
ಬೆಂಗಳೂರು (ಜು.24): ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ರಾಜ್ಯದ ಬಗ್ಗೆ ತೋರಿರುವ ಉದ್ದೇಶಪೂರ್ವಕ ನಿರ್ಲಕ್ಷ್ಯ ಮತ್ತು ತಾರತಮ್ಯ ನೀತಿಯನ್ನು ಖಂಡಿಸಿ, ಜು.27ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಕರೆಯಲಾಗಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, 'ಕರ್ನಾಟಕದಿಂದಲೇ ಆಯ್ಕೆಯಾಗಿ ಹೋಗಿರುವ ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಸೇರಿದಂತೆ ರಾಜ್ಯದ ಸಂಸದರೆಲ್ಲರ ಸಭೆ ಕರೆದು ರಾಜ್ಯದ ಅತ್ಯವಶ್ಯಕ ಬೇಡಿಕೆಗಳನ್ನು ಮುಂದಿಟ್ಟು ಮನವರಿಕೆ ಮಾಡಿಕೊಡಲಾಗಿತ್ತು. ಹೀಗಿ ದ್ದರೂ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿ ಸಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಉದ್ದೇಶಪೂರ್ವಕ ನಿರ್ಲಕ್ಷ್ಯ ಮತ್ತು ತಾರತಮ್ಯ ನೀತಿಯನ್ನು ಖಂಡಿಸಿ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. 2024-25ರ ಸಾಲಿನ ಬಜೆಟ್ ನೋಡಿದ ನಂತರ ನಮಗೆ ಕೇಂದ್ರ ಸರ್ಕಾರದ ಮೇಲಿನ ವಿಶ್‌ವಾಸವೇ ಹೊರಟು ಹೋಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಈ ರೀತಿ ನಿರ್ಲಕ್ಷ್ಯಕ್ಕೊಳಗಾಗಿರುವ ಬಿಜೆಪಿಯೇತರ ಪಕ್ಷಗಳ ಆಡಳಿತದ ರಾಜ್ಯಗಳ ಜೊತೆ ಸೇರಿ ಕೇಂದ್ರ ಸರ್ಕಾರದ ತಾರತಮ್ಯ ನೀತಿ ಮತ್ತು ಸೇಡಿನ ರಾಜಕಾರಣದ ವಿರುದ್ಧ ಹೋರಾಟನಡೆಸಲಾಗುವುದು.
Union Budget 2024: ನಿರ್ಮಲಾ ರಾಜ್ಯಕ್ಕೆ ಚೊಂಬು ಕೊಟ್ಟಿದ್ದಾರೆ: ಸಿಎಂ ಸಿದ್ದರಾಮಯ್ಯ
ಈ ಹೋರಾಟದಲ್ಲಿ ಕೇಂದ್ರ ಸರ್ಕಾರದ ಕರ್ನಾಟಕ ವಿರೋಧಿ ನಿಲುವಿನ ಬಗ್ಗೆ ಅಸಮಾಧಾನಗೊಂಡಿರುವ ರಾಜ್ಯದ ಜನತೆ ನಮ್ಮ ಜೊತೆ ನಿಲ್ಲಲಿದ್ದಾರೆ. ಈ ನಿಟ್ಟಿನಲ್ಲಿ ಮೊದಲ ಹಂತದ ಹೋರಾಟವಾಗಿ ನೀತಿ ಆಯೋಗದ ಸಭೆ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಇದೇ ವೇಳೆ, ತಮಿಳುನಾಡು ಮುಖ್ಯ ಮಂತ್ರಿ ಎಂ. ಕೆ.ಸ್ಟಾಲಿನ್ ಹಾಗೂ ಇಂಡಿಯಾ ಮೈತ್ರಿಕೂಟದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಹ ನೀತಿ ಆಯೋಗದ ಸಭೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.