ತಿಂಗಳಲ್ಲಿ ಕ್ಷೇತ್ರ ಪ್ರವಾಸ ಮುಗಿಸಿ: ಶಾಸಕರಿಗೆ ಅಮಿತ್‌ ಶಾ ಸೂಚನೆ

Published : Feb 12, 2023, 03:00 AM IST
ತಿಂಗಳಲ್ಲಿ ಕ್ಷೇತ್ರ ಪ್ರವಾಸ ಮುಗಿಸಿ: ಶಾಸಕರಿಗೆ ಅಮಿತ್‌ ಶಾ ಸೂಚನೆ

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮಂಗಳೂರಿನಲ್ಲಿ ಶನಿವಾರ ಬಿಜೆಪಿ ಪ್ರಮುಖರ ಸಭೆ ನಡೆಸಿ, ಮಂಗಳೂರು ಹಾಗೂ ಶಿವಮೊಗ್ಗ ವಿಭಾಗದ ಎಲ್ಲ ಅಸೆಂಬ್ಲಿ ಕ್ಷೇತ್ರ ಗೆಲುವಿಗೆ ಶಕ್ತಿಮೀರಿ ಶ್ರಮಿಸುವಂತೆ ಸೂಚನೆ ನೀಡಿದ್ದಾರೆ. 

ಮಂಗಳೂರು (ಫೆ.12): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮಂಗಳೂರಿನಲ್ಲಿ ಶನಿವಾರ ಬಿಜೆಪಿ ಪ್ರಮುಖರ ಸಭೆ ನಡೆಸಿ, ಮಂಗಳೂರು ಹಾಗೂ ಶಿವಮೊಗ್ಗ ವಿಭಾಗದ ಎಲ್ಲ ಅಸೆಂಬ್ಲಿ ಕ್ಷೇತ್ರ ಗೆಲುವಿಗೆ ಶಕ್ತಿಮೀರಿ ಶ್ರಮಿಸುವಂತೆ ಸೂಚನೆ ನೀಡಿದ್ದಾರೆ. ಮಂಗಳೂರಿನ ಕೆಂಜಾರಿನಲ್ಲಿ ಶನಿವಾರ ಸುಮಾರು ಒಂದು ಗಂಟೆ ಕಾಲ ಎರಡೂ ವಿಭಾಗಗಳ ಚುನಾಯಿತ ಪ್ರತಿನಿಧಿಗಳು ಮತ್ತು ಪ್ರಮುಖರ ಸಭೆ ನಡೆಸಿದ ಅಮಿತ್‌ ಶಾ, ಈಗಿಂದಲೇ ಚುನಾವಣೆ ಗೆಲುವಿಗೆ ಅಹರ್ನಿಶಿ ಶ್ರಮಿಸುವಂತೆ ಕರೆ ನೀಡಿದರು. ಒಂದು ತಿಂಗಳಲ್ಲಿ ಹಾಲಿ ಬಿಜೆಪಿ ಶಾಸಕರು ಎಲ್ಲ ಕ್ಷೇತ್ರಗಳ ಪೂರ್ಣ ಪ್ರವಾಸ ಮುಗಿಸುವಂತೆ ಸೂಚನೆ ನೀಡಿದರು.

ಎರಡು ವಿಭಾಗಗಳ, ಆರು ಜಿಲ್ಲೆಗಳ, 33 ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳು ಬಿಜೆಪಿ ಕೈತಪ್ಪಿವೆ. ಈ ಕ್ಷೇತ್ರಗಳನ್ನೂ ಮರಳಿ ಗೆಲ್ಲುವ ಬಗ್ಗೆ ಈಗಲೇ ಕಾರ್ಯಪ್ರವೃತ್ತರಾಗಬೇಕು. ಈ ಬಾರಿಯ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಜಯಿಸಲೇ ಬೇಕು. ಈ ಎಲ್ಲ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಅದಕ್ಕಾಗಿ ಪೇಜ್‌ ಪ್ರಮುಖರು, ಬೂತ್‌ ಪ್ರಮುಖರನ್ನು ಭೇಟಿ ಮಾಡಿ ಸಂಪರ್ಕಕ್ಕೆ ಹೊರಡಬೇಕು. ಹಾಲಿ ಮತದಾರರು ಮಾತ್ರವಲ್ಲ, ಹೊಸದಾಗಿ ಸೇರ್ಪಡೆಯಾದವರನ್ನೂ ಭೇಟಿ ಮಾಡಬೇಕು ಎಂದರು.

ಕಾಂತಾರ ಚಿತ್ರದ ಮೂಲಕ ಇಲ್ಲಿನ ಸಂಸ್ಕೃತಿ ಮನದಟ್ಟಾಯಿತು, ಪುತ್ತೂರಿನಲ್ಲಿ ಅಮಿತ್ ಶಾ ಭಾಷಣದ ಹೈಲೈಟ್ಸ್!

ಅಸಮಾಧಾನ ಶಮನಗೊಳಿಸಲು ಸೂಚನೆ: ಕರಾವಳಿ ಜಿಲ್ಲೆಯ ಕೆಲವೊಂದು ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಬಗ್ಗೆ ಇರುವ ಅಸಮಾಧಾನದ ಬಗ್ಗೆ ತಿಳಿದುಕೊಂಡ ಅಮಿತ್‌ ಶಾ, ಅದನ್ನು ಕೂಡಲೇ ಶಮನಗೊಳಿಸುವ ನಿಟ್ಟಿನಲ್ಲಿ ಶಾಸಕರೇ ಕ್ಷೇತ್ರಕ್ಕೆ ಇಳಿಯುವಂತೆ ಸೂಚಿಸಿದರು. ಬೈಗುಳವನ್ನು ಸಂತೋಷವಾಗಿ ಸ್ವೀಕರಿಸಿ, ಅಸಮಾಧಾನವನ್ನು ನೀಗಿಸಲು ಮುಂದಾಗಬೇಕು. ಅದಕ್ಕಾಗಿ ಪಕ್ಷದ ಹಿರಿಯರ ನೆರವನ್ನು ಪಡೆಯಬೇಕು. ಅಸಮಾಧಾನ ಇರುವಲ್ಲಿಗೆ ತೆರಳದೆ ಇರಬಾರದು. ಎಲ್ಲ ಗ್ರಾಮಗಳಿಗೆ ತೆರಳಿ ಕಾರ್ಯಕರ್ತರನ್ನು ಮಾತನಾಡಿಸಬೇಕು. ಪಕ್ಷ ಸಂಘಟನೆಗೆ ಅವರನ್ನು ಹುರಿದುಂಬಿಸಬೇಕು. ಒಂದು ತಿಂಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಶಾಸಕರ ಪ್ರವಾಸ ಮುಕ್ತಾಯಗೊಳಿಸಬೇಕು ಎಂದು ತಿಳಿಸಿದರು.

ಎಲ್ಲ ಮೋರ್ಚಾಗಳ ಸಕ್ರಿಯಕ್ಕೆ ಸೂಚನೆ: ಎಸ್‌ಸಿ, ಯುವ, ಮಹಿಳಾ ಸೇರಿದಂತೆ ಎಲ್ಲ ಮೋರ್ಚಾಗಳು ಸಕ್ರಿಯವಾಗಿ ಚುನಾವಣಾ ಪ್ರಚಾರ ಕಣಕ್ಕೆ ಧುಮುಕಬೇಕು. ಗ್ರಾಮ ಮಟ್ಟದಲ್ಲಿ ಇರುವ ಕೀ ಮತದಾರರನ್ನು ಸಂಪರ್ಕ ಮಾಡಬೇಕು. ವಿವಿಧ ಜಾತಿ, ಸಂಘಟನೆ, ಸಮುದಾಯದ ಮತದಾರರನ್ನು ತಲುಪಬೇಕು. ಫಲಾನುಭವಿಗಳ ಪಟ್ಟಿಮಾಡಿಕೊಂಡು ಅವರನ್ನೂ ಸಂಪರ್ಕಿಸಬೇಕು. ಯಾವುದೇ ಕಾರಣಕ್ಕೂ ಮನೆ, ಮನೆ ಸಂಪರ್ಕದಲ್ಲಿ ಹಿಂದುಳಿಯಬಾರದು ಎಂದು ಕಿವಿ ಮಾತು ಹೇಳಿದರು.

ಜಾಲತಾಣ ಚುರುಕುಗೊಳಿಸಿ: ಜಾಲತಾಣಗಳು ಇಂದಿನ ದಿನಗಳಲ್ಲಿ ಜನರನ್ನು ಬೇಗನೆ ತಲುಪುತ್ತವೆ. ಆದ್ದರಿಂದ ಜಾಲತಾಣಗಳಲ್ಲಿ ಸರ್ಕಾರದ ಸಾಧನೆಯನ್ನು ಹೆಚ್ಚಿನ ಮಟ್ಟದಲ್ಲಿ ಪ್ರಚುರಪಡಿಸಬೇಕು. ಇದಕ್ಕಾಗಿ ಜಾಲತಾಣಗಳ ಬಳಕೆಯನ್ನು ಸಾಧ್ಯವಾದಷ್ಟು ಬಳಕೆ ಮಾಡಬೇಕು. ಇದನ್ನು ಪಕ್ಷ ಸವಾಲಾಗಿ ಸ್ವೀಕರಿಸಬೇಕು ಎಂದರು.

ಉ.ಕ ಬಳಿಕ ಕರಾವಳಿಗಿಂದು ಅಮಿತ್‌ ಶಾ: ಬಿಜೆಪಿ ಪ್ರಮುಖರ ಜೊತೆ ಚುನಾವಣಾ ಚರ್ಚೆ

ಈಶ್ವರಪ್ಪರನ್ನು ವೇದಿಕೆಗೆ ಕರೆದು ಕೂರಿಸಿದ ಅಮಿತ್‌: ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಈಶ್ವರಪ್ಪ ಅವರನ್ನು ಶಾ ಅವರು ಸಭೆಯ ವೇದಿಕೆ ಮೇಲೆ ಕರೆದು ಕುಳ್ಳಿರಿಸುವ ಮೂಲಕ ಅಸಮಾಧಾನ ಶಮನಗೊಳಿಸುವ ಸಂದೇಶ ರವಾನಿಸಿದರು. ಸಭೆಗೆ ಆಹ್ವಾನಿತರಾಗಿದ್ದ ಸಂಸದ ಅನಂತ ಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ ಹೆಬ್ಬಾರ್‌, ಸಿ.ಟಿ.ರವಿ ಗೈರಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ