ಉತ್ತರ ಕನ್ನಡ: ಹಳಿಯಾಳ ಅಖಾಡದಲ್ಲಿ ಯಾರಾಗಲಿದ್ದಾರೆ ಪೈಲ್ವಾನ್‌?

Published : Mar 16, 2023, 10:44 AM IST
ಉತ್ತರ ಕನ್ನಡ: ಹಳಿಯಾಳ ಅಖಾಡದಲ್ಲಿ ಯಾರಾಗಲಿದ್ದಾರೆ ಪೈಲ್ವಾನ್‌?

ಸಾರಾಂಶ

9 ಬಾರಿ ಸ್ಪರ್ಧಿಸಿ 8 ಸಲ ಗೆದ್ದು ದಾಖಲೆ ನಿರ್ಮಿಸಿದ ದೇಶಪಾಂಡೆಗೆ ಅವರ ಒಂದು ಕಾಲದ ಶಿಷ್ಯರೇ ಇಂದು ಅವರಿಗೆ ಎದುರಾಳಿಗಳಾಗಿ ಸೆಡ್ಡು ಹೊಡೆಯುತ್ತಿದ್ದಾರೆ.

ವಸಂತಕುಮಾರ್‌ ಕತಗಾಲ

ಕಾರವಾರ(ಮಾ.16): ರಾಜ್ಯ ರಾಜಕೀಯದ ಹಿರಿಯ ರಾಜಕಾರಣಿ, ಆರ್‌.ವಿ.ದೇಶಪಾಂಡೆ ಪ್ರತಿನಿಧಿಸುವ ಹಳಿಯಾಳ ವಿಧಾನಸಭಾ ಕ್ಷೇತ್ರದ ಚುನಾವಣೆ ವ್ಯಾಪಕ ಕುತೂಹಲ ಮೂಡಿಸಿದೆ. 9 ಬಾರಿ ಸ್ಪರ್ಧಿಸಿ 8 ಸಲ ಗೆದ್ದು ದಾಖಲೆ ನಿರ್ಮಿಸಿದ ದೇಶಪಾಂಡೆಗೆ ಅವರ ಒಂದು ಕಾಲದ ಶಿಷ್ಯರೇ ಇಂದು ಅವರಿಗೆ ಎದುರಾಳಿಗಳಾಗಿ ಸೆಡ್ಡು ಹೊಡೆಯುತ್ತಿದ್ದಾರೆ.

ಉತ್ತಮ ಶಾಸಕ ಪ್ರಶಸ್ತಿ ಪಡೆದ, ಕೈಗಾರಿಕೆ, ಕೃಷಿ, ಉನ್ನತ ಶಿಕ್ಷಣ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಹೀಗೆ ವಿವಿಧ ಇಲಾಖೆಗಳ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಅಪಾರ ಅನುಭವ ಹೊಂದಿರುವ ರಾಜಕಾರಣಿ ಆರ್‌.ವಿ. ದೇಶಪಾಂಡೆ. ಈ ಬಾರಿ ಅವರು ವಿಚಿತ್ರ ಸನ್ನಿವೇಶ ಎದುರಿಸಬೇಕಾಗಿ ಬಂದಿದೆ. ತಮ್ಮೊಂದಿಗೇ ಇದ್ದು ಈಗ ತಿರುಗಿ ಬಿದ್ದಿರುವ ಇಬ್ಬರು ಮಾಜಿ ಅನುಯಾಯಿಗಳ ಜೊತೆ ಕಾದಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ, ಹಳಿಯಾಳದ ಚುನಾವಣಾ ಕಣ ರೋಚಕವಾಗಿ ಮಾರ್ಪಟ್ಟಿದೆ.

5ನೇ ಬಾರಿಗೆ ಚಿಕ್ಕಮಗಳೂರಲ್ಲಿ ಸಿ.ಟಿ.ರವಿ ಅದೃಷ್ಟ ಪರೀಕ್ಷೆ..!

ದೇಶಪಾಂಡೆಯವರಿಗೆ ಕಾಂಗ್ರೆಸ್‌ ಟಿಕೆಟ್‌ ಬಹುತೇಕ ಖಚಿತವಾಗಿದ್ದು, ಈ ಬಾರಿ ಬಿಜೆಪಿಯ ಸುನೀಲ ಹೆಗಡೆ ಹಾಗೂ ಜೆಡಿಎಸ್‌ನ ಶ್ರೀಕಾಂತ ಘೋಟ್ನೇಕರ ವಿರುದ್ಧ ಸೆಣಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಇವರಿಬ್ಬರೂ ಇವರ ಶಿಷ್ಯರು. ಮರಾಠಾ ಸಮುದಾಯಕ್ಕೆ ಸೇರಿದ ಘೋಟ್ನೇಕರ, ಹಳಿಯಾಳ ಕ್ಷೇತ್ರದಲ್ಲಿ ಬಹುಸಂಖ್ಯಾತರಾದ ಮರಾಠಾ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ.

ಹಳಿಯಾಳದಲ್ಲಿ ಕುಸ್ತಿ ಜನಪ್ರಿಯ ಕ್ರೀಡೆ. ದೇಶಪಾಂಡೆ ರಾಜಕೀಯದ ಕುಸ್ತಿಯಲ್ಲಿ ಎಲ್ಲ ಪಟ್ಟುಗಳನ್ನೂ ಬಲ್ಲವರು. ಆದರೆ, ಅವರ ಎದುರಾಳಿಗಳಿಬ್ಬರೂ ದೇಶಪಾಂಡೆ ಅವರ ಗರಡಿಯಲ್ಲೆ ಪಳಗಿ ಅವರ ಎಲ್ಲ ಪಟ್ಟುಗಳನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ. ಇದರಿಂದ ಈ ಬಾರಿ ಹಳಿಯಾಳದ ಪೈಲ್ವಾನ್‌ ಯಾರು ಎನ್ನುವ ವಿಚಾರ ಜನತೆಯನ್ನು ತುದಿಗಾಲ ಮೇಲೆ ನಿಲ್ಲಿಸಿದೆ. ಘೋಟ್ನೇಕರ ಪ್ರಯೋಗಿಸುತ್ತಿರುವ ಮರಾಠಾ ಅಸ್ತ್ರ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ, ಕಾಂಗ್ರೆಸ್‌ ಬುಟ್ಟಿಯಲ್ಲಿನ ಎಷ್ಟುಮತಗಳನ್ನು ಅವರು ಪಡೆಯಲಿದ್ದಾರೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿಯ ಸುನೀಲ ಹೆಗಡೆ ತೊಡಗಿದ್ದಾರೆ. ಈ ಮಧ್ಯೆ, ಹಳಿಯಾಳದಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆಯಂತೆ ಕಂಡರೂ ನಿಜವಾದ ಕಾದಾಟ ಇರುವುದು ಆರ್‌.ವಿ.ದೇಶಪಾಂಡೆ ಹಾಗೂ ಸುನೀಲ ಹೆಗಡೆ ಅವರ ನಡುವೆ ಎನ್ನುವುದು ಕೆಲವು ಚುನಾವಣಾ ಪರಿಣಿತರ ಲೆಕ್ಕಾಚಾರ.

ಕ್ಷೇತ್ರದ ಹಿನ್ನೆಲೆ:

ಇಲ್ಲಿ 9 ಬಾರಿ ಸ್ಪರ್ಧಿಸಿ 8 ಸಲ ಗೆದ್ದು ದಾಖಲೆ ನಿರ್ಮಿಸಿದ ಖ್ಯಾತಿ ರಘುನಾಥ ವಿಶ್ವನಾಥರಾವ್‌ ದೇಶಪಾಂಡೆಯದು. ಜನತಾ ಪಕ್ಷದಿಂದ ಎರಡು ಬಾರಿ, ಜನತಾದಳದಿಂದ ಎರಡು ಬಾರಿ, ಉಳಿದಂತೆ ಕಾಂಗ್ರೆಸ್‌ನಿಂದ 4 ಬಾರಿ ಅವರು ಗೆಲುವು ಸಾಧಿಸಿದ್ದಾರೆ. 2008ರಲ್ಲಿ ಮಾತ್ರ ಜೆಡಿಎಸ್‌ನ ಸುನೀಲ ಹೆಗಡೆಯವರು ದೇಶಪಾಂಡೆಯವರನ್ನು 6 ಸಾವಿರ ಮತಗಳ ಅಂತರದಲ್ಲಿ ಸೋಲಿಸಿದ್ದರು. ಆದರೆ, 2013ರಲ್ಲಿ ದೇಶಪಾಂಡೆ ವಿರುದ್ಧ ಸುನೀಲ ಹೆಗಡೆ ಸೋಲು ಕಾಣಬೇಕಾಯಿತು. ಈಗ ಸುನೀಲ ಹೆಗಡೆಯವರು ಬಿಜೆಪಿ ಸೇರಿದ್ದು, ಬಿಜೆಪಿಯಿಂದ ಕಣಕ್ಕಿಳಿಯಲು ಯತ್ನಿಸುತ್ತಿದ್ದಾರೆ.

ಯಾದಗಿರಿ: ಬಿಜೆಪಿಯ ಮಾಲಕರೆಡ್ಡಿ ಪುತ್ರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಗುತ್ತಾ?

ಹಳಿಯಾಳದಲ್ಲಿ ಮರಾಠರು ಬಹುಸಂಖ್ಯಾತರಾಗಿದ್ದರೂ, ಮರಾಠಾ ಸಮುದಾಯದ ಘಾಡಿ ಅವರು ಎರಡು ಬಾರಿ ಶಾಸಕರಾಗಿದ್ದು ಬಿಟ್ಟರೆ ಮತ್ತೆ ಮರಾಠಾ ಸಮುದಾಯದವರು ಶಾಸಕರಾಗಿಲ್ಲ. ಅತ್ಯಲ್ಪ ಮತಗಳನ್ನು ಹೊಂದಿರುವ ಸಮಾಜದವರೇ ಆಯ್ಕೆಯಾಗುತ್ತಿದ್ದಾರೆ.

ಜಾತಿ ಲೆಕ್ಕಾಚಾರ:

ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನ ವ್ಯಾಪ್ತಿ ಹೊಂದಿರುವ ಹಳಿಯಾಳ ಕ್ಷೇತ್ರದಲ್ಲಿ 1.77 ಲಕ್ಷ ಮತದಾರರಿದ್ದಾರೆ. ಕ್ಷೇತ್ರದಲ್ಲಿ ಸುಮಾರು 55 ಸಾವಿರದಷ್ಟು ಇರುವ ಮರಾಠರು ಬಹುಸಂಖ್ಯಾತರು. ಉಳಿದಂತೆ, 30 ಸಾವಿರದಷ್ಟು ಮುಸ್ಲಿಮರು, ಪರಿಶಿಷ್ಟ ಜಾತಿಯವರು 22 ಸಾವಿರ, 4 ಸಾವಿರದಷ್ಟು ಕ್ರಿಶ್ಚಿಯನ್ನರು, 23 ಸಾವಿರದಷ್ಟುಲಿಂಗಾಯತರು, 20 ಸಾವಿರದಷ್ಟು ಕುಣಬಿ, 7 ಸಾವಿರದಷ್ಟು ಗೌಳಿ, 8 ಸಾವಿರ ಬ್ರಾಹ್ಮಣರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ