ಕೌಶಲ್ಯ ತರಬೇತಿ ನೀಡಿದಾಕ್ಷಣ ಯುವನಿಧಿ ಯೋಜನೆ ನಿಲ್ಲಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Published : Oct 18, 2025, 07:39 AM IST
Siddaramaiah

ಸಾರಾಂಶ

ಕೌಶಲ್ಯ ತರಬೇತಿ ನೀಡಿದಾಕ್ಷಣ ಯುವನಿಧಿ ಯೋಜನೆ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಬೃಹತ್‌ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರು (ಅ.18): ಕೌಶಲ್ಯ ತರಬೇತಿ ನೀಡಿದಾಕ್ಷಣ ಯುವನಿಧಿ ಯೋಜನೆ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಬೃಹತ್‌ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದಿಂದ ಎರಡು ವರ್ಷ ಯುವನಿಧಿ ಕೊಡಲಾಗುವುದು. ಹಾಗಂತ, ಯಾರು ಕೌಶಲ್ಯಾಭಿವೃದ್ಧಿ ಅಡಿಯಲ್ಲಿ ಬರುತ್ತಾರೆ ಅವರಿಗೆ ಈ ಯೋಜನೆಯನ್ನು ನಿಲ್ಲಿಸುವುದಿಲ್ಲ. ಈ ಬಗ್ಗೆ ಯಾರೂ ಕೂಡ ತಪ್ಪಾಗಿ ಭಾವಿಸಬಾರದು. ನೋಂದಣಿಯಾದ ನಂತರ ಎರಡು ವರ್ಷ ಯುವ ನಿಧಿ ಹಣ ಬರಲಿದೆ. ಉದ್ಯೋಗ ದೊರಕಿದ ನಂತರ ಯೋಜನೆ ನಿಲ್ಲುತ್ತದೆ ಎಂದರು.

ಉದ್ಯೋಗ ಸಿಕ್ಕಿದರೆ ಮಾತ್ರ ಯೋಜನೆ ನಿಲ್ಲುತ್ತದೆಯೇ ಹೊರತು ಕೌಶಲ್ಯ ತರಬೇತಿಗೆ ನಿಲ್ಲುವುದಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದಲೇ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು. ಮೈಸೂರಿನಲ್ಲಿ ಆಯೋಜಿಸಿರುವಂತೆ ಎಲ್ಲಾ ವಿಭಾಗ ಮಟ್ಟದಲ್ಲಿಯೂ ಉದ್ಯೋಗ ಮೇಳ ನಡೆಸಲಾಗುತ್ತದೆ. ಬಹಳ ಮಂದಿ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಇಲ್ಲದೆ ಬಹಳ ಕಷ್ಟ ಪಡುತ್ತ ಇರುತ್ತಾರೆ. ಆದ್ದರಿಂದ ಎಲ್ಲಾ ಜಿಲ್ಲೆಗಳಲ್ಲಿಯೂ ಉದ್ಯೋಗ ಮೇಳ ಮಾಡಬೇಕು ಎಂದು ನಮ್ಮ‌ ಸರ್ಕಾರ ಎಲ್ಲಾ ಕಡೆಯೂ ಈ ಕಾರ್ಯಕ್ರಮ ಮಾಡುತ್ತಿದೆ ಎಂದರು.

ಇಂದು ಮೈಸೂರಿನಲ್ಲಿ 43 ಸಾವಿರ ಮಂದಿ ನಿರುದ್ಯೋಗಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರೆಲ್ಲರಿಗೂ ಕೂಡ ಉದ್ಯೋಗ ಕೊಡುವ ಪ್ರಯತ್ನ ಮಾಡುತ್ತೇವೆ. ಈ ಹಿಂದಿನ ಸರ್ಕಾರ ಯಾವುದೇ ಉದ್ಯೋಗ ಮೇಳಗಳನ್ನು ಮಾಡಲಿಲ್ಲ. ಆದರೆ, ನಾವು ಕಳೆದ ಎರಡು ವರ್ಷದಲ್ಲಿ ಅನೇಕ ಉದ್ಯೋಗ ಮೇಳಗಳನ್ನು ಮಾಡಿದ್ದೇವೆ. ಈವರೆಗೆ 58,892 ಮಂದಿ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು, ಸುಮಾರು 11 ಸಾವಿರ ಮಂದಿಗೆ ಉದ್ಯೋಗ ಕೊಡಲಾಗಿದೆ. 22,800 ಮಂದಿಯ ಹೆಸರಿನ ಮತ್ತೊಂದು ಪಟ್ಟಿಯನ್ನು ಅಂತಿಮಗೊಳಿಸಿಕೊಂಡಿದ್ದೇವೆ ಎಂದರು. ಇದು ಖಾಸಗಿ ಕೈಗಾರಿಕಾ ಸಂಸ್ಥೆಗಳಿಗೆ ನಡೆಯುವ ನೇಮಕಾತಿ. ನಮ್ಮ ಸರ್ಕಾರದ ವತಿಯಿಂದ 28 ಸಾವಿರ ಉದ್ಯೋಗ ಭರ್ತಿ ಮಾಡಿದ್ದೇವೆ.

38 ಸಾವಿರ ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ. ಸರ್ಕಾರದಲ್ಲಿ ಒಟ್ಟು 7 ಲಕ್ಷ ಉದ್ಯೋಗವಿದೆ. ಉಳಿದಂತೆ, ಕೈಗಾರಿಕಾ ಸಂಸ್ಥೆಗಳು ಎಂತಹ ಅಭ್ಯರ್ಥಿಗಳನ್ನು ಕೇಳುತ್ತವೆಯೋ ಅಂತಹ ರೀತಿಯಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಲು ಕೌಶಲ್ಯಾಭಿವೃದ್ಧಿ ಇಲಾಖೆ ಮುಂದಾಗುತ್ತಿದೆ ಎಂದು ಹೇಳಿದರು. ಅಸಮಾನತೆ, ನಿರುದ್ಯೋಗ ಹೊಗಲಾಡಿಸಬೇಕಾದರೆ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಶಿಕ್ಷಣ ನೀಡಬೇಕು. ಅದಕ್ಕಾಗಿ ಯುವ ನಿಧಿ ಯೋಜನೆ ಅಡಿ ಪ್ರೋತ್ಸಾಹ ಧನ ನೀಡುತ್ತಿದ್ದೇವೆ. ಬಿಜೆಪಿಯವರಂತೆ ಕೊಟ್ಟ ಮಾತನ್ನು ತಪ್ಪಿಸಿಕೊಳ್ಳುವುದಿಲ್ಲ. ನರೇಂದ್ರ ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ, ಕೊಡಲಿಲ್ಲ ಎಂದು ಆರೋಪಿಸಿದರು.

ಇನ್ಫೋಸಿಸ್‌ನವರು ಏನು ಬೃಹಸ್ಪತಿಗಳೇ?

ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಗಣತಿಗೆ ಮಾಹಿತಿ ನೀಡಲು ನಿರಾಕರಿಸಿರುವ ಇನ್ಫೋಸಿಸ್‌ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರು ಬೃಹಸ್ಪತಿಗಳೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮೈಸೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ನಾರಾಯಣಮೂರ್ತಿ ಅವರು ಹಿಂದುಳಿದವರ ಸಮೀಕ್ಷೆ ಎಂದು ಭಾವಿಸಿದ್ದರೆ ಅದು ತಪ್ಪು. ಸಮೀಕ್ಷೆ ಹಿಂದುಳಿದವರಿಗಲ್ಲಾ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಇದು ಪ್ರತಿಯೊಬ್ಬರ ಸಮೀಕ್ಷೆ ಎಂದು 20 ಸಲ ಹೇಳಿದ್ದೇನೆ. ಈ ಸಮೀಕ್ಷೆ ಏನು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.

ಇನ್ಫೋಸಿಸ್ ಸಂಸ್ಥೆಯವರು ಅಂದರೆ ಅವರು ಬೃಹಸ್ಪತಿಗಳೇ? ಸರ್ಕಾರ ಮಾಡುತ್ತಿರುವುದು ಹಿಂದುಳಿದವರ ಸಮೀಕ್ಷೆಯಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಇದು ರಾಜ್ಯದ ಎಲ್ಲರನ್ನು ಒಳಗೊಂಡಂತೆ ಮಾಡುತ್ತಿರುವ ಸಮೀಕ್ಷೆ. ಸಮೀಕ್ಷೆಯನ್ನು ಹಿಂದುಳಿದವರ ಸಮೀಕ್ಷೆಯೆಂದು ಭಾವಿಸುವುದು ತಪ್ಪು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವೂ ಜಾತಿಗಣತಿಯನ್ನು ಮಾಡುತ್ತದೆ. ಆಗಲೂ ಇವರು ಸಹಕರಿಸುವುದಿಲ್ಲವೇ? ಅವರಿಗಿರುವ ತಪ್ಪು ಮಾಹಿತಿಯಿಂದಾಗಿ ಈ ರೀತಿ ಅಸಹಕಾರ ತೋರುತ್ತಿರಬಹುದು. ರಾಜ್ಯದಲ್ಲಿ ಸುಮಾರು 7 ಕೋಟಿ ಜನಸಂಖ್ಯೆಯಿದ್ದು, ಇದು ಈ ಜನರ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯಾಗಿದೆ ಎಂದರು.

ರಾಜ್ಯ ಸರ್ಕಾರ ಸಾರಿಗೆ ನಿಗಮದ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯಂತಹ ಕಲ್ಯಾಣ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಮಾಸಿಕ 2000 ರು. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ನೀಡುತ್ತಿದೆ. ಮೇಲ್ವರ್ಗದ ಮಹಿಳೆಯರು ಹಾಗೂ ಬಡತನ ರೇಖೆಗಿಂತ ಮೇಲೆ ಇರುವವರು ಇವುಗಳ ಪ್ರಯೋಜನ ಪಡೆಯುತ್ತಿಲ್ಲವೇ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!