ನಮ್ಮ ಅವಶ್ಯಕತೆಗಳಿಗೇ ನೀರಿಲ್ಲ, ಹೀಗಿರುವಾಗ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇಯಿಲ್ಲ. ಈ ಬಗ್ಗೆ ಸಕ್ಷಮ ಪ್ರಾಧಿಕಾರ, ಸಮಿತಿ ಹಾಗೂ ಸುಪ್ರೀಂಕೋರ್ಟ್‌ಗೆ ತಿಳಿಸಲಾಗುವುದು. ಅಲ್ಲದೆ, ಈ ಸಮಸ್ಯೆಗಳಿಗೆ ಮೇಕೆದಾಟು ಯೋಜನೆಯೊಂದೇ ಪರಿಹಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು (ಸೆ.14): ನಮ್ಮ ಅವಶ್ಯಕತೆಗಳಿಗೇ ನೀರಿಲ್ಲ, ಹೀಗಿರುವಾಗ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇಯಿಲ್ಲ. ಈ ಬಗ್ಗೆ ಸಕ್ಷಮ ಪ್ರಾಧಿಕಾರ, ಸಮಿತಿ ಹಾಗೂ ಸುಪ್ರೀಂಕೋರ್ಟ್‌ಗೆ ತಿಳಿಸಲಾಗುವುದು. ಅಲ್ಲದೆ, ಈ ಸಮಸ್ಯೆಗಳಿಗೆ ಮೇಕೆದಾಟು ಯೋಜನೆಯೊಂದೇ ಪರಿಹಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದಲ್ಲಿ ನಡೆದ ಸರ್ವ ಪಕ್ಷ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವ ಪಕ್ಷ ಸಭೆಯಲ್ಲಿ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳ ಪರಿಸ್ಥಿತಿಯನ್ನು ವಿವರಿಸಿದ್ದೇವೆ.
2024ರ ಜುಲೈವರೆಗೆ ರಾಜ್ಯಕ್ಕೆ 106 ಟಿಎಂಸಿ ಅಡಿಗಳಷ್ಟು ನೀರಿನ ಅವಶ್ಯಕತೆಯಿದ್ದು, ಸದ್ಯ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ 53 ಟಿಎಂಸಿ ಅಡಿಗಳಷ್ಟು ಮಾತ್ರ ನೀರಿದೆ. ಹೀಗಿರುವಾಗ ನಾವು ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಈ ಬಗ್ಗೆ ಕಾವೇರಿ ನೀರು ನಿರ್ವಹಣಾ ಸಮಿತಿ ಹಾಗೂ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ತಿಳಿಸುತ್ತೇವೆ.
ತಮಿಳುನಾಡಿಗೆ ನೀರು ಹರಿಸಿದರೆ ರೈತರಿಗೆ ಅನ್ಯಾಯ ಮಾಡಿದಂತೆ: ಬೊಮ್ಮಾಯಿ ಕಿಡಿ
ಜತೆಗೆ ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಸಿ ಪರಿಹಾರ ಸೂತ್ರಕ್ಕಾಗಿ ಮನವಿ ಮಾಡಲಾಗುವುದು. ಕಾವೇರಿ ನದಿಯಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ರಾಜ್ಯ ಮುಖ್ಯಮಂತ್ರಿಯಾಗಿ ನಾನೇ ಒಪ್ಪಿಕೊಳ್ಳುತ್ತೇನೆ ಎಂದರು. ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರದ ಗಮನಕ್ಕೆ ತರಲು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಸರ್ವ ಪಕ್ಷ ನಿಯೋಗ ಕೊಂಡೊಯ್ಯಲಾಗುವುದು. ಈ ಹಿಂದೆ ಆ ಬಗ್ಗೆ ಸಮಯ ಕೋರಿ ಪತ್ರ ಬರೆದಿದ್ದೆ. ಅವರು ಸಮಯ ಕೊಡಲಿಲ್ಲ. ಹೀಗಾಗಿ ಈಗ ಮತ್ತೊಮ್ಮೆ ಸಮಯ ಕೋರಿ ಪತ್ರ ಬರೆಯಲಿದ್ದೇವೆ.
ಗ್ಯಾರಂಟಿ ಯೋಜನೆಗಾಗಿ ರೈತರ ಬದುಕು ಬಲಿ ಕೊಡಬೇಡಿ: ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ
ಈವರೆಗೆ ರಾಜ್ಯದ ನೀರಾವರಿ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷವೂ ರಾಜಕೀಯ ಮಾಡಿಲ್ಲ. ಎಲ್ಲರೂ ಒಟ್ಟಿಗೆ ಬಂದಿದ್ದೇವೆ. ಈಗಲೂ ಅದೇ ರೀತಿ ಹೋಗುತ್ತೇವೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರೂ ಸರ್ಕಾರದ ಪರವಾಗಿ ಇರುವುದಾಗಿ ಹೇಳಿದ್ದಾರೆ ಎಂದು ಹೇಳಿದರು. ಇದೇ ವೇಳೆ ತಮಿಳುನಾಡು ಮುಖ್ಯಮಂತ್ರಿ ಜತೆ ಮಾತುಕತೆ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡು ಸಿಎಂ ಜತೆ ಮಾತನಾಡುವ ಯಾವುದೇ ಅವಶ್ಯಕತೆಯಿಲ್ಲ. ಅಲ್ಲದೆ ಅದರಿಂದ ಪ್ರಯೋಜನವೂ ಆಗುವುದಿಲ್ಲ ಎಂದರು.