ಲೋಕಸಭೆ ಚುನಾವಣೆ 2024: ಕಮಲ ಪಾಳಯದಲ್ಲಿ ಆಕಾಂಕ್ಷಿಗಳ ಪೈಪೋಟಿ..!

By Kannadaprabha News  |  First Published Nov 21, 2023, 10:45 PM IST

ಗ್ರಾಮ ಪಂಚಾಯಿತಿ ಚುನಾವಣೆ ಹೊರತು ಪಡಿಸಿದರೆ ಸ್ಥಳೀಯ ಸಂಸ್ಥೆ, ವಿಧಾನಸಭೆ ಸೇರಿದಂತೆ ಯಾವುದೇ ಚುನಾವಣೆಗಳಲ್ಲಿಯೂ ಬಿಜೆಪಿ ಅಧಿಕಾರದಲ್ಲಿದ್ದರೂ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಇದೀಗ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕ್ರಿಯಾಶೀಲ ನಾಯಕನಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ನೀಡುವ ಚಿಂತನೆ ಪಕ್ಷದಲ್ಲಿ ನಡೆದಿದೆ ಎನ್ನಲಾಗಿದೆ.


ಎಂ.ಅಫ್ರೋಜ್ ಖಾನ್

ರಾಮನಗರ(ನ.21):  ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಹಾಗೂ ವಿಪಕ್ಷ ನಾಯಕರಾಗಿ ಆರ್.ಅಶೋಕ್ ಆಯ್ಕೆಯಾಗುತ್ತಿದ್ದಂತೆ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಪಕ್ಷದ ಸಾರಥ್ಯ ವಹಿಸಲು ಆಕಾಂಕ್ಷಿಗಳು ತೆರೆಮರೆಯಲ್ಲಿ ಪೈಪೋಟಿ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಪ್ರತಿನಿಧಿಸುತ್ತಿರುವ ಕಾರಣ ಈ ಜಿಲ್ಲೆಯು ಜೆಡಿಎಸ್ ಮತ್ತು ಕಾಂಗ್ರೆಸ್ ನ ಭದ್ರಕೋಟೆಯಾಗಿದೆ. ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ರಂತಹ ನಾಯಕರಿದ್ದರೂ ಬಿಜೆಪಿ ಶಕ್ತಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ವೃದ್ಧಿಯಾಗಿಲ್ಲ.

Tap to resize

Latest Videos

ಗ್ರಾಮ ಪಂಚಾಯಿತಿ ಚುನಾವಣೆ ಹೊರತು ಪಡಿಸಿದರೆ ಸ್ಥಳೀಯ ಸಂಸ್ಥೆ, ವಿಧಾನಸಭೆ ಸೇರಿದಂತೆ ಯಾವುದೇ ಚುನಾವಣೆಗಳಲ್ಲಿಯೂ ಬಿಜೆಪಿ ಅಧಿಕಾರದಲ್ಲಿದ್ದರೂ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಇದೀಗ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕ್ರಿಯಾಶೀಲ ನಾಯಕನಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ನೀಡುವ ಚಿಂತನೆ ಪಕ್ಷದಲ್ಲಿ ನಡೆದಿದೆ ಎನ್ನಲಾಗಿದೆ.

ಐಸಿಸಿ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಭಾರತಕ್ಕೆ ಸೋಲು: ಕೆ.ಎಲ್‌. ರಾಹುಲ್‌ ತವರಲ್ಲಿ ಬೇಸರ

ಈ ಹಿಂದೆ ಜಿಲ್ಲೆಯಲ್ಲಿ ಬಿಜೆಪಿ ಚುನಾವಣೆಗಳಲ್ಲಿ ಠೇವಣಿ ಉಳಿಸಿಕೊಳ್ಳುವುದು ಕಷ್ಟ ಎಂಬಂತಹ ಪರಿಸ್ಥಿತಿ ಇತ್ತು. ಆಗೆಲ್ಲ ಪಕ್ಷದ ಜಿಲ್ಲಾಧ್ಯಕ್ಷ ಹುದ್ದೆ ಕೇಳುವವರೇ ಇರಲಿಲ್ಲ. ಆದರೀಗ ರಾಜ್ಯ ಮತ್ತು ರಾಷ್ಟ್ರದಲ್ಲಿ ಪ್ರಬಲವಾಗಿರುವುದು ಕಮಲ ಪಾಳಯದ ನಾಯಕರಲ್ಲಿ ಹುರುಪು ಮೂಡಿಸಿದೆ.

ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಬಿಜೆಪಿಯದು ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಪಕ್ಷದಲ್ಲಿ ಕಾರ್ಯಕರ್ತರಿಗಿಂತ ನಾಯಕರೇ ಹೆಚ್ಚಾಗಿದ್ದು, ಒಬ್ಬೊಬ್ಬ ನಾಯಕರದು ಒಂದೊಂದು ಬಣಗಳು ಸೃಷ್ಟಿಯಾಗಿವೆ. ಇದರ ಪರಿಣಾಮವನ್ನು ಪ್ರತಿ ಚುನಾವಣೆಗಳಲ್ಲಿ ಬಿಜೆಪಿ ಅನುಭವಿಸುತ್ತಲೇ ಬಂದಿದೆ. ಇಷ್ಟಾದರೂ ಜಿಲ್ಲಾಧ್ಯಕ್ಷ ಹುದ್ದೆಗೆ ಬೇಡಿಕೆ ಹೆಚ್ಚಾಗಿದ್ದು, ಪ್ರಮುಖ ನಾಯಕರು ಲಾಬಿ ನಡೆಸಲು ಆರಂಭಿಸಿದ್ದಾರೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು:

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿತರ ಸಂಖ್ಯೆ ಹನುಮಂತನ ಬಾಲದಂತಿದೆ. ಕನಕಪುರ ಮತ್ತು ಹಾರೋಹಳ್ಳಿ ಹೊರತು ಪಡಿಸಿ ಉಳಿದ ಮೂರು ತಾಲೂಕುಗಳ ಪ್ರಮುಖ ಮುಖಂಡರು ಜಿಲ್ಲಾಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ರಾಮನಗರದಿಂದ ಗ್ರೇಟರ್ ಬೆಂಗಳೂರು - ಬಿಡದಿ ಸ್ಮಾರ್ಟ್‌ ಸಿಟಿ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ವರದರಾಜು, ರಾಮನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಆರ್.ನಾಗರಾಜು, ರಾಮನಗರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಗೌತಮ್‌ಗೌಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರದೇವರು, ಯುವ ಮುಖಂಡ ನರೇಂದ್ರ ಪ್ರಬಲ ಆಕಾಂಕ್ಷಿಗಳು.

ಮಾಗಡಿ ತಾಲೂಕಿನಿಂದ ವಿಧಾನಸಭಾ ಕ್ಷೇತ್ರದಿಂದ ಕಳೆದಬಾರಿ ಸ್ಪರ್ಧೆಮಾಡಿ ಪರಾಜಿತರಾಗಿರುವ ಪ್ರಸಾದ್‌ಗೌಡ, ಮಾಗಡಿ ರಾಜೇಶ್ ಹಾಗೂ ಚನ್ನಪಟ್ಟಣ ತಾಲೂಕಿನಿಂದ ಚನ್ನಪಟ್ಟಣ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ರಾಂಪುರ ಮಲುವೇಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಲೇಕೇರಿ ರವೀಶ್, ತಾಲೂಕು ಮಾಜಿ ಅಧ್ಯಕ್ಷ ಎಂ.ಎನ್. ಆನಂದಸ್ವಾಮಿ, ಚನ್ನಪಟ್ಟಣ ನಗರ ಬಿಜೆಪಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಅನೇಕರು ಜಿಲ್ಲಾಧ್ಯಕ್ಷ ಹುದ್ದೆ ಅಲಂಕರಿಸುವ ಬಯಕೆ ಹೊಂದಿದ್ದಾರೆ.

ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಮಾಜಿ ಸಚಿವ ಯೋಗೇಶ್ವರ್ ಮಾತು ಅಂತಿಮವಾಗುತ್ತಾ ಅಥವಾ ವಿಪಕ್ಷ ನಾಯಕ ಆರ್.ಅಶೋಕ್, ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಅಶ್ವತ್ಥ್‌ನಾರಾಯಣ್, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅಶ್ವತ್ಥ್‌ನಾರಾಯಣಗೌಡ, ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಅವರ ಅಭಿಪ್ರಾಯವೂ ಮುಖ್ಯವಾಗುತ್ತದಾ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಒಟ್ಟಾರೆ ಬಿಜೆಪಿ ಜಿಲ್ಲಾಧ್ಯಕ್ಷ ಗಾದಿ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಯೋಗೇಶ್ವರ್‌-ವಿಜಯೇಂದ್ರರ ಅಪ್ಪುಗೆ ಮುಖಂಡರಿಗೆ ಇರುಸುಮುರುಸು

ರಾಮನಗರ ಜಿಲ್ಲೆಯಲ್ಲಿ ಮಾಜಿ ಸಚಿವ ಯೋಗೇಶ್ವರ್ ಬಿಜೆಪಿ ಪಾಲಿಗೆ ಪ್ರಮುಖ ನಾಯಕ. ಅವರ ಮಾತಿಗೆ ಬಿಜೆಪಿಯಲ್ಲಿ ಮನ್ನಣೆ ಇತ್ತು. ಆದರೆ, ಯಡಿಯೂರಪ್ಪ ಜೊತೆಗೆ ಇವರ ಸಂಬಂಧ ಹಳಸಿದ ಬಳಿಕ ಕೆಲಕಾಲ ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಪಕ್ಷದ ರಾಜ್ಯಘಟಕದಲ್ಲಿ ಪ್ರಾಮುಖ್ಯತೆ ಪಡೆದಿದ್ದರು. ಇದೀಗ ಯಡಿಯೂರಪ್ಪ ಪುತ್ರ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಯೋಗೇಶ್ವರ್ ಅವರ ಮಾತಿಗೆ ಮನ್ನಣೆ ಸಿಗುವುದಿಲ್ಲ ಎಂದು ಭಾವಿಸಿ ಕೆಲ ಆಕಾಂಕ್ಷಿತರು ನೇರವಾಗಿ ವಿಜಯೇಂದ್ರರವರ ಸಂಪರ್ಕ ಸಾಧಿಸಿ ಜಿಲ್ಲಾಧ್ಯಕ್ಷ ಹುದ್ದೆಗೆ ಲಾಬಿ ಮಾಡಲು ಪ್ರಯತ್ನಿಸಿದ್ದರು.

ಸೋಮಶೇಖರ್‌ಗೆ ನಮ್ಮಲ್ಲಿ ವಿಶೇಷ ಸ್ಥಾನವಿದೆ: ಸಚಿವ ಪರಮೇಶ್ವರ್

ಆದರೆ, ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಖುದ್ದು ಯೋಗೇಶ್ವರ್ ಪಾಲ್ಗೊಂಡು ವಿಜಯೇಂದ್ರ ಅವರನ್ನು ಅಭಿನಂದಿಸುವ ಜೊತೆಗೆ ಅಪ್ಪಿಕೊಂಡು ಆತ್ಮೀಯತೆ ತೋರುವ ಪ್ರಯತ್ನ ಮಾಡಿದ್ದಾರೆ. ಇದು ಯೋಗೇಶ್ವರ್‌ಗೆ ಟಾಂಗ್ ನೀಡಲು ಹೋಗಿದ್ದ ಮುಖಂಡರಿಗೆ ತುಸು ಇರುಸುಮುರುಸು ತಂದೊಡ್ಡಿದೆ.

ಚನ್ನಪಟ್ಟಣದ ಆಕಾಂಕ್ಷಿಗಳು ಅಲರ್ಟ್‌

ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ವಿಭಜನೆಯಾಗಿ ರಾಮನಗರ ಜಿಲ್ಲೆಯಾಗಿ ರಚನೆಯಾದ ಬಳಿಕ (2007)ಬಿಜೆಪಿ ಅಧ್ಯಕ್ಷ ಸ್ಥಾನ ಅಲಂಕರಿಸಿದವರಲ್ಲಿ ಚನ್ನಪಟ್ಟಣ ತಾಲೂಕಿನವರ ಸಂಖ್ಯೆಯೇ ಹೆಚ್ಚಾಗಿದೆ. ಈ ಬಾರಿಯೂ ಚನ್ನಪಟ್ಟಣದ ಬಿಜೆಪಿ ಮುಖಂಡರೇ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾಧ್ಯಕ್ಷ ಹುದ್ದೆಗೆ ಲಾಭಿ ನಡೆಸುತ್ತಿದ್ದಾರೆ. ಈ ಮಧ್ಯೆ ಜಿಲ್ಲೆಯ ಇತರ ಭಾಗದವರೂ ಜಿಲ್ಲಾಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು, ಪಕ್ಷದ ವರಿಷ್ಠರ ಬಳಿ ಇನ್ನಿಲ್ಲದ ಲಾಭಿ ನಡೆಸುತ್ತಿದ್ದಾರೆ.
ಜಿಲ್ಲೆ ರಚನೆಯಾದ ಆರಂಭದಲ್ಲಿ ಕನಕಪುರ ನಾಗರಾಜು ಜಿಲ್ಲಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಬಳಿಕ ಸಿ.ಪಿ.ಯೋಗೇಶ್ವರ್, ತರುವಾಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಮಾದು, ಕನಕಪುರ ನಾಗರಾಜು, ಹುಲುವಾಡಿ ದೇವರಾಜು, ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ರುದ್ರೇಶ್, ಆನಂತರ ಮತ್ತೆ ಹುಲುವಾಡಿ ದೇವರಾಜು ಜಿಲ್ಲಾಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಮುಂದುವರೆದಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಲಿದ್ದಾರೆ ಎಂಬ ಮಾಹಿತಿಯ ಬೆನ್ನು ಹತ್ತಿ ಆಕಾಂಕ್ಷಿಗಳು ಅಲರ್ಟ್ ಆಗಿದ್ದಾರೆ.

click me!