ ಬೆಳಕಿಗೆ ಬರುತ್ತಿದೆ. ಸೈನ್ಯಕ್ಕೆ ಸೇರಬಯಸುವವರು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳು ಮಾಡುವುದಿಲ್ಲ. ಬಡಜನರ ಆಹಾರ ಪದಾರ್ಥಗಳನ್ನು ಹಾಳು ಮಾಡಲ್ಲ. ಶಾಲಾ ಮಕ್ಕಳ ಬಸ್‌ಗೆ ಕಲ್ಲು ಹೊಡೆಯುವುದಿಲ್ಲ. ಪೊಲೀಸ್‌, ರೈಲ್ವೆ ಸ್ಟೇಷನ್‌ಗೆ ಬೆಂಕಿ ಇಡುವುದಿಲ್ಲ. ಸಂಬಂಧ ಇಲ್ಲದವರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದರು.
 

click me!