
ಬೆಂಗಳೂರು (ಅ.18): ರಾಜ್ಯದ ಜನರ ಸಮಸ್ಯೆಗಳನ್ನು ತಿಳಿದು ಯೋಜನೆ ರೂಪಿಸುವ ಸಲುವಾಗಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಮಾಡಲಾಗುತ್ತಿದ್ದು, ಎಲ್ಲರೂ ತಪ್ಪದೆ ಭಾಗವಹಿಸಬೇಕು. ಕೆಲ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಸಮೀಕ್ಷೆ ವಿರುದ್ಧ ಮಾಡುತ್ತಿರುವ ಅಪಪ್ರಚಾರದ ಬಗ್ಗೆ ಯಾರೂ ಕಿವಿಗೊಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜನರಲ್ಲಿ ಮನವಿ ಮಾಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಸರಣಿ ಪೋಸ್ಟ್ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕುರಿತು ಎದ್ದಿರುವ ಗೊಂದಲ ಮತ್ತು ನಡೆಯುತ್ತಿರುವ ಅಪಪ್ರಚಾರ ನಿವಾರಣೆಗೆ ಪ್ರಯತ್ನಿಸಿದ್ದಾರೆ. ಈ ದಿಸೆಯಲ್ಲಿ ಸರಣಿ ಪ್ರಶ್ನೆಗಳು ಹಾಕಿಕೊಂಡು ಅದಕ್ಕೆ ಉತ್ತರ ರೂಪದ ವಿವರಣೆ ನೀಡಲಾಗಿದೆ. ಈ ವಿವರಣೆ ನೀಡುವ ಸಂದರ್ಭದಲ್ಲಿ ಸಮೀಕ್ಷೆಯಲ್ಲಿ 60 ಪ್ರಶ್ನೆಗಳಿರುವುದನ್ನು ಕೆಲ ರಾಜಕಾರಣಿಗಳು ಸ್ವಾರ್ಥಕ್ಕಾಗಿ ವಿರೋಧಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ನಿವಾಸಕ್ಕೆ ಬಂದಿದ್ದ ಸಮೀಕ್ಷೆದಾರರಿಗೆ 60 ಪ್ರಶ್ನೆಗಳು ಏಕಿವೆ ಎಂದು ಪ್ರಶ್ನಿಸಿದ್ದರು. ಇದೀಗ ಮುಖ್ಯಮಂತ್ರಿ ಇಂಥ ಪ್ರಶ್ನೆ ಕೇಳುತ್ತಿರುವವರು ಸ್ವಾರ್ಥ ರಾಜಕಾರಣಿಗಳು ಎಂದಿರುವುದು ಕುತೂಹಲ ಮೂಡಿಸಿದೆ.
ಪೋಸ್ಟ್‌ನಲ್ಲಿ ಏನಿದೆ?: ಸಮೀಕ್ಷೆಯ ಪ್ರಶ್ನಾವಳಿಯಲ್ಲಿ ಸಾಮಾಜಿಕ ಸೂಚಕಗಳಿವೆ. ಕೇಂದ್ರ ಸರ್ಕಾರದಿಂದಾಗುವ ಸಮೀಕ್ಷೆ, ನೀತಿ ಆಯೋಗದ ಸಮೀಕ್ಷೆ, ಜನಸಂಖ್ಯೆ ಸರ್ವೆ ಹೀಗೆ ಎಲ್ಲದರಲ್ಲೂ ಇದೇ ರೀತಿಯ ಪ್ರಶ್ನೆಗಳಿರುತ್ತವೆ. ಆಯಾ ಭೌಗೋಳಿಕ ಪ್ರದೇಶದಲ್ಲಿರುವ ಸಮಸ್ಯೆಗಳ ಕುರಿತ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರಿಂದ ಜನರ ಸಮಸ್ಯೆ ತಿಳಿದುಕೊಂಡು ರಾಜ್ಯ ಸರ್ಕಾರ ಯೋಜನೆ ರೂಪಿಸಲು ಸಾಧ್ಯವಾಗಲಿದೆ ಎಂದು ಪೋಸ್ಟ್‌ನಲ್ಲಿ ವಿವರಿಸಲಾಗಿದೆ.
ಅದರ ಜತೆಗೆ ಸಮೀಕ್ಷೆಯಲ್ಲಿ ಭಾಗಿಯಾದರೆ ಪಡಿತರ ಚೀಟಿ ರದ್ದಾಗುತ್ತದೆಯೇ? ಸಮೀಕ್ಷೆಯಿಂದ ಯಾರಿಗೆ ಅನುಕೂಲವಾಗುತ್ತದೆ? ಹಿಂದುಳಿದ ವರ್ಗಗಳ ಆಯೋಗವೇ ಏತಕ್ಕಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತದೆ ಎಂಬಂತಹ ಅನುಮಾನಗಳಿಗೂ ಉತ್ತರ ನೀಡಿದ್ದಾರೆ. ಜತೆಗೆ ಸಮೀಕ್ಷೆ ವಿರುದ್ಧ ಕರಪತ್ರ ಹಂಚಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಎಚ್ಚರ ವಹಿಸುವಂತೆಯೂ ಜನರಿಗೆ ಕರೆ ನೀಡಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದರಿಂದ ಯಾರ ಪಡಿತರ ಚೀಟಿಯೂ ರದ್ದಾಗುವುದಿಲ್ಲ. ಬದಲಿಗೆ ಸಮೀಕ್ಷೆಯಿಂದ ಜನರ ಸಮಸ್ಯೆಗಳು, ಅವಕಾಶ ವಂಚಿತರನ್ನು ಗುರುತಿಸಿ ರಾಜ್ಯ ಸರ್ಕಾರ ಸೂಕ್ತ ಯೋಜನೆಗಳನ್ನು, ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ. ಹೀಗಾಗಿ ಎಲ್ಲರೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಯಾರ ಮಾತಿಗೂ ಕಿವಿಗೊಡಬಾರದು ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.