
ನವದೆಹಲಿ (ಏ.05): ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ನಡುವೆ ಒಳಒಪ್ಪಂದ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಾಂಬ್ ಹಾಕಿದ್ದಾರೆ. ಈ ಹಿಂದೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುತ್ತಾರೆಂದು ಹೇಳಲಾಗಿತ್ತು, ಇದೀಗ ಅವರು ಶಿಕಾರಿಪುರದಿಂದ ಸ್ಪರ್ಧಿಸುತ್ತಾರೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಇದರ ಅರ್ಥ ಏನು ಎಂದು ದೇವೇಗೌಡ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಜತೆಗಿನ ಮೈತ್ರಿ ಸಾಧ್ಯತೆ ಕುರಿತು ಇಂಡಿಯಾ ಟುಡೆ ಸೇರಿ ಕೆಲ ವಾಹಿನಿಗಳಿಗೆ ನೀಡಿದ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ನಡುವೆ ಹೊಂದಾಣಿಕೆಗೆ ವರಿಷ್ಠರ ಒಪ್ಪಿಗೆ ಇದೆಯೇ, ಇಲ್ವೇ ಎಂಬುದು ಆ ಪಕ್ಷದವರಿಗೇ ಬಿಟ್ಟಿದ್ದು ಎಂದರು.
ಮೈತ್ರಿಗೆ ಒಲವಿಲ್ಲ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಜತೆಗೆ ಯಾವುದೇ ಮೈತ್ರಿ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಹೊಂದಾಣಿಕೆ ಇರುವಾಗ ಅದು ಸಾಧ್ಯವೇ ಎಂದು ಪ್ರಶ್ನಿಸಿದರು. ಜತೆಗೆ, ಪುತ್ರ ಕುಮಾರಸ್ವಾಮಿ ಅವರಿಗೂ ಮೈತ್ರಿ ಕುರಿತು ಒಲವಿಲ್ಲ. ಅವರು ಸ್ವತಂತ್ರ ಸರ್ಕಾರ ರಚನೆ ಮಾಡಲು ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದರು. ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಮತ್ತು ಜೆಡಿಎಸ್ ಅಧಿಕಾರಕ್ಕೆ ಬರಲು ಹೋರಾಟ ನಡೆಸುತ್ತಿವೆ. ಯಾರು ಗೆಲ್ಲುತ್ತಾರೆ, ಸರ್ಕಾರ ರಚಿಸುತ್ತಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ, ಜೆಡಿಎಸ್ ಬಹುಮತದೊಂದಿಗೆ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದು ಇದೇ ವೇಳೆ ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು.
ಪಂಜಾಬ್ ರೀತಿ ರಾಜ್ಯದಲ್ಲೂ ಟೋಲ್ ರದ್ದು ಮಾಡಿ: ಬ್ರಿಜೇಶ್ ಕಾಳಪ್ಪ
ಇದೇ ವೇಳೆ ಪ್ರಾದೇಶಿಕ ಪಕ್ಷಗಳ ನಿರ್ಲಕ್ಷ್ಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಕರ್ನಾಟಕದಲ್ಲಿ ಒಂದು ಪ್ರಾದೇಶಿಕ ಪಕ್ಷಕ್ಕೆ ಯಾಕೆ ಇಷ್ಟೊಂದು ವಿರೋಧ? ಪ್ರಾದೇಶಿಕ ಪಕ್ಷವನ್ನು ಕೊಲ್ಲಲು ಇಷ್ಟೊಂದು ಪ್ರಯತ್ನ ಯಾಕೆ ನಡೆಯುತ್ತಿದೆ ಎಂದು ಪ್ರಶ್ನಿಸಿದರು. ಇದೇ ವೇಳೆ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷವನ್ನು ಬೆಳೆಸುವ ಪ್ರವೃತ್ತಿ ಇದೆ ಎಂದ ಅವರು, ಕರುಣಾನಿಧಿ ಕುಟುಂಬದಲ್ಲಿ ಏಳು ಮಂದಿ ಇದ್ದಾರೆ. ರಾಜ್ಯಸಭೆ, ಲೋಕಸಭೆ ಪ್ರತಿಯೊಂದರಲ್ಲೂ ಅವರ ಕುಟುಂಬ ಸದಸ್ಯರಿದ್ದಾರೆ ಎಂದು ತಿಳಿಸಿದರು.
ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆ ನಾವೆಲ್ಲ ಕೂತು ನಿರ್ಧರಿಸುತ್ತೇವೆ: ಹಾಸನ ಕ್ಷೇತ್ರದ ಟಿಕೆಟ್ ಕುರಿತು ನಾವೆಲ್ಲರೂ ಕೂತು ನಿರ್ಧರಿಸುತ್ತೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿ, ರಾಷ್ಟ್ರೀಯ ಪಕ್ಷವಾದ ಬಿಜೆಪಿ ಈವರೆಗೆ ಒಂದೇ ಒಂದು ಪಟ್ಟಿಬಿಡುಗಡೆ ಮಾಡಿಲ್ಲ. ನಾವು ಈಗಾಗಲೇ ಮೊದಲ ಪಟ್ಟಿಬಿಡುಗಡೆ ಮಾಡಿದ್ದೇವೆ. ಕಾಂಗ್ರೆಸ್ 2ನೇ ಪಟ್ಟಿಪ್ರಕಟಿಸಲು ತಿಣುಕಾಡುತ್ತಿದೆ. ಹಾಸನ ನನ್ನ ತವರಾಗಿರುವ ಕಾರಣ ಆ ಕ್ಷೇತ್ರದ ಕುರಿತು ಹೆಚ್ಚಿನ ಕಾಳಜಿ ತೋರಿಸುತ್ತಿದ್ದೇನೆ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ವಿರುದ್ಧ 1,300 ಕೋಟಿ ಅಕ್ರಮ ಆರೋಪ
ಆತ್ಮಕಥೆ ನೀಡಲು ದೆಹಲಿಗೆ ಬಂದಿದ್ದೆ: ದೇವೇಗೌಡರು ತಮ್ಮ ಆತ್ಮಕಥೆ ‘ಫರೋಸ್ ಇನ್ ಎ ಫೀಲ್ಡ್’ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಸ್ಪೀಕರ್ ಓಂ ಬಿರ್ಲಾ ಅವರಿಗೆ ನೀಡಿದರು. ಪ್ರಧಾನಿ ಬಿಟ್ಟು ಶೇ.90ರಷ್ಟು ಸಂಸದರಿಗೆ ಹಾಗೂ ಕೇಂದ್ರ ಸಚಿವರಿಗೆ ಈ ಕೃತಿಯನ್ನು ನೀಡಿದ್ದೇನೆ. ಪ್ರಧಾನಿ ಮೋದಿ ಅವರಿಗೆ ಕೊಡಲು ಬಾಕಿ ಇದೆ. ಚುನಾವಣೆ ಮುಗಿದ ನಂತರ ಅವರಿಗೆ ಕೊಡುತ್ತೇನೆ. ನಾನೇ ಸಹಿ ಮಾಡಿ ಕೃತಿಯನ್ನು ನೀಡಿದ್ದೇನೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.