ಅಪಪ್ರಚಾರ, ಬಿಟ್ಟಿ ಕೆಲಸಗಳಲ್ಲಿ ವಿಪಕ್ಷ ಬ್ಯುಸಿ: ಸಿಎಂ ಸಿದ್ದರಾಮಯ್ಯ ಆರೋಪ

Kannadaprabha News   | Kannada Prabha
Published : Jul 15, 2025, 09:56 AM IST
Karnataka Chief Minister Siddaramaiah (Photo/ANI)

ಸಾರಾಂಶ

ಗ್ಯಾರಂಟಿ ಯೋಜನೆ ಘೋಷಣೆಯಾದ ಮೇಲೆ ಇವರ ಬಳಿ ಹಣವಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಸುಳ್ಳು, ಅಪಪ್ರಚಾರ, ಬಿಟ್ಟಿ ಕೆಲಸಗಳಲ್ಲಿ ಅವರು ನಿರತರಾಗಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ವಿಜಯಪುರ (ಜು.15): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ವಿರೋಧ ಪಕ್ಷದವರು ಅಭಿವೃದ್ಧಿ ಕೆಲಸಗಳು ನಿಂತಿವೆ, ಗ್ಯಾರಂಟಿ ಯೋಜನೆ ಘೋಷಣೆಯಾದ ಮೇಲೆ ಇವರ ಬಳಿ ಹಣವಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಸುಳ್ಳು, ಅಪಪ್ರಚಾರ, ಬಿಟ್ಟಿ ಕೆಲಸಗಳಲ್ಲಿ ಅವರು ನಿರತರಾಗಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ತಾಲೂಕಿನ ವಿವಿಧ ಕಾಮಗಾರಿಗಳ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.

ಇಂಡಿ ಮತ್ತು ನಾಗಠಾಣ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮವನ್ನು ಸಂತೋಷದಿಂದ ಉದ್ಘಾಟಿಸಿದ್ದೇನೆ. ₹ 4559 ಕೋಟಿ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಾಗಿದೆ. ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಶಾಸಕರಾದ ಯಶವಂತರಾಯಗೌಡ ಪಾಟೀಲ, ವಿಠ್ಠಲ‌ ಕಟಕದೊಂಡ ಅವರ ಶ್ರಮವಿದೆ ಎಂದರು. ನನ್ನ ಮನವಿಗೆ ಓಗೊಟ್ಟು ಯಶವಂತರಾಯಗೌಡ, ವಿಠ್ಠಲ ಅವರನ್ನು ಗೆಲ್ಲಿಸಿದ್ದೀರಿ. ನಿಮಗೆ ಅಭಿನಂದನೆ.‌ ₹4157 ಕೋಟಿ ಹಣದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ₹410 ಕೋಟಿ ಹಣದ ಕಾಮಗಾರಿಗಳ‌ ಉದ್ಘಾಟನೆ ಸೇರಿ ಒಟ್ಟು ₹4559 ಕೋಟಿ ಹಣದ ಅಭಿವೃದ್ಧಿ ಮಾಡಿದ್ದೇವೆ ಎಂದು ವಿವರಿಸಿದರು.

ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ. ಜನರು ನಾವು ಏನೂ ಮಾಡಿಲ್ಲ‌ ಎಂದರೆ ತಲೆಬಾಗಿ ಒಪ್ಪಿಕೊಳ್ಳುತ್ತೇವೆ. ನಾವು ಅಭಿವೃದ್ಧಿ ಮಾಡಿದ್ದೇವೆ ಎಂದು ಜನ ಹೇಳಿದರೆ ನೀವು ರಾಜಕೀಯ ನಿವೃತ್ತಿ ಪಡೆಯಿರಿ. ಸುಮ್ಮನೆ ಕುಳಿತು ಅಪಪ್ರಚಾರ, ಸುಳ್ಳು ಹೇಳಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದರೆ, ಅದು ಸಾಧ್ಯವಿಲ್ಲ. ಇದಕ್ಕೆ ಇಲ್ಲಿ ಸೇರಿರುವ ನೀವೆ ಸಾಕ್ಷಿ. ಶಾಸಕ ಯಶವಂತರಾಯಗೌಡರು ನನಗೆ ಯಾವುದೇ ಹುದ್ದೆ ಬೇಡ, ಕ್ಷೇತ್ರದ ಜನತೆಗೆ ಅನುಕೂಲ ಆಗುವಂತೆ ಅಭಿವೃದ್ಧಿ ಮಾಡಿಕೊಡಿ ಸಾಕು ಎಂದಿದ್ದಾರೆ. ಇಲ್ಲಿನ ನೀರಾವರಿ ಯೋಜನೆಗೆ ₹3600 ಕೋಟಿ ಖರ್ಚು ಮಾಡುತ್ತಿದ್ದೇವೆ. ಹಿಂದೆ ಸಿಎಂ ಇದ್ದಾಗ ಎಂ.ಬಿ.ಪಾಟೀಲ ಸಚಿವರಾಗಿದ್ದಾಗ ₹70 ಸಾವಿರ ಕೋಟಿ ಖರ್ಚು ಮಾಡಿ ನೀರಾವರಿ ಯೋಜನೆಗಳನ್ನು ಮಾಡಿದ್ದಾರೆ. ಸಿದ್ಧೇಶ್ವರ ಸ್ವಾಮೀಜಿಗಳು ಬರದ ನಾಡು ಎಂದು ಕೊರಗುತ್ತಿದ್ದರು. ಅವರ ಆಸೆಯಂತೆ ಇಂದು ಜಿಲ್ಲೆಯನ್ನು ಬಹುತೇಕ ನೀರಾವರಿಯನ್ನಾಗಿಸಿದ್ದೇವೆ. ನಾವು ಎಲ್ಲ‌ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ನಾನು, ನೀವು ಹೇಳಿದಂತೆ ಕೇಳುತ್ತೇನೆ ಎಂದು ಭರವಸೆ ನೀಡಿದರು.

ಇಂಡಿ ಲಿಂಬೆ ಬೆಳೆಯುವ‌ ಪ್ರದೇಶ. ನಾನು ಬರಗಾಲ ಬಿದ್ದಾಗ ಒಮ್ಮೆ ಬಂದಿದ್ದಾಗ ಲಿಂಬೆ ಗಿಡಗಳನ್ನು ಕಿತ್ತು ಹಾಕುತ್ತಿದ್ದರು. ಆದರೆ ನಾನು ಶಾಶ್ವತ ಪರಿಹಾರ ಕಲ್ಪಿಸುತ್ತೇನೆ ಎಂದು ಹೇಳಿದ್ದೆ. ಅದಕ್ಕಾಗಿ ಇಲ್ಲಿಯೇ ಲಿಂಬೆ ಅಭಿವೃದ್ಧಿ ಮಂಡಳಿ‌ ಮಾಡಿದ್ದೇನೆ. ನಾವು ಅಧಿಕಾರಕ್ಕೆ ಬಂದ ಮೇಲೆ ₹500 ಕೋಟಿ ಜನ ಉಚಿತವಾಗಿ ಪ್ರಯಾಣಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯಲ್ಲಿ ₹1.23 ಕೋಟಿ ಕುಟುಂಬಗಳ ಯಜಮಾನಿಯರಿಗೆ ₹2 ಸಾವಿರ ಕೊಡುತ್ತಿದ್ದೇವೆ. ಈ ಬಾರಿ ಬಜೆಟ್ ಹಣ ₹4.9 ಲಕ್ಷ ಕೋಟಿ ಇದೆ‌. ನಾನು ಅಂಕಿ ಅಂಶ ಕೊಡುವಾಗ ಸುಳ್ಳು ಹೇಳೋದಿಲ್ಲ. ನಾನು ಹೇಳೋದು ಸುಳ್ಳಾಗಿದ್ದರೆ ಬಿಜೆಪಿ, ಜೆಡಿಎಸ್‌ನವರು ಲೆಕ್ಕ‌ ಕೊಡಲಿ ಎಂದು ಸವಾಲು ಹಾಕಿದರು.

ಕೆಲಸ ಮಾಡಿಸಿಕೊಳ್ಳುವುದು ಹೇಗೆ ಎಂಬುದು ನಿಮ್ಮ‌ ಶಾಸಕ ಯಶವಂತರಾಯಗೌಡರಿಗೆ ಗೊತ್ತಿದೆ. ಅವರನ್ನು ಕಂಡರೆ ಎಲ್ಲರಿಗೂ ಪ್ರೀತಿ ಇದೆ. ನನಗೂ ಪ್ರೀತಿ ಇದೆ. ಅವರು ಏನು ಹೇಳಿದರೂ ಆ ಕೆಲಸ ಮಾಡಿಕೊಟ್ಟಿದ್ದೇನೆ. ನಂಜುಂಡಪ್ಪ ವರದಿಯಲ್ಲಿ ಅತೀ ಹಿಂದುಳಿದ ತಾಲೂಕು ಇಂಡಿ ಎಂದು ಬಂದಿತ್ತು. ಆದರೆ ಈಗ ಗೋವಿಂದರಾವ ಅವರ ಸಮಿತಿ ವರದಿಯಲ್ಲಿ ಅತೀ ಹಿಂದುಳಿದ ಪ್ರದೇಶ ಎಂದು ಬರಲಿಕ್ಕಿಲ್ಲ. ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಈ ಭಾಗದ ರೈತರಿಗೆ, ಕಬ್ಬು ಬೆಳೆಗಾರರಿಗೆ ಸಹಾಯ ಮಾಡಲು ₹40 ಕೋಟಿ ಅನುದಾನವನ್ನು ಸರ್ಕಾರದಿಂದ ಕೊಟ್ಟಿದ್ದೇವೆ. ಇದನ್ನು ಮಾಡಿಸಿದ್ದು ಯಶವಂತರಾಯಗೌಡ ಪಾಟೀಲ ಎಂದು ಹೇಳಿದರು. ಈ ವೇಳೆ ಯಶವಂತರಾಯಗೌಡರನ್ನು ಸಚಿವರನ್ನಾಗಿಸಬೇಕು ಎಂದು ಜನರಿಂದ ಕೂಗು ಕೇಳಿಬಂತು, ಅದಕ್ಕೆ ಉತ್ತರಿಸಿದ ಸಿಎಂ, ಅವರೇ ಕೇಳುತ್ತಿಲ್ಲ, ನೀನ್ಯಾಕಯ್ಯಾ ಕೇಳುತ್ತಿಯಾ ಎಂದು ಭಾಷಣ ಮುಗಿಸಿದರು.

ಜನರ ಅಭಿವೃದ್ಧಿ ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರ ಮಾತ್ರ. ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಬಿಜೆಪಿ, ಜೆಡಿಎಸ್‌ನವರು ಹೇಳುತ್ತಿರುವುದು ಅಪ್ಪಟ ಸುಳ್ಳು. ನಮ್ಮ‌ ಸರ್ಕಾರ ಬಂದಾಗ ಯಾವತ್ತೂ ಖಜಾನೆ ಖಾಲಿಯಾದ ಉದಾಹರಣೆಯೇ ಇಲ್ಲ. ಈ ಬಾರಿ ₹593 ಭರವಸೆ ಕೊಟ್ಟಿದ್ದೆವು. ಎರಡೇ ವರ್ಷದಲ್ಲಿ 242 ಭರವಸೆ ಈಡೇರಿಸಿದ್ದೇವೆ. ಆದರೆ, ಬಿಜೆಪಿಯವರು 2018ರಲ್ಲಿ 600 ಭರವಸೆ ಕೊಟ್ಟಿದ್ದರು. ಅದರಲ್ಲಿ ಕೇವಲ ಶೇ.10ನಷ್ಟು ಈಡೇರಿಸಿದ್ದಾರೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ