ಕಾಂಗ್ರೆಸ್ ಒಳಜಗಳಕ್ಕೆ ಪ್ರತಿಪಕ್ಷ ಕಿಡಿ.. ನಾಯಕತ್ವವಿಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ: ಆರ್.ಅಶೋಕ್‌

Published : Dec 11, 2025, 06:38 AM IST
R Ashok

ಸಾರಾಂಶ

ಕಿತ್ತಾಟ, ನಾಯಕತ್ವ ಕೊರತೆಯಿಂದ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಹೇಳಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಬಣ ಕಿತ್ತಾಟದ ನಡುವೆ ಅಧಿಕಾರಿಗಳು ಮಜಾ ಮಾಡುತ್ತಿದ್ದಾರೆ.

ವಿಧಾನಸಭೆ (ಡಿ.11): ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ಉಂಟಾಗಿರುವ ಗೊಂದಲಗಳ ಬಗ್ಗೆ ವಿಧಾನಸಭೆಯಲ್ಲಿ ತೀವ್ರ ಚರ್ಚೆಯಾಗಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕಿತ್ತಾಟ, ನಾಯಕತ್ವ ಕೊರತೆಯಿಂದ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಹೇಳಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಬಣ ಕಿತ್ತಾಟದ ನಡುವೆ ಅಧಿಕಾರಿಗಳು ಮಜಾ ಮಾಡುತ್ತಿದ್ದಾರೆ. ನಾಯಕತ್ವ ಇಲ್ಲದಿದ್ದರೆ ರಾಜ್ಯದ ಅಭಿವೃದ್ಧಿ ಅಸಾಧ್ಯ. ಹೀಗಾಗಿ ಆದಷ್ಟು ಬೇಗ ಸಿಎಂ ಸ್ಥಾನದ ಬಗ್ಗೆ ಸೂಕ್ತ ತೀರ್ಮಾನ ಮಾಡಿಕೊಂಡು ಬನ್ನಿ ಎಂದು ಕರೆ ನೀಡಿದರು.

ಉತ್ತರ ಕರ್ನಾಟಕ ಕುರಿತ ಚರ್ಚೆ ವೇಳೆ ಈ ವಿಷಯ ಪ್ರಸ್ತಾಪಿಸಿದ ಅಶೋಕ್‌, ದಿನನಿತ್ಯ ಎರಡೂ ಬಣದವರು ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಹಾಗೂ ಡಿಸಿಎಂ ಅವರು ಇಡ್ಲಿ ವಡೆ ತಿಂದರೆ ಸಮಸ್ಯೆ ಬಗೆಹರಿಯುವುದಿಲ್ಲ. ಹಾದಿ ಬೀದಿಯಲ್ಲಿ ಸಿಎಂ ಬಗ್ಗೆ ಚರ್ಚಿಸುವುದು ಆ ಹುದ್ದೆಗೆ ಶೋಭೆ ತರಲ್ಲ. ನಿಮ್ಮ ಮನಸ್ಸುಗಳು ಒಂದಾಗಬೇಕು. ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ ನಿರ್ಧರಿಸಿ ಎಂದು ಹೇಳಿದರು. ಡಿ.ಕೆ.ಶಿವಕುಮಾರ್ ಅವರು ಪುಣ್ಯಕೋಟಿ ಕತೆ ಹೇಳುತ್ತಾರೆ. ಇದರಲ್ಲಿ ಹುಲಿ ಯಾರು? ಗೋವು ಯಾರು? ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಸೆ ಹೊಂದಿದ್ದಾರೆ. ಆದರೆ, ಬೆಕ್ಕು ಹುಲಿ ಆಗಬೇಕಾದರೆ ಮೊದಲು ಇಲಿ ತಿನ್ನುವುದನ್ನು ಬಿಡಬೇಕು ಎಂದು ಅಶೋಕ್‌ ಮಾರ್ಮಿಕವಾಗಿ ನುಡಿದರು.

ಬೈರತಿ-ಅಶೋಕ್‌ ವಾಗ್ವಾದ

ಮಾತು ಮುಂದುವರೆಸಿದ ಅಶೋಕ್‌, ಸಚಿವ ಬೈರತಿ ಸುರೇಶ್‌ ಅವರು ಕಿಂಗ್‌ ಈಸ್‌ ಅಲೈವ್‌ ಎನ್ನುತ್ತಾರೆ. ಸಿದ್ದರಾಮಯ್ಯ ಅವರು ಜೀವಂತವಾಗಿದ್ದಾರೆ. ಇಂಥ ವೇಳೆ ಇದನ್ನು ಹೇಳಿದರೆ ಅನುಮಾನ ಬರಲ್ಲವೇ? ಅವರ ಸ್ವಾಮಿ ನಿಷ್ಠೆಗೆ ನಮ್ಮ ಆಕ್ಷೇಪವಿಲ್ಲ. ಅದಕ್ಕೆ ತಕ್ಕ ಉಡುಗೊರೆ ಇರುತ್ತದೆ. ಆದರೆ ಇದರ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. ಮಧ್ಯಪ್ರವೇಶಿಸಿದ ಸಚಿವ ಬೈರತಿ, ಸಿದ್ದರಾಮಯ್ಯ ಅವರು ಗಟ್ಟಿ ಮುಟ್ಟಾಗಿದ್ದಾರೆ. ನಾನು ಹೇಳಿರುವ ಅರ್ಥ ಬೇರೆ. ನನಗೆ ಈಗಾಗಲೇ ಸಚಿವ ಸ್ಥಾನದ ಕೊಡುಗೆಯನ್ನು ಸಿಎಂ ನೀಡಿದ್ದಾರೆ. ಮುಂದಿನದು ಹೈಕಮಾಂಡ್‌ ನಿರ್ಧರಿಸುತ್ತದೆ. ನನ್ನ ನಿಯತ್ತು ಕಾಂಗ್ರೆಸ್‌ ಪಕ್ಷಕ್ಕೆ ಎಂದರು.

ಇದೇ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅಣ್ಣ-ತಮ್ಮಂದಿರ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಬೈರತಿ ಹೇಳಿದಾಗ ಬಿಜೆಪಿ ಸದಸ್ಯರು ಜೋರಾಗಿ ಕೂಗುತ್ತಾ ಛೇಡಿಸಿದರು. ಇದಕ್ಕೆ ಆಕ್ರೋಶಗೊಂಡ ಬೈರತಿ, ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಅದನ್ನು ನೋಡಿಕೊಳ್ಳಿ. ಅಶೋಕ್‌ ಸ್ಥಾನಕ್ಕೆ ಬರಲು ಅಶ್ವತ್ಥನಾರಾಯಣ್ ಪೈಪೋಟಿ ನಡೆಸುತ್ತಿದ್ದಾರೆ ಎಂದರು. ಈ ವೇಳೆ ಕೆಲ ಕಾಲ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆದಿದ್ದರಿಂದ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಸ್ಪೀಕರ್ ಅವರು ಮಧ್ಯಪ್ರವೇಶಿಸಿ ಉತ್ತರ ಕರ್ನಾಟಕ ಕುರಿತು ಚರ್ಚಿಸುವಂತೆ ಸೂಚಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ