ಎಲ್ಲರಿಗೂ ನಾನು ಟಾರ್ಗೆಟ್ ಆಗಿದ್ದೇನೆ, ನನ್ನನ್ನು ರಾಜಕೀಯವಾಗಿ ಮುಗಿಸುವ ಯತ್ನ ನಡೆದಿದೆ ಎಂದು ಮಾಜಿ ಸಚಿವ ಆರ್. ಶಂಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಣಿಬೆನ್ನೂರು (ಮಾ.16) : ಎಲ್ಲರಿಗೂ ನಾನು ಟಾರ್ಗೆಟ್ ಆಗಿದ್ದೇನೆ, ನನ್ನನ್ನು ರಾಜಕೀಯವಾಗಿ ಮುಗಿಸುವ ಯತ್ನ ನಡೆದಿದೆ ಎಂದು ಮಾಜಿ ಸಚಿವ ಆರ್. ಶಂಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಣಿಜ್ಯ ತೆರಿಗೆ ದಾಳಿ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
undefined
ಕಾನೂನಿನಡಿ ತಪಾಸಣೆ ಮಾಡಲು ನನ್ನ ಅಭ್ಯಂತರವಿಲ್ಲ. ರಾಣಿಬೆನ್ನೂರಿಗೆ ಕಾಲಿಟ್ಟಾಗಿನಿಂದಲೂ ದಾನ, ಧರ್ಮ ಮಾಡುತ್ತಾ ಬಂದಿದ್ದೇನೆ. ಯಾವ ದೇವರ ಮೇಲಾದರೂ ಪ್ರಮಾಣ ಮಾಡಲು ಸಿದ್ಧ. ನಾನು ಕೊಡೋ ಸೀರೆ, ಬ್ಯಾಗ್‌ಗಳ ಮೇಲೆ ಯಾವುದಾದರೂ ಪಕ್ಷದ ಚಿಹ್ನೆ ಇದೆಯಾ? ಕಣ್ಣು ಕಿವಿ ಇರದೇ ಇರುವವರು ಬಂದರೆ ಏನು ಮಾಡಲಿಕ್ಕಾಗುತ್ತದೆ? ದಾಖಲೆ ನೀಡಲು ಒಂದು ವಾರ ಸಮಯ ಕೇಳಿದ್ದೇನೆ. ಅಷ್ಟರೊಳಗೆ ಇಲ್ಲಿಯ ವಸ್ತುಗಳನ್ನು ಎತ್ತಿಕೊಂಡು ಹೋಗಲು ಬಂದರೆ ಸುಮ್ಮನಿರುವುದಿಲ್ಲ. ಈ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ ಎಂದು ಎಚ್ಚರಿಸಿದರು.
ಹಾವೇರಿ: ಮಾಜಿ ಸಚಿವ ಶಂಕರ್‌ಗೆ ವಾಣಿಜ್ಯ ತೆರಿಗೆ ಶಾಕ್
ಸ್ಥಳೀಯ ಶಾಸಕರು ಸೇರಿ ನನ್ನ ಎಲ್ಲ ರಾಜಕೀಯ ವಿರೋಧಿಗಳ ಪಿತೂರಿ ಇದೆ. ಕೆಲವರಿಗೆ ರಾಜಕೀಯ ಮೃಷ್ಟಾನ್ನ ಆಗಿದೆ, ಆದರೆ ನನಗೆ ರಾಜಕೀಯ ಸೇವೆ. ಇಲ್ಲಿ ಹಗಲು-ರಾತ್ರಿ ದರೋಡೆ ನಡೆಯುತ್ತಿದೆ. ಆದರೆ ಆರ್. ಶಂಕರ ಟಾರ್ಗೆಟ್ ಆಗಿದ್ದಾರೆ. ಶಂಕರ ಬೆಳೆಯಬಾರದು ಎನ್ನುವ ಉದ್ದೇಶ ಇರಬಹುದು ಎಂದು ಹೇಳಿದರು.
ಬಿಜೆಪಿ, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಆರ್. ಶಂಕರ ಅವರು, ಪಕ್ಷೇತರವಾಗಿ ಗೆದ್ದು ಬಂದು ಶಾಸಕನಾದವನು ನಾನು. ಈಗ ಪಕ್ಷ ಮಾನ್ಯತೆ ಕೊಟ್ಟರೆ ಪಕ್ಷದ ಜತೆ ಇರುತ್ತೇನೆ. ನಾಮಪತ್ರ ಸಲ್ಲಿಕೆ ವರೆಗೂ ಕಾಯುತ್ತೇನೆ. ಸಹಕಾರ ಕೊಡದಿದ್ದರೆ ನನ್ನ ದಾರಿ ನನಗೆ. ಬಿಜೆಪಿ ಜತೆ ಹೋಗಿದ್ದಕ್ಕೆ ಅನರ್ಹ ಪಟ್ಟಕಟ್ಟಿದರು. ನನಗೆ ನೋವಾಗಿದ್ದರೂ ಸಹಕಾರ ಕೊಟ್ಟಿದ್ದೇನೆ. ಸರಿಯಾದ ಸ್ಥಾನಮಾನ ಕೊಡಲಿಲ್ಲ ಅಂದರೆ ನನ್ನ ದಾರಿ ನನಗೆ. ಒಂದು ತಿಂಗಳು ಕಾಯುತ್ತೇನೆ. ಕಾಂಗ್ರೆಸ್, ಬಿಜೆಪಿ ಯಾರೇ ಟಿಕೆಟ್ ನೀಡಿದರೂ ಸ್ಪರ್ಧೆ ಮಾಡುತ್ತೇನೆ. ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ ಎಂದು ಹೇಳಿದರು.
ಕಣ್ಣೀರು ಹಾಕಿದ ಶಂಕರ
ಶಂಕರ ದುಡ್ಡು ತೆಗೆದುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದರು. ದುಡ್ಡು ಕೊಟ್ಟವರೂ ಬರಲಿ, ಆರೋಪ ಮಾಡಿದವರೂ ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ ಮಾಡಲಿ. ನನ್ನ ಮೇಲಿನ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಸಿದ್ದರಾಮಯ್ಯ ಅವರಿಗೆ ಹೇಳೋದು ಗೊತ್ತು, ಮಾಡೋದು ಗೊತ್ತಿಲ್ವಾ? ಸಿದ್ದರಾಮಯ್ಯ ತಂದೆ ಸಮಾನ ಅಂತ ಈಗಲೂ ತಿಳಿದುಕೊಂಡಿದ್ದೇನೆ. ಅವರನ್ನು ವಿರೋಧ ಪಕ್ಷದ ನಾಯಕ ಮಾಡಿದ್ದೇ ನಾವು. ನಮ್ಮಿಂದ ವಿರೋಧ ಪಕ್ಷದ ನಾಯಕ ಆದರು. ನಮ್ಮಿಂದ ಅವರಿಗೆ ಅನುಕೂಲ ಆಗಿದೆ. ಅನನುಕೂಲ ಆಗಿದ್ದರೆ ನನಗೆ ಆಗಿದೆ. ಪಕ್ಷೇತರ ಶಾಸಕ ಇದ್ದವನು ನಾನು. ಬಿ ಫಾರಂ ತೆಗೆದುಕೊಂಡು ಶಾಸಕ ಆದವನಲ್ಲ ನಾನು. ಒಳ್ಳೆತನಕ್ಕೆ ಬೆಲೆ ಇದೆ ಎಂದುಕೊಂಡಿದ್ದೇನೆ. ಸೋತಾಗಲೂ ಜನರ ಜತೆಗೆ ಇದ್ದೆ. ಸತ್ಯಕ್ಕೆ ಜಯ ಸಿಗಲಿದೆ, ಜನರು ನನ್ನನ್ನು ಮತ್ತೆ ಶಾಸಕನನ್ನಾಗಿ ಮಾಡುತ್ತಾರೆ. ಈ ಕ್ಷೇತ್ರದ ತಾಯಂದಿರು ರಕ್ಷಣೆ ಮಾಡುತ್ತಾರೆ ಎಂದು ಕಣ್ಣೀರು ಹಾಕಿದರು.
ಬಲಿ ಕೊಟ್ಟರು:
ನನ್ನನ್ನು ಮಂತ್ರಿ ಮಾಡಲು ಅವಕಾಶ ಇತ್ತು. ಈ ಸರ್ಕಾರ ತಂದವರು ನಾವು. ಆದರೆ ನನಗೆ ಕಿಮ್ಮತ್ತು ಇಲ್ಲದೆ ಹಾಗೆ ಮಾಡಿದರು. ಎಷ್ಟೋ ದಿನಗಳ ಕಾಲ ನಾನು ಕಣ್ಣೀರು ಹಾಕಿದ್ದೇನೆ. ನಮಗೆ ಮೊದಲೆ ಅತಿಥಿ ಸತ್ಕಾರ ಮಾಡಬೇಕಿತ್ತು. ನಮಗೆ ಮೊದಲು ಊಟ ಹಾಕಬೇಕಿತ್ತು. ಅವರೆ ಮೊದಲು ಊಟ ಮಾಡಿದ್ರು, ಮಿಕ್ಕಿದ್ದಾದರೂ ಕೊಡಬೇಕಿತ್ತು. ಕೆಂಪೇಗೌಡರು ಕೆರೆ ಕಟ್ಟಿಸಿ ಸೊಸೆ ಬಲಿ ಕೊಟ್ಟಹಾಗೆ ನನ್ನ ಬಲಿ ಕೊಟ್ಟರು. ಇಬ್ಬರೂ ನನಗೆ ಮೋಸ ಮಾಡಿದ್ದಾರೆ. ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಅಪಪ್ರಚಾರ ಮಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಆರ್. ಅಶೋಕ ಮನೆಗೆ ಬಂದು ಕರೆದುಕೊಂಡು ಹೋಗಿದ್ದಾರೆ. ಅವರಿಗೆ ಯಾಕೆ ಬುದ್ಧಿ ಇಲ್ಲವೇ? ಹಂತ ಹಂತದಲ್ಲಿ ಚುಚ್ಚಿ ಚುಚ್ಚಿ ಕೊಲೆ ಮಾಡುವ ಹಾಗೆ ನನಗೆ ಅನ್ಯಾಯ ಮಾಡಿದ್ದಾರೆ. ಕಾಲ ಮಿಂಚಿಲ್ಲ. ಬಿಜೆಪಿಯವರು ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿ ಎಂದು ಕಿಡಿ ಕಾರಿದರು.
ಉತ್ತರ ಕೊಡ್ತೇನೆ:
ವಾಣಿಜ್ಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದಾರೆ. ಅಲ್ಲಿ ಸ್ಕೂಲ್ ಬ್ಯಾಗ್ ಇತ್ತು. ಶಾಲಾ ಮಕ್ಕಳಿಗೆ ಬ್ಯಾಗ್ ಕೊಡುವ ಕನಸಿತ್ತು. ಆರ್‌ಟಿಜಿಎಸ್ ಮಾಡಿ ಬ್ಯಾಗ್ ಖರೀದಿ ಮಾಡಿದ್ದೇನೆ. ಏಕಾಏಕಿ ರೇಡ್ ಮಾಡಿದಾರೆ. ಇದು ಹೊಸತಲ್ಲ. ರಾಜಕಾರಣದಲ್ಲಿ 16 ಕೇಸ್ ಹಾಕಿಸಿಕೊಂಡು ಖುಲಾಸೆ ಆಗಿದ್ದೇನೆ. ಈಗ ಮತ್ತೆ ತಿರುಗಿ ಹಳೆಯ ಚಾಳಿ ಶುರುವಾಗಿದೆ. ಉತ್ತರ ಕೊಡ್ತೇನೆ, ಜನ ಉತ್ತರ ಕೊಡ್ತಾರೆ. ನನ್ನ ನಡೆ ವಿಧಾನಸೌಧದ ಕಡೆ. ಈ ಜನರ ಮನೆ ಮಗನಾಗಿ ಇದ್ದೇನೆ. ನಾನು ಮೊದಲಿನಿಂದ ಕಾಂಗ್ರೆಸ್‌ನವನು. ಕಾಂಗ್ರೆಸ್ ನನ್ನ ಬ್ಲಡ್. ಖರೀದಿ ಮಾಡೋಕೆ ನಾನು ಕುರಿನೂ ಅಲ್ಲ, ದೇವರು ಶಕ್ತಿ ಕೊಟ್ಟಿದ್ದಾನೆ. ರಾಣಿಬೆನ್ನೂರಿನ ಅಭಿವೃದ್ಧಿ ಆಗಲಿ ಎಂದು ಖರೀದಿ ಆಗಿದ್ದೇನೆಯೇ ಹೊರತೂ ದುಡ್ಡಿಗಲ್ಲ. ನನಗೆ ಕೊಟ್ಟು ಅಭ್ಯಾಸ ಇದೆ. ಪಡೆದು ಅಭ್ಯಾಸ ಇಲ್ಲ. ನಾನು ದುಡ್ಡು ಪಡೆದದ್ದು ಸಾಬೀತಾದರೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ವಾಣಿಜ್ಯ ತೆರಿಗೆ ವಂಚಕರಿಗೆ ಲೋಕಾ ಭರ್ಜರಿ ಶಾಕ್: ಕರ್ನಾಟಕದ 37 ಕಡೆ ಏಕಕಾಲಕ್ಕೆ ದಾಳಿ
ಅರುಣಕುಮಾರ ವಿರುದ್ಧ ಕಿಡಿ
ನಾನಿರದೇ ಇದ್ದರೆ ಈ ಉತ್ತರ ಕುಮಾರ ಶಾಸಕ ಆಗಿ ಬಿಡ್ತಾ ಇದ್ನಾ? ಈಗ ಬ್ಯಾನರ್‌ನಲ್ಲಿ ಒಂದೇ ಒಂದು ಕಡೆ ನನ್ನ ಭಾವಚಿತ್ರ ಬಳಸುತ್ತಿಲ್ಲ. ಸರ್ಕಾರ ತಂದವರನ್ನೇ ಅಡಿಪಾಯ ಮಾಡಿಕೊಂಡರು. ಎಲ್ಲರ ಪರವಾಗಿ ಮಾತಾಡಿದ್ದೆ ಮುಳುವಾಗಿದೆ. ಸೋತ ಎಂಟಿಬಿ ನಾಗರಾಜ ಅವರನ್ನು ಮಂತ್ರಿ ಮಾಡಿಲ್ಲವೇ? ಕುರುಬರು ಬೇಡ ಎಂದು ಆಗಲೇ ಹೇಳಬೇಕಿತ್ತು. ಕಾಲು ಕಸ ಮಾಡಿಕೊಂಡು ನನ್ನನ್ನು ತುಳಿದರು. ಸಿಎಂ ಆದವನು ಮಾಜಿ ಆಗಲೇ ಬೇಕು. ಮೇಲಿದ್ದವನು ಕೆಳಗೆ ಬರಬೇಕು, ಕೆಳಗಿದ್ದವನು ಮೇಲೆ ಬರಬೇಕು. ರಾಜಕೀಯ ಕಾಲ ಚಕ್ರ ಇದು ಎಂದರು.